ಮಂಗಳೂರು : ಧರ್ಮಸ್ಥಳ ವಿರುದ್ಧ ಅಪಪ್ರಚಾರ ಖಂಡಿಸಿ ಬಿಜೆಪಿ ಹಾಗೂ ಜೆಡಿಎಸ್ನಿಂದ ಧರ್ಮಸ್ಥಳ ಚಲೋ ಯಾತ್ರೆ ನಡೀತಿವೆ. ಇವತ್ತು ಹಾಸನದಿಂದ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಪಕ್ಷದಿಂದ ಸತ್ಯಯಾತ್ರೆ ಹೊರಟಿತ್ತು. ಜೆಡಿಎಸ್ನ ಶಾಸಕರು ಸೇರಿ 2000ಕ್ಕೂ ಹೆಚ್ಚು ಕಾರ್ಯಕರ್ತರು ಭಾಗಿಯಾಗಿದರು.
ಧರ್ಮಸ್ಥಳದಲ್ಲಿ ಜೆಡಿಎಸ್ ಸತ್ಯಯಾತ್ರೆ ಸಮಾವೇಶದಲ್ಲಿ ಮಾತನಾಡಿದ ನಿಖಿಲ್, ಇದು ರಾಜಕೀಯ ವೇದಿಕೆ ಅಲ್ಲ, ರಾಜಕೀಯ ಲಾಭದ ಲೆಕ್ಕಾಚಾರವೂ ಇಲ್ಲ. ಇಲ್ಲಿಗೆ ಯಾರೂ ರಾಜಕೀಯ ನಾಯಕರು-ಕಾರ್ಯಕರ್ತರಾಗಿ ಬಂದಿಲ್ಲ, ಎಲ್ಲರೂ ಭಕ್ತರಾಗಿ ಬಂದಿದ್ದೇವೆ ಎಂದರು.
ಧರ್ಮಸ್ಥಳ ಮಂಜುನಾಥ ಸ್ವಾಮಿ ಮುಂದೆ ಯಾವ ದುಷ್ಟ ಶಕ್ತಿಯೂ ಉಳಿಯಲ್ಲ. ಕ್ಷೇತ್ರದ ಆವರಣದ ಸುತ್ತಮುತ್ತ ಅಪಪ್ರಚಾರ-ಅನುಮಾನ ರೀತಿ ಬಿಂಬಿಸಿದ್ದಾರೆ. ತಾಳ್ಮೆಗೂ ಒಂದು ಮಿತಿ ಇದೆ, ನಾವು ಇನ್ನು ಕೈಕಟ್ಟಿ ಕೂರಲು ಆಗಲ್ಲ. ಖಾವಂದರಿಂದಾದ ಸಮಾಜ ಮುಖಿ ಕಾರ್ಯ ಸೂರ್ಯ-ಚಂದ್ರ ಇರುವರೆಗೂ ಅಜರಾಮರವಾಗಿದೆ.
ಕ್ಷೇತ್ರದ ಮೇಲೆ ನಿರಂತರ ಅಪಪ್ರಚಾರ, ನಿಂದನೆ, ಹುನ್ನಾರ ನಡೆದಿದೆ. ಒಬ್ಬಿಬ್ಬರಿಂದ ಈ ಕೆಲಸ ನಡೆದಿಲ್ಲ, ಇದರ ಹಿಂದೆ ದೊಡ್ಡ ಗುಂಪು ಇದೆ. ಕ್ಷೇತ್ರಕ್ಕೆ ಕೆಟ್ಡ ಹೆಸರು ತರಲು ವಿದೇಶಿ ಹಣ ಬಳಕೆಯಾಗಿರುವ ಅನುಮಾನ ಇದೆ. ಧರ್ಮಸ್ಥಳದ ವಿಚಾರದಲ್ಲಿ ಅನಾಮಧ್ಯೇಯ ದೂರು ಕೊಟ್ಟ ಕೂಡಲೇ ತರಾತರುಲಿಯಲ್ಲಿ ಎಸ್.ಐ.ಟಿ. ರಚನೆ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ ಕುಟುಂಬ ಜೀವನದುದ್ದಕ್ಕೂ ಶಿವನ ಭಕ್ತರಾಗಿದ್ದೇವೆ. ಜೆಡಿಎಸ್ ಪಕ್ಷ ನಿಮ್ಮ ಜೊತೆ ಇದೆ ಎಂದು ಕುಮಾರಸ್ವಾಮಿ ಖಾವಂದರಿಗೆ ನೈತಿಕ ಬೆಂಬಲ ನೀಡಿದ್ದಾರೆ. ಮಂಜುನಾಥ-ಅಣ್ಣಪ್ಪ ಸ್ವಾಮಿಯಿಂದ ದುಷ್ಟರ ಸಂಹಾರ ಗ್ಯಾರಂಟಿ ಆಗುತ್ತದೆ. ಅಪಪ್ರಚಾರದ ಹಿಂದಿರುವವರನ್ನು ಬಯಲಿಗೆಳೆಬೇಕಾದ್ರೆ, ಈ ಪ್ರಕರಣವನ್ನು ಎನ್ಐಎಗೆ ವಹಿಸಬೇಕು, ಆಗ ಮಾತ್ರ ಸತ್ಯದ ಅನಾವರಣ ಸಾಧ್ಯ ಎಂದು ಆಗ್ರಹಿಸಿದರು.















