ದಲಿತ ಸಮುದಾಯದವರ ಮನೆಗಳಿಗೆ ಬೆಂಕಿ ಹಚ್ಚಿದ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಗಂಗಾವತಿ ತಾಲ್ಲೂಕಿನ ಮರಕುಂಬಿ ಗ್ರಾಮದ ಮೇಲ್ಜಾತಿಯ 98 ಮಂದಿಗೆ ಎಸ್‌ಸಿ, ಎಸ್‌ಟಿ, ದೌರ್ಜನ್ಯ ತಡೆ ಕಾಯಿದೆ ಅಡಿ ಕೊಪ್ಪಳ ಜಿಲ್ಲಾ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ ತಲಾ ₹5,000 ದಂಡ ವಿಧಿಸುವ ಮೂಲಕ ಗುರುವಾರ ಮಹತ್ವದ ತೀರ್ಪು ಹೊರಡಿಸಿದೆ.
ಪರಿಶಿಷ್ಟ ಜಾತಿಯಲ್ಲಿನ ಮಾದಿಗ ಸಮುದಾಯಕ್ಕೆ ಸೇರಿದ ಭೀಮಯ್ಯ ಅವರು ನೀಡಿದ ದೂರಿನ ಅನ್ವಯ ಗಂಗಾವತಿ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ವಿಚಾರಣೆ ನಡೆಸಿದ ಕೊಪ್ಪಳ ಪ್ರಧಾನ ಜಿಲ್ಲಾ ಮತ್ತು ಸತ್ರ ಹಾಗೂ ವಿಶೇಷ ನ್ಯಾಯಾಧೀಶರಾದ ಸಿ ಚಂದ್ರಶೇಖರ್ ತೀರ್ಪು ಪ್ರಕಟಿಸಿದ್ದಾರೆ.
“ಪ್ರಕರಣದಲ್ಲಿ ಒಟ್ಟಾರೆ 117 ಆರೋಪಿಗಳ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲಾಗಿತ್ತು. ಇದರಲ್ಲಿ 98 ಮಂದಿಗೆ ಜೀವಾವಧಿ ಶಿಕ್ಷೆ, ಐವರಿಗೆ ಐದು ವರ್ಷ ಶಿಕ್ಷೆ ವಿಧಿಸಲಾಗಿದೆ. 11 ಮಂದಿ ಪ್ರಕರಣದ ವಿಚಾರಣಾ ಹಂತದಲ್ಲಿ ಸಾವನ್ನಪ್ಪಿದ್ದರು. ಇಬ್ಬರು ಬಾಲಾಪರಾಧಿಗಳನ್ನು ಬಾಲ ನ್ಯಾಯ ಮಂಡಳಿ ವಿಚಾರಣೆ ನಡೆಸುತ್ತಿದೆ” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.
98 ಅಪರಾಧಿಗಳಿಗೆ ಐಪಿಸಿ ಸೆಕ್ಷನ್ 436 ಜೊತೆಗೆ 149 ಅಡಿ, ಮೂವರು ಅಪರಾಧಿಗಳಿಗೆ ಅಕ್ರಮ ಕೂಟ ಕಟ್ಟಿಕೊಂಡು ಆಸ್ತಿಗೆ ಹಾನಿ ಮಾಡಿದಕ್ಕೆ ಐದು ವರ್ಷ ಶಿಕ್ಷೆ ಹಾಗೂ ತಲಾ ₹5,000 ದಂಡ ವಿಧಿಸಲಾಗಿದೆ.
ಮಾರಕಾಸ್ತ್ರಗಳ ಬಳಕೆ (ಸೆಕ್ಷನ್ 148), ಉದ್ದೇಶಪೂರ್ವಕ ಹಾನಿ (ಸೆಕ್ಷನ್ 323), ₹50ಗಿಂತ ಹೆಚ್ಚು ಹಾನಿ (ಸೆಕ್ಷನ್ 427)ಗೆ ಸಂಬಂಧಿಸಿದಂತೆ ತಲಾ ಒಂದು ವರ್ಷ ಶಿಕ್ಷೆ ಹಾಗೂ ₹2,000 ದಂಡ; ಅಕ್ರಮ ಕೂಟಕ್ಕೆ (ಸೆಕ್ಷನ್ 143) ಮೂರು ತಿಂಗಳು ಶಿಕ್ಷೆ ಹಾಗೂ ತಲಾ ₹500 ದಂಡ; ಅಕ್ರಮ ಕೂಟ ಕಟ್ಟಿಕೊಂಡು ದೊಂಬಿ (ಸೆಕ್ಷನ್ 147 ಜೊತೆಗೆ 149) ಸೃಷ್ಟಿಸಿದ್ದಕ್ಕೆ ಆರು ತಿಂಗಳು ಜೈಲು ಮತ್ತು ತಲಾ ₹1,000 ದಂಡ; ಎಸ್‌ಸಿ/ಎಸ್‌ಟಿ ದೌರ್ಜನ್ಯ ನಿಷೇಧ ಕಾಯಿದೆ 3(1) (xi) ಅಡಿ ಜಾತಿ ಆಧರಿಸಿ ಮಹಿಳೆಯ ಘನತೆಗೆ ಹಾನಿ ಮಾಡಿರುವ ಅಪರಾಧಕ್ಕೆ ಎರಡು ವರ್ಷ ಜೈಲು ತಲಾ ₹2,000 ದಂಡ; ಸೆಕ್ಷನ್ 3(1) (x) ಅಡಿ ಅಪರಾಧಕ್ಕೆ ಎರಡು ವರ್ಷ ಜೈಲು ಮತ್ತು ತಲಾ ₹2,000 ದಂಡ; 3(2)(iv) ಅಡಿ ಅಪರಾಧಕ್ಕೆ ಜೀವಾವಧಿ ಶಿಕ್ಷೆ ಹಾಗೂ ತಲಾ ₹5,000 ದಂಡ ವಿಧಿಸಲಾಗಿದೆ. ಈ ಎಲ್ಲ ಶಿಕ್ಷೆಯು ಏಕಕಾಲಕ್ಕೆ ಜಾರಿ ಬರಲಿದೆ ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.
ಇಬ್ಬರು ದೋಷಿಗಳು ಭೋವಿ ಸಮುದಾಯಕ್ಕೆ ಸೇರಿದ್ದು, ಒಬ್ಬ ನಾಯಕ ಸಮುದಾಯಕ್ಕೆ ಸೇರಿದ್ದಾನೆ. ಪ್ರಕರಣದಲ್ಲಿ ಇವರ ಪಾತ್ರ ರುಜುವಾತಾಗಿದ್ದು, ಅವರಿಗೆ ಎಸ್/ಎಸ್‌ಟಿ ಕಾಯಿದೆ ಅನ್ವಯಿಸುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ. ಮೂವರು ಆರೋಪಿಗಳು ಈಗಾಗಲೇ ಜೈಲು ಶಿಕ್ಷೆ ಪೂರ್ಣಗೊಳಿಸಿರುವುದರಿಂದ ಅವರನ್ನು ಬಿಡುಗಡೆಗೆ ಆದೇಶಿಸಲಾಗಿದೆ. ಕರ್ನಾಟಕ ಸಂತ್ರಸ್ತ ಪರಿಹಾರ ಯೋಜನೆ 2011ರ ಅಡಿ ಸಂತ್ರಸ್ತರಿಗೆ ಪರಿಹಾರ ನೀಡಲು ಆದೇಶಿಸಲಾಗಿದೆ. ಅಪರಾಧಿಗಳು ಹಿಂದೆ ಯಾವುದೇ ಪ್ರಕರಣದಲ್ಲಿ ದೋಷಿಗಳಾಗಿಲ್ಲ ಮತ್ತು ಯಾವುದೇ ಅಪರಾಧದಲ್ಲಿಯೂ ಭಾಗಿಯಾಗಿಲ್ಲ. ಆದರೆ, ಎಸ್‌ಸಿ/ಎಸ್‌ಟಿ ಕಾಯಿದೆ ಸೆಕ್ಷನ್ 3(2) (iv) ಅಡಿ ಕಡ್ಡಾಯವಾಗಿ ಶಿಕ್ಷೆ ಅನುಭವಿಸಬೇಕಿರುವುದರಿಂದ ಪ್ರೊಬೇಷನ್ ಆಫ್ ಅಫೆಂಡರ್ಸ್ ಕಾಯಿದೆ ಸೆಕ್ಷನ್ 4 ಅನ್ವಯಿಸುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.
“ಇಂಥ ಪ್ರಕರಣದಲ್ಲಿ ಅನುಕಂಪ ತೋರುವುದು ನ್ಯಾಯದ ಅಪಹಾಸ್ಯವಾಗಲಿದೆ. ಸಂತ್ರಸ್ತ ಮಹಿಳೆ ಮತ್ತು ಪುರುಷರು ಪರಿಶಿಷ್ಟ ಜಾತಿಗೆ ಸೇರಿದ್ದು, ಆರೋಪಿಗಳು ಮಹಿಳೆಯರ ಘನತೆಗೆ ಹಾನಿ ಮಾಡಿದ್ದಾರೆ. ಸಂತ್ರಸ್ತರಿಗೆ ದೊಣ್ಣೆ, ಕಲ್ಲು ಮತ್ತು ಇಟ್ಟಿಗೆಯಿಂದ ಹಲ್ಲೆ ನಡೆಸಿ ಗಾಯಗೊಳಿಸಿದ್ದಾರೆ. ಈ ಪ್ರಕರಣದಲ್ಲಿ ಉಲ್ಲೇಖಿತ ಕನಿಷ್ಠ ಶಿಕ್ಷೆಗಿಂತ ಹೆಚ್ಚು ಶಿಕ್ಷೆ ವಿಧಿಸಬೇಕಿದೆ. ಕಡಿಮೆ ಶಿಕ್ಷೆ ವಿಧಿಸಲು ಯಾವುದೇ ಸಮರ್ಥ ಮತ್ತು ಸೂಕ್ತ ಕಾರಣಗಳು ದಾಖಲೆಯಲ್ಲಿಲ್ಲ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
“ದೂರುದಾರ ಮತ್ತು ಘಟನೆಯಲ್ಲಿ ಗಾಯಾಳುಗಳಾಗಿರುವವರು ನುಡಿದಿರುವ ಸಾಕ್ಷ್ಯದಿಂದ ತಿಳಿಯುವುದೇನೆಂದರೆ ಇದು ಉದ್ದೇಶಪೂರ್ವಕ ಜಾತಿ ನಿಂದನೆಯಾಗಿದೆ. ಪ್ರಕರಣದಲ್ಲಿ ವಿವಿಧೋದ್ದೇಶ ಆರೋಪ ಕಂಡಿಲ್ಲ ಅಥವಾ ಭಿನ್ನಾಭಿಪ್ರಾಯ ಅಥವಾ ದೂರುದಾರರು ಅಥವಾ ಪ್ರಾಸಿಕ್ಯೂಷನ್ ಸಾಕ್ಷಿಗಳಲ್ಲಿ ವ್ಯತ್ಯಾಸವಿಲ್ಲ. ಅಲ್ಲದೇ, ಪಕ್ಷಕಾರರ ನಡುವೆ ಯಾವುದೇ ಭೂವಿವಾದಗಳು ಇಲ್ಲ. ಎಫ್‌ಐಆರ್ ದಾಖಲಿಸುವಾಗಲೂ ವಿಳಂಬವಾಗಿಲ್ಲ” ಎಂದು ನ್ಯಾಯಾಲಯವು ಆದೇಶದಲ್ಲಿ ವಿವರಿಸಿದೆ.
“ಗಾಯಾಳುಗಳಾಗಿರುವ ಸಾಕ್ಷಿಗಳು ನೀಡಿರುವ ಹೇಳಿಕೆಗಳಿಗೂ ದೂರುದಾರ ಭೀಮಯ್ಯ ನೀಡಿರುವ ಹೇಳಿಕೆಯಲ್ಲಿ ಯಾವುದೇ ವ್ಯತ್ಯಾಸ ಕಾಣುತ್ತಿಲ್ಲ. ಗಾಯಾಳು ಸಾಕ್ಷಿಗಳು ಒದಗಿಸಿರುವ ಸಾಕ್ಷಿಗೆ ತನ್ನದೇ ಆದ ಮಹತ್ವವಿದ್ದು, ಅದನ್ನು ಸಣ್ಣಪುಟ್ಟ ದೋಷ, ಮೌಖಿಕ ಸಾಕ್ಷಿ ನುಡಿಯುವಾಗ ವ್ಯತ್ಯಯವಾಗಿದೆ ಎಂದು ಸಾರಾಸಗಟವಾಗಿ ಬದಿಗೆ ಸರಿಸಲಾಗದು. ಸಾಕ್ಷಿಗಳೆಲ್ಲರೂ ಪರಿಶಿಷ್ಟ ಸಮುದಾಯಕ್ಕೆ ಸೇರಿದ್ದು, ಬಹುತೇಕರು ಅನಕ್ಷರಸ್ಥರು, ತಿಳಿವಳಿಕೆ ಇಲ್ಲದವರು ಮತ್ತು ಅವರಾರಿಗೂ ಜಗತ್ತಿನ ಜ್ಞಾನವಿಲ್ಲ” ಎಂದು ಆದೇಶದಲ್ಲಿ ಹೇಳಲಾಗಿದೆ.
“ಸಾಕ್ಷಿಗಳು ಅನಕ್ಷರಸ್ಥರು, ಹಳ್ಳಿಗಾಡಿನವರಾಗಿರುವುದರಿಂದ ಸಣ್ಣ ಪುಟ್ಟ ವ್ಯತ್ಯಾಸ ಹಾಗೂ ಸಾಕಷ್ಟು ಮಂದಿ ಆರೋಪಿಗಳು ಕೃತ್ಯ ನಡೆಯುವಾಗ ಹಾಜರಿದ್ದರಿಂದ ಪ್ರತಿಯೊಬ್ಬ ಆರೋಪಿ ಎಸಗಿರುವ ಕೃತ್ಯವನ್ನು ವಿವರಿಸದಿರುವುದನ್ನು ದೊಡ್ಡ ವ್ಯತ್ಯಾಸ ಎನ್ನಲಾಗದು. ಹೀಗಾಗಿ, ಗಾಯಾಳು ಸಾಕ್ಷಿಗಳ ಸಾಕ್ಷ್ಯವನ್ನು ಆಧರಿಸಬಹುದು ಮತ್ತು ಒಪ್ಪಬಹುದು” ಎಂದು ನ್ಯಾಯಾಲಯ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.
“ಮರಕುಂಬಿಯಲ್ಲಿ 28.08.2014ರಂದು ದಲಿತ ಸಮುದಾಯದವರ ಮೇಲೆ ನಡೆದ ಹಲ್ಲೆಯಿಂದಾಗಿ ಸಂತ್ರಸ್ತರಿಗೆ ಗಾಯವಾಗಿವೆ ಎಂಬುದಕ್ಕೆ ವೈದ್ಯರ ಗಾಯದ ಸರ್ಟೀಫಿಕೇಟ್ ಸಾಕ್ಷ್ಯ ಒದಗಿಸಿದೆ. ಈ ನೆಲೆಯಲ್ಲಿ ಮರಕುಂಬಿ ಸಂತ್ರಸ್ತರ ಮೌಖಿಕ, ದಾಖಲೆಯಲ್ಲಿನ ಸಾಕ್ಷ್ಯಗಳನ್ನು ನಂಬದಿರಲು ಯಾವುದೇ ಕಾರಣಗಳು ಇಲ್ಲ. ಅದನ್ನು ನಿಸ್ಸಂದೇಹವಾಗಿ ನಂಬಬಹುದಾಗಿದೆ” ಎಂದು ನ್ಯಾಯಾಲಯ ಹೇಳಿದೆ.
“2-3 ಸಾಕ್ಷಿಗಳು ಪ್ರತಿಕೂಲವಾದರು ಅವರೂ ದಾಳಿಯಲ್ಲಿ ಗಾಯಗೊಂಡಿದ್ದಾರೆ ಎಂಬುದಕ್ಕೆ ಸಾಕಷ್ಟು ದಾಖಲೆಗಳಿವೆ. ಗಂಗಾವತಿಯ ಸರ್ಕಾರಿ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ಕೊಡಿಸಲಾಗಿದೆ. ಕೆಲವು ಕಾರಣಗಳಿಗಾಗಿ, ಬೆದರಿಕೆ ಅಥವಾ ಮನವೊಲಿಕೆಗೆ ಅವರು ಪ್ರಾಸಿಕ್ಯೂಷನ್ ಬೆಂಬಲಿಸಿಲ್ಲ. ಒಟ್ಟಾರೆಯಾಗಿ ಪ್ರತಿಕೂಲ ಸಾಕ್ಷಿಗಳನ್ನು ಪರಿಗಣಿಸದೆಯೂ ಲಭ್ಯವಿರುವ ಮೌಖಿಕ ಮತ್ತು ದಾಖಲೆಯ ಸಾಕ್ಷಿಗಳು ಆರೋಪಿಗಳು ಕೃತ್ಯ ಎಸಗಿದ್ದಾರೆ ಎಂದು ಹೇಳಲು ಸಾಕು” ಎಂದು ನ್ಯಾಯಾಲಯ ಹೇಳಿದೆ.
ಟ್ರ್ಯಾಕ್ಟರ್‌ನಿಂದ ಬಿದ್ದು ಸಂತ್ರಸ್ತರು ಗಾಯಗೊಂಡಿರಬಹುದು ಎಂಬ ಆರೋಪಿತರ ಪರ ವಕೀಲರ ವಾದವನ್ನು ಒಪ್ಪಲಾಗದು ಎಂದು ನ್ಯಾಯಾಲಯವು ಹೇಳಿದೆ.
ಪ್ರಕರಣದ ಹಿನ್ನೆಲೆ: ಮರಕುಂಬಿಯ ಮೇಲ್ಜಾತಿಗೆ ಸೇರಿದ ಮಂಜುನಾಥ್ ಮತ್ತು ಇತರರು ‘ಪವರ್’ ಸಿನಿಮಾ ವೀಕ್ಷಿಸಲು ಗಂಗಾವತಿಯ ಶಿವ ಟಾಕೀಸ್‌ಗೆ ತೆರಳಿದ್ದರು. ಟಿಕೆಟ್ ಖರೀದಿಸುವ ವೇಳೆ ಬೇರೆಯವರೊಂದಿಗೆ ಕಲಹ ಉಂಟಾಗಿ ಉಭಯರು ಥಳಿಸಿಕೊಂಡಿದ್ದರು. ಈ ಘಟನೆಯ ಹಿಂದೆ ಮರಕುಂಬಿಯ ದಲಿತರು ಇದ್ದಾರೆ ಎಂದು ಭಾವಿಸಿದ ಮಂಜುನಾಥ್ ಊರಿಗೆ ತೆರಳಿ ವಿಚಾರ ತಿಳಿಸಿದ್ದನು. ಇದರಿಂದ ರೊಚ್ಚಿಗೆದ್ದ ಮಂಜುನಾಥ್ ಮತ್ತು ಇತರರು 28.08.2014ರಂದು ಮರಕುಂಬಿಯ ಪರಿಶಿಷ್ಟ ಜಾತಿಯ ಮಾದಿಗ ಸಮುದಾಯದವರನ್ನು ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡಿ, ಅವರ ಮನೆಗಳಿಗೆ ಬೆಂಕಿ ಹಚ್ಚಿ, ಅಲ್ಲಿನ ನಿವಾಸಿಗಳ ಮೇಲೆ ಕಲ್ಲು, ಇಟ್ಟಿಗೆ, ದೊಣ್ಣೆಯಿಂದ ಹಲ್ಲೆ ನಡೆಸಿದ್ದರು.
ಘಟನೆಯಲ್ಲಿ ಮಾದಿಗ ಸಮುದಾಯದ ಮಹಿಳೆಯರು, ಪುರುಷರು ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಭೀಮಯ್ಯ ಅವರು ಜಾತಿ ನಿಂದನೆ, ಮಹಿಳೆಯರ ಘನತೆಗೆ ಹಾನಿ, ಮನೆಗಳಿಗೆ ಬೆಂಕಿ ಹಚ್ಚಿರುವುದು, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಆರೋಪದ ಮೇಲೆ 117 ಮಂದಿಯ ವಿರುದ್ಧ ದೂರು ದಾಖಲಿಸಿದ್ದರು. ಇದನ್ನು ಆಧರಿಸಿ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.