ಬೆಂಗಳೂರು : ನಶೆಯಲ್ಲಿ ಮೊದಲ ಮಹಡಿಯಿಂದ ಬಿದ್ದು ವ್ಯಕ್ತಿ ಸಾವನ್ನಪ್ಪಿದ್ದ, ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತ್ಯಕ್ರಿಯೆ ವೇಳೆ ಪೊಲೀಸರು ಎಂಟ್ರಿ ಕೊಟ್ಟ ಬಳಿಕ ಕೊಲೆಯ ರಹಸ್ಯ ಬಯಲಾಗಿದೆ. ಮೃತನನ್ನು ಇನಾಯತ್ ಹಾಗೂ ಆರೋಪಿಯನ್ನು ಮಸೂರ್ ಅಹ್ಮದ್ ಎಂದು ಗುರುತಿಸಲಾಗಿದೆ. ಮೃತ ಇನಾಯತ್ ಮೆಕಾನಿಕ್ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದೆ.
ಕಳೆದ 11 ವರ್ಷಗಳಿಂದ ಬೆಂಗಳೂರಿನ ವಿವೇಕ ನಗರದ ಆಸ್ಟಿನ್ ಟೌನ್ನಲ್ಲಿ ತನ್ನ ಮಾವನ ಮನೆಯಲ್ಲಿ ಇನಾಯತ್ ವಾಸವಾಗಿದ್ದ. ಇತ್ತೀಚಿಗೆ ಕೌಟುಂಬಿಕ ಕಲಹದಿಂದಾಗಿ ಇನಾಯತ್ಗೆ ಡಿವೋರ್ಸ್ ಆಗಿತ್ತು. ಬಳಿಕ ಒಂಟಿಯಾಗಿ ವಾಸವಿದ್ದ. ಆದರೆ ಈಗೀಗ ಮಾವ ಮಸೂರ್ ಅಹ್ಮದ್ ಮನೆ ಖಾಲಿ ಮಾಡುವಂತೆ ಇನಾಯತ್ಗೆ ಕಿರುಕುಳ ನೀಡೋಕೆ ಶುರು ಮಾಡಿದ್ದ.
ಕಳೆದ ಭಾನುವಾರ ಮನೆಗೆ ಬಂದ ಇನಾಯತ್ ಮಾವ ಮಸೂರ್ ಅಹ್ಮದ್ ಇದೇ ವಿಚಾರಕ್ಕೆ ಗಲಾಟೆ ಮಾಡಿದ್ದಾರೆ. ಇಬ್ಬರು ಕೂಡ ಪರಸ್ಪರ ಜೋರು ಗಲಾಟೆ ಮಾಡ್ಕೊಂಡು, ಹೊಡೆದಾಡಿದ್ದಾರೆ. ಈ ಗಲಾಟೆಯಲ್ಲಿ ಇನಾಯತ್ಗೆ ಹಿಗ್ಗಾಮುಗ್ಗ ಥಳಿಸಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದ. ತಕ್ಷಣ ಅಲರ್ಟ್ ಆದ ಮಾವ ಮಸೂರ್ ಅಹ್ಮದ್ ಕುಟುಂಬಸ್ಥರಿಗೆ ಕಾಲ್ ಮಾಡಿ, ಇನಾಯತ್ ಕುಡಿದು ಫಸ್ಟ್ ಫ್ಲೋರ್ನಿಂದ ಬಿದ್ದು ಮೃತಪಟ್ಟಿದ್ದಾನೆ ಎಂದು ಹೇಳಿದ್ದ. ನಂತರ ಸಂಪ್ರದಾಯದಂತೆ ಅಂತ್ಯಕ್ರಿಯೆ ಮಾಡಲು ಕುಟುಂಬಸ್ಥರು ತೀರ್ಮಾನ ಮಾಡಿದರು.
ಮಸೀದಿಯಲ್ಲಿ ಪ್ರಾರ್ಥನೆ ಮಾಡಿ, ಇನ್ನೇನು ಮೃತದೇಹವನ್ನು ತೆಗೆದುಕೊಂಡು ಹೋಗಬೇಕು ಎನ್ನುವಾಗ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ. ಈ ವೇಳೆ ಪೋಸ್ಟ್ ಮಾರ್ಟಂ ರಿಪೋರ್ಟ್ನಲ್ಲಿ ಮೃತದೇಹದ ಹಲವು ಕಡೆಗಳಲ್ಲಿ ಗಾಯವಾಗಿದೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆ ಆರೋಪಿ ಮಸೂರ್ ಅಹ್ಮದ್ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಅನ್ನೋದು ಬೆಳಕಿಗೆ ಬಂದಿದೆ.















