ಬೆಂಗಳೂರು: ಸಾಲ ತೀರಿಸಲು ಹಾಗೂ ಶೋಕಿ ಜೀವನ ನಡೆಸುವುದಕ್ಕಾಗಿ ವಾಸವಿದ್ದ ಮನೆಯ ಮಾಲಕಿಯನ್ನೇ ಕೊಂದು ಚಿನ್ನದ ಸರ ಕಿತ್ತುಕೊಂಡ ಆರೋಪದಡಿ ಯುವತಿಯನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೆಂಗೇರಿಯ ಕೊನಸಂದ್ರದಲ್ಲಿ ವಾಸವಾಗಿರುವ ಮೋನಿಕಾ (24) ಬಂಧಿತ ಆರೋಪಿ.
ಮೇ 10ರಂದು ಮನೆ ಮಾಲಕಿ ದಿವ್ಯಾ ಅವರನ್ನು ಹತ್ಯೆಗೈದ ಆರೋಪದ ಮೇಲೆ ಅವರ ಪತಿ ಗುರುಮೂರ್ತಿ ನೀಡಿದ ದೂರಿನಡಿ ಪ್ರಕರಣ ದಾಖಲಿಸಿಕೊಂಡು, ಆರೋಪಿತೆಯನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೋಲಾರ ಮೂಲದ ಮೋನಿಕಾ ಎಸ್ಎಸ್ಎಲ್ಸಿ ಓದಿದ್ದು, ಕಳೆದ ಮೂರು ತಿಂಗಳಿಂದ ದಿವ್ಯಾ ಅವರ ಮನೆಯಲ್ಲಿ ಬಾಡಿಗೆಗೆ ಇದ್ದಳು. ಕಂಪೆನಿಯೊಂದರಲ್ಲಿ ಕಳೆದ ಒಂದು ವರ್ಷದಿಂದ ಡೇಟಾ ಎಂಟ್ರಿ ಕೆಲಸ ಮಾಡುತ್ತಿದ್ದು, ಇತ್ತೀಚೆಗೆ ಕೆಲಸ ತೊರೆದಿದ್ದಳು. ಒಬ್ಬಂಟಿಯಾಗಿ ವಾಸವಾಗಿದ್ದ ಈಕೆ ವಿಪರೀತ ಕೈ ಸಾಲ ಮಾಡಿಕೊಂಡಿದ್ದಳು. ಯುವಕನ ಜೊತೆ ಸಲುಗೆ ಕೂಡ ಬೆಳೆಸಿಕೊಂಡಿದ್ದಳು. ಯುವಕ ಆಗಾಗ ಮನೆಗೆ ಬಂದು ಹೋಗುತ್ತಿದ್ದ.
ಇತ್ತ ಕೋನಸಂದ್ರದಲ್ಲಿ ನಾಲ್ಕು ತಿಂಗಳ ಹಿಂದಷ್ಟೇ ಹೊಸದಾಗಿ ಗೃಹ ಪ್ರವೇಶ ಮಾಡಿದ್ದ ದಿವ್ಯಾ ಕುಟುಂಬ ವಾಸವಾಗಿತ್ತು. ಪತಿ ಗುರುಮೂರ್ತಿ, ಕೆಂಗೇರಿ ಉಪನಗರದ ಶಿವನಪಾಳ್ಯದಲ್ಲಿ ಸಲೂನ್ ಶಾಪ್ ನಡೆಸುತ್ತಿದ್ದರೆ, ದಿವ್ಯಾ ಗೃಹಿಣಿಯಾಗಿದ್ದರು. ಮನೆ ಮಾಲೀಕರ ಚಲನವಲನ ಗಮನಿಸಿದ್ದ ಯುವತಿ, ಹತ್ಯೆಗೆ ಸಂಚು ರೂಪಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಮೇ 10ರಂದು ಬೆಳಗ್ಗೆ ಮಾಲೀಕ ಗುರುಮೂರ್ತಿ ಎಂದಿನಂತೆ ಕೆಲಸಕ್ಕಾಗಿ ಮನೆ ತೊರೆದಿದ್ದರು. ಈ ವೇಳೆ ದಿವ್ಯಾ ಒಬ್ಬಂಟಿಯಾಗಿರುವುದನ್ನು ಅರಿತಿದ್ದ ಮೋನಿಕಾ, ಮನೆಯೊಳಗೆ ಮಾಲಕಿಯ ಕುತ್ತಿಗೆ ಬಿಗಿದು ಹತ್ಯೆ ಮಾಡಿದ್ದಾಲೆ. ಬಳಿಕ ಆಕೆಯ ಮೈಮೇಲಿದ್ದ 36 ಗ್ರಾಂ ಚಿನ್ನದ ಸರ ಕಿತ್ತುಕೊಂಡು ಸುಮ್ಮನಾಗಿದ್ದಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕೆಲಸಕ್ಕೆ ಹೋದ ಕೆಲವೇ ಗಂಟೆಗಳಲ್ಲಿ ಗುರುಮೂರ್ತಿ ನಿರಂತರವಾಗಿ ಫೋನ್ ಮಾಡಿದರೂ ದಿವ್ಯಾ ಕರೆ ಸ್ವೀಕರಿಸದಿದ್ದರಿಂದ ಆತಂಕಕ್ಕೆ ಒಳಗಾಗಿದ್ದ. ಏನೋ ಅಗಿರಬೇಕೆಂಬ ಭೀತಿಯಿಂದಲೇ ಮನೆಗೆ ಬಂದು ನೋಡಿದಾಗ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ. ಕುತ್ತಿಗೆ ಮೇಲೆ ಗಾಯದ ಗುರುತು ಇರುವುದು ಹಾಗೂ ಚಿನ್ನದ ಸರ ಇಲ್ಲದಿರುವುದನ್ನು ಕಂಡು ಪತ್ನಿಯನ್ನು ಯಾರೋ ಹತ್ಯೆ ಮಾಡಿದ್ದಾರೆಂದು ದೂರು ನೀಡಿದ್ದರು. ಅದರ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬಾಡಿಗೆಗಿದ್ದ ಯುವತಿಯನ್ನು ಬಂಧಿಸಿದ್ದಾರೆ.
ಕದ್ದ ಚಿನ್ನದ ಸರವನ್ನು ಅಂಗಡಿಯೊಂದರಲ್ಲಿ ಗಿರವಿ ಇಟ್ಟಿದ್ದಳು. ಅಲ್ಲದೇ, ಪೊಲೀಸರು ಬಂದು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂದು ತನಿಖೆ ಕೈಗೊಳ್ಳುವವರೆಗೂ ಯುವತಿ ಮನೆಯಲ್ಲೇ ಇದ್ದರೂ ತಾನೇನೂ ಮಾಡಿಲ್ಲವೆಂಬಂತೆ ನಟಿಸಿದ್ದಳು.
ತನಿಖೆ ಕೈಗೊಂಡ ಇನ್ಸ್ ಪೆಕ್ಟರ್ ಕೊಟ್ರೇಶಿ ನೇತೃತ್ವದ ತಂಡವು ಅನುಮಾನದ ಮೇರೆಗೆ ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ ಆರೋಪಿ ಯುವತಿ ಸತ್ಯ ಸಂಗತಿ ಬಾಯ್ಬಿಟ್ಟಿದ್ದಾಳೆ.
ಸದ್ಯ ಆರೋಪಿಯನ್ನು ಪೊಲೀಸ್ ವಶಕ್ಕೆ ಪಡೆದು, ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.