ಮಂಡ್ಯ: ತಾಂತ್ರಿಕ ದೋಷ-ವಿದ್ಯುತ್ ಸಮಸ್ಯೆಯಿಂದಾಗಿ ಪುನರಾರಂಭವಾದ ಒಂದೇ ವಾರಕ್ಕೆ ಮೈಶುಗರ್ ಕಾರ್ಖಾನೆ ಕಬ್ಬು ಅರೆಯುವಿಕೆ ನಿಲ್ಲಿಸಿದೆ.
ಮೈಶುಗರ್ ಸರ್ಕಾರಿ ಸ್ವಾಮ್ಯದ ಏಕೈಕ ಕಾರ್ಖಾನೆಯಾಗಿದ್ದು, ಜುಲೈ 6 ರಂದು ಕಬ್ಬು ಅರೆಯುವಿಕೆ ಕಾರ್ಯ ಆರಂಭವಾಗಿತ್ತು.
ಕಾರ್ಖಾನೆ ಪ್ರಾರಂಭಿಸಲು ರಾಜ್ಯ ಸರ್ಕಾರ 50 ಕೋಟಿ ಹಣ ಬಿಡುಗಡೆ ಮಾಡಿತ್ತು. ಯಂತ್ರೋಪಕರಣ ರಿಪೇರಿ ಮುಗಿಸಿ ಕಾರ್ಖಾನೆ ಆರಂಭಿಸಲಾಗಿತ್ತು. ಆದರೆ ಶನಿವಾರ ರಾತ್ರಿ ತಾಂತ್ರಿಕ ದೋಷ ಕಾರಣದಿಂದಾಗಿ ಕಾರ್ಖಾನೆ ಸ್ಥಗಿತಗೊಂಡಿದೆ.
ಕಾರ್ಖಾನೆಯ ಯಂತ್ರದಲ್ಲಿ ದೋಷ ಹಾಗೂ ವಿದ್ಯುತ್ ಲೈನ್ ಕಡಿತದಿಂದ ಕಬ್ಬು ಅರೆಯುವಿಕೆ ನಿಲ್ಲಿಸಲಾಗಿದೆ.
ರೈತರೊಂದಿಗೆ ಕಬ್ಬು ಅರೆಯಲು ಕಾರ್ಖಾನೆ ಒಪ್ಪಿಗೆ ಮಾಡಿಕೊಂಡಿದ್ದು, ಇದೀಗ ಕಾರ್ಖಾನೆ ಸ್ಥಗಿತದಿಂದ ರೈತರಲ್ಲಿ ಆತಂಕ ಶುರುವಾಗಿದೆ. ಮೈಶುಗರ್ ಕಾರ್ಖಾನೆ ವ್ಯಾಪ್ತಿಯಲ್ಲಿ ಸುಮಾರು 2ಲಕ್ಷ ಟನ್ ಗು ಹೆಚ್ಚು ಕಬ್ಬು ಬೆಳೆದು ನಿಂತಿದ್ದು, ಮುಂದೇನು ಎಂಬ ಪ್ರಶ್ನೆ ರೈತರಲ್ಲಿ ಕಾಡುತ್ತಿದೆ.
ಕಾರ್ಖಾನೆ ಸ್ಥಗಿತಗೊಂಡಿದ್ದರಿಂದ ರೈತರ ಕಬ್ಬು ತುಂಬಿದ ಎತ್ತಿನಗಾಡಿ, ಲಾರಿಗಳು ನಿಂತಲ್ಲೇ ನಿಂತಿದ್ದು, ಲಾರಿ, ಎತ್ತಿನಗಾಡಿ ಚಾಲಕರು ಕಾರ್ಖಾನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.