ಮನೆ ರಾಜ್ಯ ಮೀಸಲಾತಿಗಾಗಿ ಮಾಡು ಇಲ್ಲವೆ ಮಡಿ ಹೋರಾಟ: ಬಸವಜಯ ಮೃತ್ಯುಂಜಯ ಸ್ವಾಮೀಜಿ

ಮೀಸಲಾತಿಗಾಗಿ ಮಾಡು ಇಲ್ಲವೆ ಮಡಿ ಹೋರಾಟ: ಬಸವಜಯ ಮೃತ್ಯುಂಜಯ ಸ್ವಾಮೀಜಿ

0

ರಾಮದುರ್ಗ (ಬೆಳಗಾವಿ ಜಿಲ್ಲೆ)- (Ramadurga)-ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವವರೆಗೂ ʻಮಾಡು ಇಲ್ಲವೆ ಮಡಿʼ ಹೋರಾಟ ಮಾಡಲಾಗುತ್ತಿದೆ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ (Basava Jaya Mrityunjaya Swamiji) ಹೇಳಿದರು.

ಪಟ್ಟಣದಲ್ಲಿ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ರಾಜ್ಯ ಸರ್ಕಾರದ 2ಎ ಮತ್ತು ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿಗೆ ಆಗ್ರಹಿಸಿ ನಡೆದ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಅವರು ಮಾತನಾಡಿದರು.

ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ವಿಚಾರದಲ್ಲಿ ಸರ್ಕಾರಗಳು ಕೇವಲ ಮನವಿ ಸ್ವೀಕರಿಸಿ ಕೈಬಿಡುತ್ತಿವೆ. ಈಗ 14 ದಿನಗಳ ಕೂಡಲಸಂಗಮದ ಸತ್ಯಾಗ್ರಹದ ನಂತರ ಮಾಡು ಇಲ್ಲವೆ ಮಡಿ’ ಮಾದರಿಯಲ್ಲಿ ಮೀಸಲಾತಿ ಹೋರಾಟ ತೀವ್ರಗೊಳಿಸಲಾಗಿದೆ ಎಂದರು.

ಶೈಕ್ಷಣಿಕ ಮತ್ತು ಉದ್ಯೋಗದಲ್ಲಿ ಮೀಸಲಾತಿಗಾಗಿ 27 ವರ್ಷಗಳಿಂದ ಹೋರಾಟ ನಡೆಸುತ್ತಿದ್ದರೂ ಸರ್ಕಾರಗಳು ಕೇವಲ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿವೆ. ಈಗಾಗಲೇ ಪಾದಯಾತ್ರೆ, ಪ್ರತಿಜ್ಞಾ ಸಮಾವೇಶ ಮತ್ತು ಸತ್ಯಾಗ್ರಹ ನಡೆಸಲಾಗಿದೆ. ಆದರೂ, ಸರ್ಕಾರ ಸ್ಪಂದಿಸುತ್ತಿಲ್ಲ. ಹಿಂದಿನ ಮುಖ್ಯಮಂತ್ರಿಯಂತೆ ಈಗಿನ ಮುಖ್ಯಮಂತ್ರಿ ಕೈಕೊಡಬಾರದು ಎಂದು ಹೋರಾಟ ತೀವ್ರಗೊಳಿಸಲಾಗಿದೆ ಎಂದರು.

ರಾಜ್ಯದ ಪ್ರತಿ ತಹಶೀಲ್ದಾರ್‌ ಕಚೇರಿ ಮುಂದೆ ಧರಣಿ ನಡೆಸಿ ಮನವಿ ಕೊಡುವುದು, ಜಿಲ್ಲಾಧಿಕಾರಿ ಕಚೇರಿ ಮುಂದೆ ಸತ್ಯಾಗ್ರಹ ನಡೆಸಲಾಗುವುದು. ಸರ್ಕಾರ ಇದಕ್ಕೂ ಮಣಿಯದಿದ್ದರೆ ಮುಖ್ಯಮಂತ್ರಿ ಮನೆ ಮುಂದೆ ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಇಲ್ಲಿನ ತೇರ್‌ ಬಜಾರ್‌ನಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ನಂತರ ಮಿನಿ ವಿಧಾನಸೌಧದಲ್ಲಿ ತಹಶೀಲ್ದಾರ್‌ಗೆ ಸ್ವಾಮೀಜಿ ಮತ್ತು ಮುಖಂಡರು ಮನವಿ ಸಲ್ಲಿಸಿದರು.