ಬೆಂಗಳೂರು(Bengaluru): 60 ವರ್ಷ ತುಂಬಿದ ಭೂತಾರಾಧನೆ (ಕೋಲ, ನೇಮೋತ್ಸವ), ದೈವ ನರ್ತನ ಕಲಾವಿದರಿಗೆ 2 ಸಾವಿರ ಮಾಸಾಶನ ನೀಡುವುದಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆದೇಶ ಹೊರಡಿಸಿದೆ.
ಕರ್ನಾಟಕ ಸಂಸ್ಕೃತಿ, ಆಚರಣೆಗಳ ನೆಲೆಬೀಡು. ಅದರಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಭೂತಾರಾಧನೆಯು ಸಹ ಒಂದು. ಭೂತಾರಾಧನೆ, ದೈವ ನರ್ತನ ಮಾಡುವ ಕಲಾವಿದರ ಹಿತದೃಷ್ಟಿಯನ್ನು ಗಮನಿಸಿ, 60 ವರ್ಷ ತುಂಬಿದ ದೈವನರ್ತಕರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ₹2 ಸಾವಿರ ಮಾಸಾಶನ ನೀಡಲು ನಿರ್ಧರಿಸಲಾಗಿದೆ ಎಂದು ಸಚಿವ ವಿ.ಸುನಿಲ್ ಕುಮಾರ್ ಫೇಸ್ಬುಕ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.














