ಮೈಸೂರು(Mysuru): ಜಿಂಕೆ ಮಾಂಸ ಮಾರಾಟ ಆರೋಪದ ಮೇಲೆ ಅರಣ್ಯ ಇಲಾಖೆ ವಶದಲ್ಲಿದ್ದ ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಘಟನೆ ಹೆಚ್’ಡಿ.ಕೋಟೆ ತಾಲೂಕಿನ ಹೊಸಹಳ್ಳಿ ಹಾಡಿಯಲ್ಲಿ ನಡೆದಿದೆ.
ಕರಿಯಪ್ಪ ಮೃತ ವ್ಯಕ್ತಿ.
ಅರಣ್ಯದಲ್ಲಿ ಅಕ್ರಮವಾಗಿ ಜಿಂಕೆಯನ್ನು ಕೊಂದು ಮಾಂಸ ಮಾರಾಟ ಮಾಡಿದ ಆರೋಪದ ಮೇರೆಗೆ ಕಳೆದ 3 ದಿನಗಳ ಹಿಂದೆ ಅರಣ್ಯ ಇಲಾಖೆಯವರು ಮೂವರು ಆರೋಪಿಗಳ ಪೈಕಿ ಪ್ರಸಾದ್ ಮತ್ತು ಮುನಿಯಪ್ಪ ಎಂಬುವವರನ್ನು ಬಂಧಿಸಿದ್ದರು. ಮತ್ತೊಬ್ಬ ಆರೋಪಿ ಕರಿಯಪ್ಪ ತಲೆಮರೆಸಿಕೊಂಡಿದ್ದರು. ಅವರನ್ನು ಎರಡು ದಿನಗಳ ಹಿಂದೆ ಬಂಧಿಸಲಾಗಿತ್ತು.
ಅರಣ್ಯ ಇಲಾಖೆಯ ವಶದಲ್ಲಿದ್ದ ಕರಿಯಪ್ಪ ವಿಚಾರಣೆ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಎಂದು ಅರಣ್ಯ ಇಲಾಖೆ ಸಿಬ್ಬಂದಿ ಹೇಳುತ್ತಿದ್ದಾರೆ. ಆದರೆ ಮೃತನ ಕುಟುಂಬದವರು ಅರಣ್ಯ ಇಲಾಖೆ ಸಿಬ್ಬಂದಿ ವಿಚಾರಣೆ ವೇಳೆ ಹಲ್ಲೆ ನಡೆಸಿದ್ದರಿಂದ ಸಾವನ್ನಪ್ಪಿದ್ದಾರೆ. ಇದು ಕೊಲೆ ಎಂದು ಆರೋಪಿಸಿ ಹೊಸಹಳ್ಳಿ ಹಾಡಿಯ ಜನ ಪ್ರತಿಭಟನೆ ನಡೆಸುತ್ತಿದ್ದಾರೆ.
ಮೃತ ವ್ಯಕ್ತಿಯ ಮೇಲೆ ಹಲ್ಲೆಯ ಗುರುತುಗಳಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.