ಬೆಂಗಳೂರು: 2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಭರ್ಜರಿ ಗೆಲುವು ಸಾಧಿಸಿದೆ.
ಇದೇ ವೇಳೆ ಈ ಚುನಾವಣಾ ಫಲಿತಾಂಶದ ಬಗ್ಗೆ ಮಾಜಿ ಸಿಎಂ ಹಾಗೂ ಬಿಜೆಪಿ ಹಿರಿಯ ಮುಖಂಡ ಬಿ.ಎಸ್. ಯಡಿಯೂರಪ್ಪ ಪ್ರತಿಕ್ರಿಯಿಸಿದ್ದು, ಪಕ್ಷ ಈ ಸೋಲಿಗೆ ಆತ್ಮಾವಲೋಕನ ಮಾಡಿಕೊಳ್ಳುತ್ತದೆ ಎಂದಿದ್ದಾರೆ.
ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಭಿವೃದ್ಧಿಪರ ಕೆಲಸಗಳನ್ನು ಮಾಡಿದೆ. ಆದರೂ ಪಕ್ಷ ಸೋತಿದೆ. ಸೋಲಿಗೆ ಕಾರಣ ಗೊತ್ತಿಲ್ಲ. ಒಂದು ದಿನವೂ ವಿರಮಿಸಿದೆ ಚುನಾವಣಾ ಪ್ರಚಾರಗಳಲ್ಲಿ ಪಾಲ್ಗೊಂಡಿದ್ದೆವು. ಮುಂದಿನ ದಿನಗಳಲ್ಲಿ ಸೋಲಿಗೆ ಆತ್ಮ ವಿಮರ್ಶೆ ಮಾಡಿಕೊಳ್ಳುತ್ತೇವೆ ಎಂದಿದ್ದಾರೆ.
ರಾಜ್ಯದ ಅಭಿವೃದ್ಧಿಗೆ ಪಕ್ಷದ ಸಹಕಾರ ಇರುತ್ತದೆ ಎಂದಿದ್ದಾರೆ. ಹಾಗೆಯೇ, ರಾಜ್ಯದ ಮತದಾರರಿಗೂ ಯಡಿಯೂರಪ್ಪ ಅಭಿನಂದನೆ ಹೇಳಿದ್ದಾರೆ.
ಕೊಟ್ಟ ಭರವಸೆ ಈಡೇರಿಸಿ:
ಬಹುಮತ ಗಳಿಸಿ ಸರ್ಕಾರ ರಚಿಸಲಿರುವ ಕಾಂಗ್ರೆಸ್ ಪಕ್ಷಕ್ಕೆ ಅಭಿವೃದ್ಧಿ ವಿಚಾರದಲ್ಲಿ ಬಿಜೆಪಿ ವಿರೋಧ ಪಕ್ಷವಾಗಿ ಸಹಕಾರ ಕೊಡುತ್ತದೆ. ಅಂತೆಯೇ ಮನೆಮನೆಗೆ ಹೋಗಿ ಕಾಂಗ್ರೆಸ್ ಪಕ್ಷದವರು ಹಲವು ಗ್ಯಾರಂಟಿಗಳನ್ನು ಕೊಟ್ಟಿದ್ದಾರೆ. ಈ ಭರವಸೆಗಳನ್ನು ಕಾಂಗ್ರೆಸ್ ಈಡೇರಿಸಲಿ ಎಂದು ಆಗ್ರಹಿಸಿದ್ದಾರೆ.
ಲೋಕಸಭಾ ಚುನಾವಣೆಗೂ ಈ ಫಲಿತಾಂಶಕ್ಕೂ ಸಂಬಂಧ ಇಲ್ಲ. ರಾಜ್ಯದಲ್ಲಿ ಬಿಜೆಪಿ 2 ಕ್ಷೇತ್ರದಿಂದ ಬೆಳೆದು ಈಗ ಸ್ವಂತವಾಗಿ ಅಧಿಕಾರಕ್ಕೆ ಹಿಡಿಯುವ ಮಟ್ಟಕ್ಕೆ ಏರಿದೆ. ಈಗ ಸೋಲಾದರೂ ಲೋಕಸಭಾ ಚುನಾವಣೆಯಲ್ಲಿ ಹಿಂದಿನಂತೆ 25 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.