ಮಂಡ್ಯ: ಮಳವಳ್ಳಿ ತಾಲ್ಲೂಕು ಹಲಗೂರು ಸಮೀಪದ ಬಸವನಬೆಟ್ಟದ ತಿರುವಿನಲ್ಲಿ ಕ್ಯಾಂಟರ್ ಮುಗುಚಿ ಮಹಿಳೆ ಸಾವನ್ನಪ್ಪಿದ್ದು, 30 ಹೆಚ್ಚು ಮಂದಿ ಗಾಯಗೊಂಡ ಘಟನೆ ಮಂಗಳವಾರ ಸಂಜೆ ನಡೆದಿದೆ. ಮಳವಳ್ಳಿ ಸಮೀಪದ ತಮ್ಮಡಹಳ್ಳಿ ಗ್ರಾಮದ ಮಂಗಳಮ್ಮ (50) ಮೃತ ಮಹಿಳೆ.
ತಮ್ಮಡಹಳ್ಳಿ ಗ್ರಾಮದ ಮಾರಮ್ಮ ದೇವಸ್ಥಾನಕ್ಕೆ ನೂತನ ಅರ್ಚಕನನ್ನು ಗುರುತಿಸಲು ಒಕ್ಕಲಿಗ ಮತ್ತು ಗಂಗಾ ಮತಸ್ಥ ಸಮುದಾಯಗಳ ಸುಮಾರು 200 ಕ್ಕೂ ಹೆಚ್ಚು ಮಂದಿ ಮೂರು ಕ್ಯಾಂಟರ್ ಗಳಲ್ಲಿ ಬಸವನಹಳ್ಳಿಗೆ ತೆರಳಿದ್ದರು.
ಹೆಬ್ಬೆಟ್ಟದ ಬಸವೇಶ್ವರ ಸ್ವಾಮಿ ದೇವಾಲಯದಲ್ಲಿ ಒಟ್ಟಾಗಿ ಪೂಜಾ ಕಾರ್ಯಕ್ರಮ ಮುಗಿಸಿ ಮಂಗಳವಾರ ಸಂಜೆ ವಾಪಸ್ ಬರುವಾಗ ಘಟನೆ ನಡೆದಿದೆ. ಕಡಿದಾದ ಪ್ರದೇಶದಲ್ಲಿ ಬ್ರೇಕ್ ಹಾಕಿದಾಗ ಕ್ಯಾಂಟರ್ ಮುಗುಚಿ ಬಿದ್ದಿದೆ.
ಗಾಯಾಳುಗಳನ್ನು ಮಳವಳ್ಳಿ ತಾಲ್ಲೂಕು ಆಸ್ಪತ್ರೆ ಮತ್ತು ಮಂಡ್ಯ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ. 2012 ರಲ್ಲಿ ಇದೇ ಸ್ಥಳದಲ್ಲಿ ಅಪಘಾತ ಸಂಭವಿಸಿ 13 ಮಂದಿ ಮೃತಪಟ್ಟಿದ್ದರು. ಸ್ಥಳದಲ್ಲಿ ತಡೆಗೋಡೆ ನಿರ್ಮಿಸಲು ಸ್ಥಳೀಯರು ಒತ್ತಾಯಿಸಿದ್ದರು. ಆದರೂ ತಡೆಗೋಡೆ ನಿರ್ಮಾಣಗೊಂಡಿರಲಿಲ್ಲ.
ದೇವರ ದರ್ಶನ ಮುಗಿಸಿ ಬರುತ್ತಿದ್ದ ವೇಳೆ ಕ್ಯಾಂಟರ್ ಉರುಳಿದೆ.ಸುಮಾರು 30 ರಿಂದ 35 ಜನಗಳಿಗೆ ಸಣ್ಣಪುಟ್ಟ ಗಾಯ ಮೂವರ ಸ್ಥಿತಿ ಚಿಂತಾ ಜನಕವಾಗಿದೆ.ಸ್ಥಳಕ್ಕೆ ಪೊಲೀಸರ ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ. ಹಲಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.