ಮನೆ ಅಪರಾಧ ಮಂಡ್ಯ: ದೇಣಿಗೆ ಕೊಡುವ ಆಮಿಷವೊಡ್ಡಿ ನಕಲಿ ನೋಟು ಕೊಟ್ಟು 1.10 ಕೋಟಿ ದೋಚಿ ಆರೋಪಿ ಪರಾರಿ

ಮಂಡ್ಯ: ದೇಣಿಗೆ ಕೊಡುವ ಆಮಿಷವೊಡ್ಡಿ ನಕಲಿ ನೋಟು ಕೊಟ್ಟು 1.10 ಕೋಟಿ ದೋಚಿ ಆರೋಪಿ ಪರಾರಿ

0

ಮಂಡ್ಯ: ಶಿಕ್ಷಣ ಸಂಸ್ಥೆಗೆ 25 ಕೋಟಿ ದೇಣಿಗೆ ಕೊಡುವ ಆಮಿಷವೊಡ್ಡಿ ನಕಲಿ ನೋಟು ಕೊಟ್ಟು 1.10 ಕೋಟಿ ದೋಚಿ ಪರಾರಿಯಾಗಿರುವ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಶಿಂಷಾಪುರ ಗ್ರಾಮದಲ್ಲಿ ನಡೆದಿದೆ.

ಶಿಂಷಾಪುರದ ಮೇರಿ ವಂಚನೆಗೊಳಗಾದ ಮಹಿಳೆ.

ಸೂರ್ಯ ಎಂಬ ಅಪರಿಚಿತ ವ್ಯಕ್ತಿ ವಿರುದ್ಧ ವಂಚಿಸಿರುವ ಆರೋಪ ಕೇಳಿಬಂದಿದೆ.

ಮೇರಿ ಶ್ಯಾಲೋಮ್ ಎಜುಕೇಷನ್ ಚಾರಿಟಬಲ್ ಟ್ರಸ್ಟ್ ನಡೆಸುತ್ತಿದ್ದರು. ಇತ್ತೀಚೆಗೆ ಸೂರ್ಯ ಮೇರಿಗೆ ಕರೆ ಮಾಡಿ ಪರಿಚಯವಾಗಿದ್ದ. ಟ್ರಸ್ಟ್ ಗೆ 25 ಕೋಟಿ ರೂ. ದೇಣಿಗೆ ಕೊಡುತ್ತೇನೆ. ಬದಲಿಗೆ ತೆರಿಗೆ ಕಟ್ಟಲು ನಗದು ರೂಪದಲ್ಲಿ 1.10 ಕೋಟಿ ನಗದು ಕೊಡುವಂತೆ ಸೂರ್ಯ ಹೇಳಿದ್ದ. ಸೂರ್ಯನ ಮಾತು ನಂಬಿ ಮೇರಿ ಹಣ ಹೊಂದಿಸಿದ್ದರು.

ಕಾರೊಂದರಲ್ಲಿ ನಕಲಿ ನೋಟು ತುಂಬಿಕೊಂಡು ವಂಚಕ ಸೂರ್ಯ ಮೇರಿ ಮನೆಗೆ ಬಂದಿದ್ದು, ಔಪಚಾರಿಕ ಮಾತುಗಳನ್ನಾಡುತ್ತಾ ಮನೆಯವರಿಗೆಲ್ಲ ತಾನೇ ತಂದಿದ್ದ ಜ್ಯೂಸ್ ಕುಡಿಸಿದ್ದಾನೆ. ಕುಟುಂಬದವರೆಲ್ಲ ಪ್ರಜ್ಞೆ ತಪ್ಪುತ್ತಿದ್ದಂತೆ ಹಣದೊಂದಿಗೆ ಪರಾರಿಯಾಗಿದ್ದಾನೆ. ಪ್ರಜ್ಞೆ ಬಂದ ನಂತರ ಸೂರ್ಯನ ವಂಚನೆ ಬೆಳಕಿಗೆ ಬಂದಿದೆ. ತಕ್ಷಣ ಎಚ್ಚೆತ್ತ ಮೇರಿ ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಂಚಕನ ಪತ್ತೆಗೆ ಬಲೆ ಬೀಸಿದ್ದಾರೆ. ಮಳವಳ್ಳಿ ಡಿವೈಎಸ್ಪಿ ಪಿ.ಕೃಷ್ಣಪ್ಪ ನೇತೃತ್ವದಲ್ಲಿ ಆರೋಪಿ ಪತ್ತೆಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ.