ಹೈದರಾಬಾದ್ (Hyderabad): ಜುಬಿಲಿ– ಬಂಜಾರಾ ಹಿಲ್ಸ್ ಪ್ರದೇಶದಲ್ಲಿ ಇತ್ತೀಚೆಗೆ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣದ ಎಲ್ಲ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಈ ಪೈಕಿ ನಾಲ್ವರು ಬಾಲ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ಆರನೇ ಬಾಲ ಆರೋಪಿಯಾಗಿ ಎಐಎಂಐಎಂ ಶಾಸಕನ ಪುತ್ರನನ್ನು ಹೆಸರಿಸಲಾಗಿದ್ದು, ಆತನನ್ನೂ ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಐವರು ಆರೋಪಿಗಳ ವಿರುದ್ಧ ಭಾರತೀಯ ದಂಡಸಂಹಿತೆಯ ಸೆಕ್ಷನ್ 376 ಡಿ (ಸಾಮೂಹಿಕ ಅತ್ಯಾಚಾರ), 323 (ಆಘಾತ ಉಂಟುಮಾಡಲು ಕಾರಣರಾಗುವುದು), 366 (ಅಪಹರಣ) ಹಾಗೂ ಪೋಕ್ಸೊ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಘಟನೆಯ ವಿಡಿಯೋ ಚಿತ್ರೀಕರಣ ಮಾಡಿದ ಆರೋಪದಲ್ಲಿ ಐಟಿ ಕಾಯ್ದೆಯ ಸೆಕ್ಷನ್ 67ರ ಅಡಿ ಪ್ರಕರಣ ದಾಖಲಿಸಲಾಗಿದೆ.
ಆರನೇ ಆರೋಪಿಯು ಅತ್ಯಾಚಾರದಲ್ಲಿ ಭಾಗಿಯಾಗಿಲ್ಲವಾದರೂ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಎನ್ನಲಾಗಿದೆ. ಆತನ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354 (ಮಹಿಳೆಯ ವಿರುದ್ಧ ಅಪರಾಧ ಪ್ರಕರಣ) ಹಾಗೂ ಪೋಕ್ಸೊ ಕಾಯ್ದೆಯ ಸೆಕ್ಷನ್ ಅಡಿ ಪ್ರಕರಣ ದಾಖಲಿಸಲಾಗಿದೆ. ಆತನಿಗೂ 5–7 ವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆ ಇದೆ ಎಂದು ಪೊಲೀಸರು ಹೇಳಿದ್ದಾರೆ.
ಘಟನೆಗೆ ಸಂಬಂಧಿಸಿದ ಫೋಟೊ ಮತ್ತು ವಿಡಿಯೋಗಳನ್ನು ಬಿಜೆಪಿ ಬಿಡುಗಡೆ ಮಾಡಿದ ಬಳಿಕವಷ್ಟೇ ಆರನೇ ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂಬ ಆರೋಪಗಳನ್ನು ಪೊಲೀಸ್ ಆಯುಕ್ತ ಸಿ.ವಿ. ಆನಂದ್ ನಿರಾಕರಿಸಿದ್ದಾರೆ.
ಐವರು ಆರೋಪಿಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದ್ದು, ಶಿಕ್ಷೆಯು 20 ವರ್ಷಗಳಿಗಿಂತ ಕಡಿಮೆ ಇರಲಾರದು. ಪ್ರಕರಣದ ವಿಚಾರಣೆಗಾಗಿ ವಿಶೇಷ ನ್ಯಾಯಾಲಯ ರಚಿಸಲಾಗುವುದು. ಆರೋಪಿಗಳ ವಿರುದ್ಧ ಪ್ರಬಲ ಸಾಕ್ಷ್ಯವಿದೆ ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನ ರಸ್ತೆ ಸಂಖ್ಯೆ 36ರಲ್ಲಿನ ಪಬ್‌ಗೆ ಬಾಲಕಿಯು ತನ್ನ ಸ್ನೇಹಿತರೊಂದಿಗೆ ಪಾರ್ಟಿಗೆ ತೆರಳಿದ್ದಳು. ಅಲ್ಲಿ ಕೆಲ ಹುಡುಗರು ಆಕೆಯೊಂದಿಗೆ ಸ್ನೇಹ ಬೆಳೆಸಿದ್ದರು. ಬಳಿಕ ಅವರು ಪಬ್‌ನಿಂದ ಹೊರಬಂದು ಬಂಜಾರಾ ಹಿಲ್ಸ್‌ನ ಬೇಕರಿಯೊಂದರಲ್ಲಿ ಕಾಲ ಕಳೆದು, ಬೆಂಜ್ ಮತ್ತು ಇನೋವಾ ಕಾರಿನಲ್ಲಿ ಏಕಾಂತ ಸ್ಥಳಕ್ಕೆ ತೆರಳಿದ್ದರು. ಅಲ್ಲಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಬಾಲಕರು, ಅತ್ಯಾಚಾರ ಎಸಗಿದ್ದರು. ಬಳಿಕ ಪಬ್‌ನಲ್ಲಿ ಬಿಟ್ಟುಹೋಗಿದ್ದರು ಎನ್ನಲಾಗಿದೆ.
ಬಾಲಕಿಯ ತಂದೆಯು ಪಬ್‌ನಿಂದ ಆಕೆಯನ್ನು ಮನೆಗೆ ಕರೆದೊಯ್ದಿದ್ದು, ಪೋಷಕರು ಆಕೆಯ ಕತ್ತಿನ ಸುತ್ತ ಆಗಿದ್ದ ರಕ್ತದ ಗಾಯಗಳ ಕುರಿತು ಪ್ರಶ್ನಿಸಿದ್ದರು. ಆಗ ಬಾಲಕಿಯು ಕಾರಿನಲ್ಲಿ ಐವರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾಗಿ ತಿಳಿಸಿದ್ದಳು. ಈ ಕುರಿತು ಆಕೆಯ ತಂದೆ ದೂರು ನೀಡಿದ್ದರು.