ಮನೆ ಅಪರಾಧ ಎಂಬಿಬಿಎಸ್‌ ಸೀಟ್‌ ಕೊಡಿಸುವುದಾಗಿ 11 ಲಕ್ಷ ರೂ. ವಂಚನೆ

ಎಂಬಿಬಿಎಸ್‌ ಸೀಟ್‌ ಕೊಡಿಸುವುದಾಗಿ 11 ಲಕ್ಷ ರೂ. ವಂಚನೆ

0

ಬೆಂಗಳೂರು (Bengaluru): ಎಂಬಿಬಿಎಸ್‌ ಸೀಟು ಕೊಡಿಸುವ ನೆಪದಲ್ಲಿ ಆಂಧ್ರ ಪ್ರದೇಶ ಮೂಲದ ವಿದ್ಯಾರ್ಥಿನಿಯೊಬ್ಬರ ಪೋಷಕರಿಂದ 11 ಲಕ್ಷ ರೂ. ಹಣ ಪಡೆದು ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಅನಂತಪುರ ಜಿಲ್ಲೆ ಕಲ್ಯಾಣ ದುರ್ಗ ನಿವಾಸಿ ಜಯಕೃಷ್ಣ ಅವರು ವಂಚನೆಗೊಳಗಾದವರು. ಈ ಬಗ್ಗೆ ಜಯಕೃಷ್ಣ ಅವರು ಬೆಂಗಳೂರಿನ ವೈಟ್‌ ಫೀಲ್ಡ್‌ ಪೊಲೀಸರಿಗೆ ದೂರು ನೀಡಿದ್ದಾರೆ.

ದೂರಿನ ಆಧಾರದ ಮೇಲೆ ವರ್ತೂರಿನ ಸಿಗ್ಮಾ ಟೆಕ್‌ ಪಾರ್ಕ್‌ ನಲ್ಲಿದ್ದ ವೈಸ್‌ ಮ್ಯಾಗ್ನೆಟ್ ಎಜುಕೇಷನ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಧೀರೇಂದ್ರ ಕುಮಾರ್‌ ಜೈಸ್ವಾಲ್‌, ಸಿಇಒ ಸಚಿನ್‌ ಸಾಬ್ಲೆ, ಬಿಡಿಇ ಅನಿಕೇಶ್‌ ಎಂಬವರ ವಿರುದ್ಧ ಎಫ್‌ ಐಆರ್‌ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಜಯಕೃಷ್ಣ ತಮ್ಮ ಪುತ್ರಿಗೆ ಬೆಂಗಳೂರು ಮೆಡಿಕಲ್‌ ಕಾಲೇಜಿನಲ್ಲಿ ಎಂಬಿಬಿಎಸ್‌ ಸೀಟಿಗಾಗಿ ಪ್ರಯತ್ನಿಸುತ್ತಿದ್ದರು. ಮಾರ್ಚ್‌ 30 ರಂದು ಜಯಕೃಷ್ಣ ಅವರಿಗೆ ಕರೆ ಮಾಡಿ ಐಶ್ವರ್ಯ ಎಂಬಾಕೆ ದೇವನಹಳ್ಳಿಯ ಆಕಾಶ್‌ ಇನ್‌ ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌ ರಿಸರ್ಚ್‌ ಸೆಂಟರ್‌ ಕಾಲೇಜಿನಲ್ಲಿ ಮೆಡಿಕಲ್‌ ಸೀಟು ಕೊಡಿಸುವುದಾಗಿ ಹೇಳಿ ವೈಸ್‌ ಮ್ಯಾಗ್ನೆಟ್‌ ಎಜುಕೇಷನ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿ ಕಚೇರಿಗೆ ಆಗಮಿಸಿ ಅಲ್ಲಿನ ಅಧಿಕಾರಿಗಳನ್ನು ಭೇಟಿ ಮಾಡುವಂತೆ ಹೇಳಿದ್ದರು.

ಆಕೆಯ ಮಾತು ನಂಬಿದ ಜಯಕೃಷ್ಣ ಅವರು ವೈಸ್‌ ಮ್ಯಾಗ್ನೆಟ್‌ ಎಜುಕೇಷನ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿಗೆ ತೆರಳಿ ಸಚಿನ್‌ ಸಾಬ್ಲೆ ಅವರನ್ನು ಭೇಟಿಯಾಗಿ ಅನಿಕೇಶ್‌ ಮೆಡಿಕಲ್‌ ಕಾಲೇಜಿನಲ್ಲಿ ಸೀಟು ಕೊಡಿಸುವುದಕ್ಕೆ ಚೆಕ್‌ ರೂಪದಲ್ಲಿ 11 ಲಕ್ಷ ರೂ. ನೀಡಿದ್ದರು. ಬಳಿಕ ಏಪ್ರಿಲ್‌ 16 ರಂದು ಆಕಾಶ್‌ ಕಾಲೇಜಿನ ಬಳಿ 9 ಲಕ್ಷ ಡಿಡಿಯೊಂದಿಗೆ ಕಾಯುತ್ತಿರಿ. ನಾವು ಅಲ್ಲಿಗೆ ಬಂದು ನಿಮ್ಮ ಮಗಳಿಗೆ ಅಡ್ಮಿಶನ್‌ ಮಾಡುಸುತ್ತೇವೆ ಎಂದಿದ್ದರು.

ಅದರಂತೆ ಏಪ್ರಿಲ್‌ 16 ರಂದು ಆಕಾಶ್‌ ಕಾಲೇಜಿನ ಬಳಿ ಜಯಕೃಷ್ಣ ಅವರು ತಮ್ಮ ಮಗಳೊಂದಿಗೆ ತೆರಳಿ ಸಚಿನ್‌ ಅವರಿಗೆ ಕರೆ ಮಾಡಿದರೂ ಸ್ವೀಕರಿಸಿಲ್ಲ. ಇದರಿಂದ ಅನುಮಾನಗೊಂಡು ಸಿಗ್ಮಾ ಪಾರ್ಕ್‌ ನ ವೈಸ್‌ ಮ್ಯಾಗ್ನೆಟ್‌ ಕಂಪನಿ ಬಳಿ ಬಂದು ನೋಡಿದಾಗ ಕಚೇರಿಗೆ ಬೀಗ ಹಾಕಿರುವುದು ಕಂಡು ಬಂದಿದೆ. ಆಗ ಜಯಕೃಷ್ಣ ಅವರಿಗೆ ತಾವು ಮೋಸ ಹೋಗಿರುವುದಾಗಿ ಗೊತ್ತಾಗಿದೆ. ಹಣ ವಾಪಸ್‌ ನೀಡಬಹುದು ಎಂದು ಕಾದ ಜಯಕೃಷ್ಣ ಅವರಿಗೆ ಅದೇ ಕಂಪನಿ ಇನ್ನೂ ಹಲವರಿಗೆ ಮೆಡಿಕಲ್‌ ಸೀಟು ಕೊಡಿಸುವ ನೆಪದಲ್ಲಿ ಹಣ ಪಡೆದು ವಂಚಿಸಿರುವುದು ತಿಳಿದು ದೂರು ನೀಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಹಿಂದಿನ ಲೇಖನಆಷಾಢ ಶುಕ್ರವಾರ: ಚಾಮುಂಡೇಶ್ವರಿ ದರ್ಶನಕ್ಕೆ ಭಕ್ತರಿಗೆ ಅವಕಾಶ, ಜಿಲ್ಲಾಡಳಿತದಿಂದ ಸಕಲ ಸಿದ್ಧತೆ
ಮುಂದಿನ ಲೇಖನಸೋನಿಯಾ ಗಾಂಧಿ ಆಪ್ತ ಕಾರ್ಯದರ್ಶಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು