ಮೈಸೂರು: ಮೈಸೂರು ಅರಮನೆ ಆವರಣದಲ್ಲಿರುವ ತ್ರಿನೇಶ್ವರಸ್ವಾಮಿ ದೇಗುಲ ಮಹಾ ಶಿವರಾತ್ರಿಗೆ ಸಜ್ಜಾಗಿದ್ದು, ಅಂತಿಮ ತಯಾರಿ ಆರಂಭಗೊಂಡಿದೆ.
ರಾಜಮನೆತನ ಕೊಡುಗೆ ನೀಡಿರುವ 11 ಕೆಜಿ ಚಿನ್ನದ ಕೊಳಗವನ್ನು ಮೈಸೂರು ಜಿಲ್ಲಾಡಳಿತದಿಂದ ಅರಮನೆ ಆಡಳಿತ ಮಂಡಳಿಗೆ ಹಸ್ತಾಂತರ ಮಾಡಿದೆ.
ಮೈಸೂರು ಜಿಲ್ಲಾ ಖಜಾನೆಯಿಂದ ತಹಸೀಲ್ದಾರ ನೇತೃತ್ವದಲ್ಲಿ ದೇವಾಲಯಕ್ಕೆ ಚಿನ್ನದ ಕೊಳಗ ತರಲಾಗಿದೆ. ಮೈಸೂರಿನ ತ್ರಿನೇಶ್ವರ ದೇವರಿಗೆ ಚಿನ್ನದ ಕೊಳಗ ತೊಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.
ಶನಿವಾರ ಬೆಳಗಿನ ಜಾವದಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಲಿದೆ. ಮುಂಜಾನೆ 4ರಿಂದ 6 ಗಂಟೆಯೊಳಗೆ ವಿಶೇಷ ಪೂಜೆ ಸಲ್ಲಿಸಿ, ಚಿನ್ನದ ಕೊಳಗ ಧರಿಸಿ ನಂತರ ಹೂವಿನ ಅಲಂಕಾರ ಮಾಡಿ, ರಾಜವಂಶಸ್ಥರ ಹೆಸರಿನಲ್ಲಿ ಮೊದಲ ಪೂಜೆ ಸಲ್ಲಿಸಲಾಗುತ್ತದೆ. ನಂತರ ಬೆಳಗ್ಗೆ 6 ಗಂಟೆಯಿಂದ ಭಕ್ತರ ದರ್ಶನಕ್ಕೆ ಪ್ರವೇಶಾವಕಾಶ ನೀಡಲಾಗುತ್ತದೆ.
ಚಿನ್ನದ ಕೊಳಗದ ವಿಶೇಷ
1952ರಲ್ಲಿ ಜಯಚಾಮರಾಜೇಂದ್ರ ಒಡೆಯರ್ ಈ ಚಿನ್ನದ ಕೊಳಗ ಮಾಡಿಸಿದ್ದರು. ಪುತ್ರ ಸಂತಾನಕ್ಕಾಗಿ ಹರಕೆ ಹೊತ್ತು ತ್ರೀನೇಶ್ವರ, ಶ್ರೀಕಂಠೇಶ್ವರ, ಮುಡುಕೊತೊರೆ ಮಲ್ಲಿಕಾರ್ಜುನೇಶ್ವರನಿಗೆ ಮೂರು ಚಿನ್ನದ ಕೊಳಗವನ್ನು ಒಡೆಯರ್ ನೀಡಿದ್ದರು. ನೋಡಲು ಈಶ್ವರನ ಹೋಲುವ ಕೊಳಗ ಅತ್ಯಾಕರ್ಷಕವಾಗಿದೆ. ಚಿನ್ನದ ಜಟಾಮುಕುಟ, ಕರ್ಣಕುಂಡಲ, ತಾಟಂಕ, ಎರಡು ಲೋಲಕ, ಎರಡು ಕೆಂಪು ಹರಳಿನ ಓಲೆಗಳು, ಹಣೆಯಲ್ಲಿ ಬೆಲೆಬಾಳುವ ಕೆಂಪು ಕಲ್ಲಿನ ತಿಲಕ, ಒಂದು ಸಣ್ಣ ಮೂಗುತಿ ಇರುವ ಒಂದು ಚಿನ್ನದ ಗಂಗೆಯನ್ನು ಒಳಗೊಂಡಿರುವಂತಹ ಚಿನ್ನದ ಕೊಳಗ ಇದಾಗಿದೆ.