ನವದೆಹಲಿ (New Delhi): ಆರೋಪಿ ಮತ್ತು ಸಂತ್ರಸ್ತೆ ನಡುವಿನ ವಿವಾಹವು ಅತ್ಯಾಚಾರದ ಅಪರಾಧವನ್ನು ತಗ್ಗಿಸುವುದಿಲ್ಲ ಅಥವಾ ಪವಿತ್ರೀಕರಿಸುವುದಿಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದೆ.
14 ವರ್ಷದ ಬಾಲಕಿ ಅಪಹರಿಸಿ ಅತ್ಯಾಚಾರ ಎಸಗಿದ ಆರೋಪಿಯ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿ ಮತ್ತು ಸಂತ್ರಸ್ತೆ ನಡುವಿನ ವಿವಾಹ ಅಥವಾ ಮಗುವಿನ ಜನನಕ್ಕೆ ಕಾರಣವಾಯಿತು ಎಂಬ ಕಾರಣಕ್ಕೆ ಅತ್ಯಾಚಾರದ ಅಪರಾಧವನ್ನು ತಗ್ಗಿಸುವುದಿಲ್ಲ ಅಥವಾ ಪವಿತ್ರೀಕರಿಸುವುದಿಲ್ಲ ಎಂದು ಹೇಳಿದೆ.
ಅರ್ಜಿದಾರರಿಗೆ ಜಾಮೀನು ನಿರಾಕರಿಸಿದ ನ್ಯಾಯಮೂರ್ತಿ ಅನೂಪ್ ಕುಮಾರ್ ಮೆಂಡಿರಟ್ಟ, ಅಪ್ರಾಪ್ತರಿಗೆ ಆಮಿಷವೊಡ್ಡುವ ಮತ್ತು ದೈಹಿಕ ಸಂಬಂಧದ ಘಟನೆಗಳನ್ನು ನಿತ್ಯದ ರೀತಿಯಲ್ಲಿ ಪರಿಗಣಿಸಲಾಗುವುದಿಲ್ಲ ಎಂದು ಹೇಳಿದರು.
2019ರಲ್ಲಿ ನಾಪತ್ತೆಯಾಗಿದ್ದ ಸಂತ್ರಸ್ತೆ, 2021ರ ಅಕ್ಟೋಬರ್‌ನಲ್ಲಿ ಅರ್ಜಿದಾರನ ಮನೆಯಲ್ಲಿ ಪತ್ತೆಯಾದಾಗ, ಆಕೆ ಗರ್ಭಿಣಿಯಾಗಿದ್ದಳು. ಸಂತ್ರಸ್ತೆಯನ್ನು ದೇವಸ್ಥಾನದಲ್ಲಿ ಮದುವೆ ಆಗಿರುವುದಾಗಿ ಆರೋಪಿ ಹೇಳಿಕೊಂಡಿದ್ದಾನೆ.
ಅತ್ಯಾಚಾರವು ಇಡೀ ಸಮಾಜದ ವಿರುದ್ಧದ ಅಪರಾಧ. ಸಂತ್ರಸ್ತೆಯೊಂದಿಗೆ ದೇವಸ್ಥಾನದಲ್ಲಿ ವಿವಾಹ ನಡೆಸಲಾಗಿದೆ ಎಂದು ಅರ್ಜಿದಾರರು ಪ್ರತಿಪಾದಿಸಿರುವುದರಿಂದ ಘಟನೆ ಸಮಯದಲ್ಲಿ ಸಂತ್ರಸ್ತೆ 15 ವರ್ಷಕ್ಕಿಂತ ಕಡಿಮೆ ವಯಸ್ಸು ಎಂಬ ಕಾರಣಕ್ಕೆ ಅಪರಾಧವನ್ನು ಪವಿತ್ರೀಕರಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯದ ಆದೇಶದಲ್ಲಿ ತಿಳಿಸಲಾಗಿದೆ.