ವಾಷಿಂಗ್ಟನ್ : ಅಮೆರಿಕದ ನ್ಯೂಕ್ಯಾಸಲ್‌ನಲ್ಲಿ ಮರ್ಮಾಘಾತಕಾರಿ ಘಟನೆ ನಡೆದಿದೆ. ಕರ್ನಾಟಕದ ಮಂಡ್ಯ ಮೂಲದ ಟೆಕ್ ಉದ್ಯಮಿಯೊಬ್ಬರು ತಮ್ಮ ಪತ್ನಿ ಹಾಗೂ 14 ವರ್ಷದ ಪುತ್ರನನ್ನು ಗುಂಡು ಹಾರಿಸಿ ಬರ್ಬರವಾಗಿ ಹತ್ಯೆಗೈದು, ನಂತರ ತಾವು ಆತ್ಮಹತ್ಯೆಗೆ ಶರಣಾದ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಈ ಸಮಯದಲ್ಲಿ ದಂಪತಿಯ ಮತ್ತೊಬ್ಬ ಮಗ ಮನೆಯಲ್ಲಿ ಇಲ್ಲದ ಕಾರಣ ಬಚಾವ್ ಆಗಿದ್ದಾನೆ.
ಹತ್ಯೆಗೊಳಗಾದ ವ್ಯಕ್ತಿಗಳನ್ನು ಹರ್ಷವರ್ಧನ್ ಎಸ್. ಕಿಕ್ಕೇರಿ (57) ಹಾಗೂ ಅವರ ಪತ್ನಿ ಶ್ವೇತಾ ಪನ್ಯಂ (44) ಎಂದು ಗುರುತಿಸಲಾಗಿದೆ. ದಂಪತಿಯ 14 ವರ್ಷದ ಮಗನೂ ಈ ಕ್ರೂರ ಕೃತ್ಯಕ್ಕೆ ಬಲಿಯಾಗಿದ್ದಾನೆ. ಈ ವೇಳೆ ಅವರ ಇನ್ನೊಂದು ಮಗು ಮನೆಯಲ್ಲಿ ಇಲ್ಲದ ಕಾರಣ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದೆ. ಮೃತ ಬಾಲಕ ಮತ್ತು ಬದುಕುಳಿದ ಮಗನ ಹೆಸರುಗಳನ್ನು ಪೊಲೀಸರು ಬಹಿರಂಗಪಡಿಸಿಲ್ಲ.
ಅಮೆರಿಕದ ಸ್ಥಳೀಯ ಸಮಯದ ಪ್ರಕಾರ ಏಪ್ರಿಲ್ 24ರಂದು ಈ ದುರಂತ ಸಂಭವಿಸಿದ್ದು, ಘಟನೆ ನಡೆದ ತಕ್ಷಣವೇ ಸ್ಥಳೀಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ ದಂಪತಿಯ ನಡುವೆ ಯಾವುದೇ ಗಂಭೀರ ವೈಮನಸ್ಸುಗಳು ಕಂಡು ಬಂದಿಲ್ಲ ಎಂಬುದಾಗಿ ನೆರೆಹೊರೆಯವರು ಹೇಳಿದ್ದಾರೆ.
ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲ್ಲೂಕಿನ ಹರ್ಷವರ್ಧನ್, 2017ರಲ್ಲಿ ಅಮೆರಿಕದಿಂದ ಭಾರತಕ್ಕೆ ಹಿಂದಿರುಗಿ ಮೈಸೂರಿನಲ್ಲಿ “ಹೋಲೋವರ್ಡ್” ಎಂಬ ಟೆಕ್ ಕಂಪನಿಯನ್ನು ಸ್ಥಾಪಿಸಿದ್ದರು. ಅವರ ಪತ್ನಿ ಶ್ವೇತಾರೂ ಸಹ ಕಂಪನಿಯ ಸಹ-ಸಂಸ್ಥಾಪಕರಾಗಿದ್ದರು. ಆದರೆ 2022ರಲ್ಲಿ ಕೋವಿಡ್ ಸಂದರ್ಭದಲ್ಲಿ ಕಂಪನಿಯು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿ ಮುಚ್ಚಬೇಕಾಯಿತು.
ಹರ್ಷವರ್ಧನ್ ಯುಎಸ್‌ನ ಮೈಕ್ರೋಸಾಫ್ಟ್‌ನಲ್ಲಿ ಉದ್ಯೋಗ ನಿರ್ವಹಿಸಿದ್ದರು ಮತ್ತು ರೊಬೋಟಿಕ್ಸ್ ತಂತ್ರಜ್ಞಾನದಲ್ಲಿ ನಿಪುಣರಾಗಿದ್ದರು. ಗಡಿ ಭದ್ರತೆಗಾಗಿ ರೊಬೋಟ್ ಬಳಸುವ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದರು. ಸ್ಥಳೀಯ ಪೊಲೀಸರು ಈ ಸಂಬಂಧ ತನಿಖೆಯನ್ನು ಆರಂಭಿಸಿದ್ದು, ಈ ದಾರುಣ ಕೃತ್ಯಕ್ಕೆ ಹಿಂದಿನ ಕಾರಣಗಳು ಅಥವಾ ಮಾನಸಿಕ ಒತ್ತಡದ ಎಂಥದಾದರೂ ಹಿನ್ನೆಲೆಗಳಿವೆಯೇ ಎಂಬುದರ ಕುರಿತಾಗಿ ಅಧ್ಯಯನ ನಡೆಸುತ್ತಿದ್ದಾರೆ.














