ಮನೆ ದೇವಸ್ಥಾನ ಮಾಲೇಕಲ್ ತಿರುಪತಿ

ಮಾಲೇಕಲ್ ತಿರುಪತಿ

0

ಶಿಲ್ಪ ಕಲೆಗಳ ತವರು ಹಾಸನ ಜಿಲ್ಲೆಯ ಅರಸೀಕೆರೆಯಿಂದ 3 ಕಿಲೋ ಮೀಟರ್ ದೂರದಲ್ಲಿರುವ ಪುಣ್ಯಕ್ಷೇತ್ರ ಮಾಲೇಕಲ್. ಮಾಲೇಕಲ್ ಶ್ರೀನಿವಾಸನ ನೆಲೆವೀಡು. ಹೀಗಾಗೇ ಇದು ಮಾಲೇಕಲ್ ತಿರುಪತಿ ಎಂದೇ ಖ್ಯಾತವಾಗಿದೆ. ಈ ಕ್ಷೇತ್ರಕ್ಕೆ ಭವ್ಯ ಇತಿಹಾಸವಿದೆ.

ಸುರುಗುರು ವಸಿಷ್ಠ  ಮಹರ್ಷಿಗಳು ಹಿರೇಕಲ್ ಬೆಟ್ಟ ಶ್ರೇಣಿಯ ಪ್ರಶಾಂತವಾದ ಈ ಪ್ರದೇಶದಲ್ಲಿ  ನಾರಾಯಣ ಮೂರ್ತಿ ಪ್ರತಿಷ್ಠಾಪಿಸಿ ಪೂಜಿಸಿ, ನೂರಾರು ವರ್ಷಗಳ ಕಾಲ ತಪವನ್ನಾಚರಿಸಿದರಂತೆ. ವಸಿಷ್ಠರಿಗೆ ಆಷಾಢ ಶುದ್ಧ ದ್ವಾದಶಿಯ ದಿನ ವಿಷ್ಣು ಇಲ್ಲಿ ದರ್ಶನವಿತ್ತನಂತೆ. ವಸಿಷ್ಠರು ತಪಸ್ಸಿದ್ಧಿ ಪಡೆದು ಹಿಂತಿರುಗಿದ ಬಳಿಕ, ಇಲ್ಲಿ ಅವರು ಪ್ರತಿಷ್ಠಾಪಿಸಿದ್ದ ವಿಗ್ರಹ ಪೂಜೆ, ಪುನಸ್ಕಾರವಿಲ್ಲದೆ ಹಲವು ವರ್ಷಗಳ ಕಾಲ ಇದ್ದು, ಕೊನೆಗೆ ಭೂಗರ್ಭ ಸೇರಿತಂತೆ.

ಕ್ರಿ.ಶ.12-13ನೇ ಶತಮಾನದಲ್ಲಿ ಚಿತ್ರದುರ್ಗದ ಪಾಳೆಯಗಾರನಾಗಿದ್ದ ತಿಮ್ಮಪ್ಪ ನಾಯಕನಿಗೆ ಸ್ವಾಮಿ ಸ್ವಪ್ನದಲ್ಲಿ ದರ್ಶನವಿತ್ತು, ತಾನು ಅರಸೀಕರೆ ಬಳಿಯ ಬೆಟ್ಟದಲ್ಲಿ ಇರುವುದಾಗಿ ತಿಳಿಸಿ, ತನಗೊಂದು ಗುಡಿ ಕಟ್ಟಿಸುವಂತೆ ಸೂಚಿಸಿದನಂತೆ.

ಸ್ವಾಮಿಯ ಆಣತಿಯಂತೆ ತಿಮ್ಮಪ್ಪನಾಯಕ ಕೈಯಲ್ಲಿ ತುಳಸಿ ಮಾಲೆ ಹಿಡಿದು ಸ್ವಾಮಿ ಕನಸಿನಲ್ಲಿ ಹೇಳಿದ ಮಾರ್ಗದಲ್ಲಿ ತೆರಳಿದಾಗ ಆತನ ಕೈಯಲ್ಲಿದ್ದ ತುಳಸಿ ಮಾಲೆ ಜಾರಿ ಕಲ್ಲಿನ ಮೇಲೆ ಬಿತ್ತು. ಆ ಸ್ಥಳದಲ್ಲಿ ವರಹ ಸ್ವಾಮಿಯ ವಿಗ್ರಹ ದೊರಕಿತಂತೆ. ಹೀಗಾಗೇ ಮಾಲೆ ಕಲ್ಲಿನ ಮೇಲೆ ಬಿದ್ದ ಈ ಕ್ಷೇತ್ರ ಮಾಲೇಕಲ್ ಎಂದು ಕರೆಸಿಕೊಂಡಿತು. ಇಲ್ಲಿ ಶ್ರೀನಿವಾಸದೇವರು ಇರುವ ಕಾರಣ ಇದು ಮತ್ತೊಂದು ತಿರುಪತಿಯಾಗಿ ಮಾಲೇಕಲ್ ತಿರುಪತಿಯಾಯ್ತು ಎನ್ನುತ್ತಾರೆ ಸ್ಥಳೀಯ ಹಿರಿಯರು.

ಬೆಟ್ಟದ ಮೇಲೆ ಶ್ರೀ ಲಕ್ಷ್ಮೀ ವೆಂಕಟೇಶ್ವರನ ದೇವಾಲಯವಿದ್ದು, ಇಲ್ಲಿಗೆ ಹೋಗಲು 1700 ಮೆಟ್ಟಿಲುಗಳಿವೆ. ಕೆಳಗೆ ಗೋವಿಂದರಾಜಸ್ವಾಮಿ ನೆಲೆಸಿದ್ದಾನೆ. ಪ್ರತಿ ವರ್ಷ ಶ್ರೀನಿವಾಸ ದೇವರಿಗೆ ಆಷಾಢ ಶುದ್ಧ ದ್ವಾದಶಿ ದಿನ ರಥೋತ್ಸವ ನಡೆಯುತ್ತದೆ. 1990ರಲ್ಲಿ ದೇವಾಲಯದ ಜೀರ್ಣೋದ್ಧಾರ ಮಾಡಲಾಗಿದೆ. ತಿರುಪತಿಯಲ್ಲಿ ನಡೆಯುವಂತೆಯೇ ಇಲ್ಲಿಯೂ ಬ್ರಹ್ಮೋತ್ಸವ, ಕಲ್ಯಾಣೋತ್ಸವ ಇತ್ಯಾದಿ ಕಾರ್ಯಕ್ರಮಗಳು ಜರುಗುತ್ತವೆ.

ಬೆಂಗಳೂರು – ಹೊನ್ನಾವರ ಹೆದ್ದಾರಿಯಲ್ಲಿ ಅರಸೀಕೆರೆ ಪಟ್ಟಣದಿಂದ ಎರಡು ಕಿಲೋ ಮೀಟರ್ ದೂರದಲ್ಲಿರುವ ಮಾಲೇಕಲ್ ಗೆ ಹೋಗಲು ನೇರ ಬಸ್ ಸೌಕರ್ಯವಿದೆ.

ಹಿಂದಿನ ಲೇಖನಬಾಕಿ ಇರುವ ವಾಹನ ಸಂಚಾರ ದಂಡ ಮೊತ್ತ ಪಾವತಿಗೆ ಶೇ.50ರಷ್ಟು ರಿಯಾಯಿತಿ
ಮುಂದಿನ ಲೇಖನರಾಯಚೂರಿನಲ್ಲಿರುವ ಕಣ್ಮನ ತಣಿಸುವ ಪ್ರವಾಸಿ ಸ್ಥಳಗಳು