ಮನೆ ರಾಜಕೀಯ ಮಂಡ್ಯದ ಸೀಟು ಹಂಚಿಕೆ ಇನ್ನೂ ಅಂತಿಮವಾಗಿಲ್ಲ: ಸುಮಲತಾ ಅಂಬರೀಶ್

ಮಂಡ್ಯದ ಸೀಟು ಹಂಚಿಕೆ ಇನ್ನೂ ಅಂತಿಮವಾಗಿಲ್ಲ: ಸುಮಲತಾ ಅಂಬರೀಶ್

0

ನವದೆಹಲಿ: ಮಂಡ್ಯದ ಸೀಟು ಹಂಚಿಕೆ ಇನ್ನೂ ಅಂತಿಮವಾಗಿಲ್ಲ, ನಿಶ್ಚಿಂತೆಯಾಗಿರಿ ಯಾವುದೇ ನಿರ್ಧಾರ ಆಗಿಲ್ಲ ಎಂದು ಜೆ.ಪಿ ನಡ್ಡಾ ಅವರೇ ಹೇಳಿದ್ದಾರೆ ಎಂದು ಸಂಸದೆ ಸುಮಲತಾ ಅಚ್ಚರಿ ಹೇಳಿಕೆ ನೀಡಿದ್ದಾರೆ.

ಬಿಜೆಪಿ ರಾಷ್ಟ್ರೀಯ ನಾಯಕ ಜೆಪಿ ನಡ್ಡಾ ಅವರ ಜೊತೆ ಚರ್ಚೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸುಮಾಲತಾ ಅಂಬರೀಶ್, ಒಂದು ಸುದೀರ್ಘವಾದ ಚರ್ಚೆ ನಡೆಯಿತು. ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಅವರ ಜೊತೆ ಮಾತುಕತೆ ಮುಕ್ತಾಯವಾಗಿದೆ. ಮಂಡ್ಯದ ಬಗ್ಗೆ ಇನ್ನು ಯಾವುದೇ ನಿರ್ಧಾರ ಕೈಗೊಂಡಿಲ್ಲ. ಮಂಡ್ಯ ಕ್ಷೇತ್ರದಿಂದಲೇ ಟಿಕೆಟ್​ ಕೊಡಲು ನಾನು ಕೇಳಿದ್ದೇನೆ. ಮತ್ತೊಂದು ಸಭೆಯ ನಂತರ ನಿರ್ಧಾರವಾಗಲಿದೆ.

ನಿಮ್ಮನ್ನು ಮತ್ತು ನಿಮ್ಮ ಕಾರ್ಯಕರ್ತರನ್ನ ಯಾವುದೇ ಕಾರಣಕ್ಕೂ ಕೈಬಿಡುವ ಪ್ರಶ್ನೆ ಇಲ್ಲ ಎಂದು ಭರವಸೆ‌ ನೀಡಿದ್ದಾರೆ. ನನ್ನ ಮುಂದಿನ ನಿರ್ಧಾರವನ್ನ ಕ್ಷೇತ್ರಕ್ಕೆ ತೆರಳಿ ನಮ್ಮ ಕಾರ್ಯಕರ್ತರ ಜೊತೆ ಚರ್ಚೆ ಮಾಡಿ ನಿರ್ಧಾರ ಮಾಡುತ್ತೇನೆ. ನಾನು ಯಾವುದೇ ಕಾರಣಕ್ಕೂ ಬಿಜೆಪಿಯಿಂದ ದೂರ ಹೋಗುವ ಪ್ರಶ್ನೆ ಇಲ್ಲ. ನನ್ನ ಸಂಸತ್ ಅವಧಿ ಮುಕ್ತಾಯದ ನಂತರ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗುತ್ತೇನೆ ಎಂದರು.

ನನ್ನ ಸ್ಪರ್ಧೆ ಬಗ್ಗೆ ಇನ್ನೂ ನಿರ್ಧಾರ ಆಗಿಲ್ಲ. ನಿಶ್ಚಿಂತೆಯಾಗಿರಿ ಏನೂ ನಿರ್ಧಾರ ಆಗಿಲ್ಲ ಎಂದು ಜೆ.ಪಿ ನಡ್ಡಾ ಅವರೇ ಹೇಳಿದ್ದಾರೆ. ನಿಮ್ಮಂತಹ ನಾಯಕಿ ಬಿಜೆಪಿ ಪಕ್ಷಕ್ಕೆ ಬೇಕು. ಇಂದು ಮತ್ತೊಂದು ಸಭೆ ನಡೆಯಲಿದ್ದು, ಮಂಡ್ಯ ಬಗ್ಗೆ ಫೈನಲ್ ನಿರ್ಧಾರ ತಿಳಿಸುತ್ತೇವೆ ಎಂದು ನಡ್ಡಾ ಹೇಳಿದ್ದಾರೆ ಎಂದು ಸುಮಲತಾ ಅಂಬರೀಶ್ ಸ್ಪಷ್ಟಪಡಿಸಿದರು.

ಇನ್ನು, ನಾನು ಸ್ಪರ್ಧೆ ಮಾಡಬೇಕು ಅನ್ನೋದಕ್ಕಿಂತ ಮಂಡ್ಯದಲ್ಲಿ ಬಿಜೆಪಿ ಸ್ಪರ್ಧೆ ಮಾಡಬೇಕು. ಸ್ಪರ್ಧೆ ಮಾಡಿದ್ರೆ ಮಂಡ್ಯದಲ್ಲಿ ಬಿಜೆಪಿ ಬೇಸ್ ಉಳಿಯುತ್ತೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವ ವಿಚಾರ ಊಹಾಪೋಹ. ಯಾವ ಕ್ಷೇತ್ರ ಖಾಲಿ ಇರುತ್ತೆ ಅಲ್ಲಿ ನನ್ನ ಹೆಸರು ಜೋಡಿಸ್ತಿದ್ದಾರೆ. ಕಳೆದ ಬಾರಿ ಪಕ್ಷೇತರರವಾಗಿ ನಿಲ್ಲಿ ಎಂದು ಅಭಿಮಾನಿಗಳು ಹೇಳಿದ್ರು. ಮುಂದೆ ಯಾವುದೇ ನಿರ್ಧಾರ ಮಾಡುವುದಿದ್ದರೆ ಅವರನ್ನೇ ಕೇಳುತ್ತೇನೆ. ಮಂಡ್ಯದಲ್ಲಿ ಜೆಡಿಎಸ್ ಪಕ್ಷ ಸ್ಪರ್ಧೆ ಮಾಡ್ತಿವಿ ಅನ್ನೋದು ಸಹಜ. ಬಿಜೆಪಿ ಹೈಕಮಾಂಡ್ ಏನು ನಿರ್ಧಾರ ಮಾಡುತ್ತೆ ಅದನ್ನು ಬೆಂಬಲಿಗರೊಂದಿಗೆ ಚರ್ಚಿಸುತ್ತೇನೆ ಎಂದು ಹೇಳಿದರು.

ನನ್ನನ್ನು ಸಂಧಾನ ಮಾಡುವ ಪ್ರಯತ್ನ ಇಂದು ಆಗಿಲ್ಲ. ನಾಳೆ ಮಂಡ್ಯಕ್ಕೆ ಹೋಗಿ ಬೆಂಬಲಿಗರೊಂದಿಗೆ ಮಾತನಾಡುತ್ತೇನೆ. ಕಾರ್ಯಕರ್ತರನ್ನು ಬಿಟ್ಟು ಕೊಟ್ಟು ಯಾವುದೇ ನಿರ್ಧಾರ ಮಾಡುವುದಿಲ್ಲ ಎಂದಿದ್ದೇನೆ. ನಿಮ್ಮ ಬೆಂಬಲಿಗರನ್ನು ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿ ವರಿಷ್ಠರು ಭರವಸೆ ನೀಡಿದ್ದಾರೆ. ಪ್ರಧಾನಿ ಕಚೇರಿಯಿಂದ ಕರೆ ಮಾಡಿ ಅಮಿತ್ ಶಾ ಅವರ ಭೇಟಿ ಮಾಡೊಕೆ ಹೇಳಿದ್ದಾರೆ. ನಾಳೆಯೊಳಗೆ ಟೈಂ ಸಿಕ್ಕರೆ ಭೇಟಿ ಮಾಡುತ್ತೇನೆ. ಏನೇ ಆಗಲಿ ಬಿಜೆಪಿ ಹೈಕಮಾಂಡ್ ನಿರ್ಧಾರಕ್ಕೆ ನಾನು ಬದ್ಧವಾಗಿರುತ್ತೇನೆ ಎಂದು ಸುಮಲತಾ ಅಂಬರೀಶ್ ಸ್ಪಷ್ಟಪಡಿಸಿದರು.