ಮನೆ ರಾಜ್ಯ ಪತ್ರಿಕಾ ವಿತರಿಕರಿಗೂ ಮಾಧ್ಯಮ ಅಕಾಡೆಮಿ ಪ್ರಶಸ್ತಿ: ಕೆ.ವಿ.ಪ್ರಭಾಕರ್

ಪತ್ರಿಕಾ ವಿತರಿಕರಿಗೂ ಮಾಧ್ಯಮ ಅಕಾಡೆಮಿ ಪ್ರಶಸ್ತಿ: ಕೆ.ವಿ.ಪ್ರಭಾಕರ್

ಪತ್ರಿಕಾ ವಿತರಕರಿಗೆ 2 ಕೋಟಿ ಕ್ಷೇಮ ನಿಧಿ

0

ತುಮಕೂರು: ನಾನು ಪತ್ರಕರ್ತ ಆಗುವುದಕ್ಕಿಂತ ಮೊದಲು ನಾನೊಬ್ಬ ಪತ್ರಿಕಾ ವಿತರಕ. ಪತ್ರಿಕಾ ವಿತರಣೆ ತಪಸ್ಸಿನ ಕೆಲಸ. ಮಳೆ, ಗಾಳಿ, ಚಳಿಗೆ ಈ ತಪಸ್ಸು ಭಂಗ ಆಗುವುದಿಲ್ಲ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ನುಡಿದರು.

ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಮತ್ತು ತುಮಕೂರು ಜಿಲ್ಲಾ ದಿನಪತ್ರಿಕೆ ಹಂಚಿಕೆದಾರರ ಸಂಘ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಮೂರನೇ ರಾಜ್ಯ ಮಟ್ಟದ ಪತ್ರಿಕಾ ವಿತರಕರ ದಿನಾಚರಣೆಯ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಪತ್ರಿಕಾ ವಿತರಕರು ಪತ್ರಿಕಾ ವೃತ್ತಿಯ ಅವಿಭಾಜ್ಯ ಅಂಗ. ಪತ್ರಿಕಾ ವೃತ್ತಿಗೆ ಸಂಬಂಧಪಟ್ಟ ಅನುಕೂಲ, ಸವಲತ್ತುಗಳು, ಪ್ರಶಸ್ತಿಗಳ ವಿಚಾರ ಬಂದಾಗ ಪತ್ರಿಕಾ ವಿತರಕರು ಹೊರಗೇ ಉಳಿದು ಬಿಡುತ್ತಾರೆ. ಹೀಗಾಗಿ ಮಾಧ್ಯಮ ಅಕಾಡೆಮಿ ಪ್ರಶಸ್ತಿಗಳನ್ನು ನೀಡುವಾಗ ಒಂದು ಪ್ರಶಸ್ತಿ ವಿತರಿಕರಿಗೆ ಮೀಸಲಿಡುವ ದಿಕ್ಕಿನಲ್ಲಿ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ತೀರ್ಮಾನಿಸುವ ಭರವಸೆ ನೀಡಿದರು.

ರಾಜ್ಯ ಪತ್ರಿಕಾ ವಿತರಕರ ಸಂಘವನ್ನು ವಿತರಕರ ಸಹಕಾರ ಸಂಘವನ್ನಾಗಿ ಮಾರ್ಪಡಿಸಿದರೆ ನಾನಾ ರೀತಿಯ ಸಹಕಾರ ಮತ್ತು ನೆರವುಗಳು ಒದಗಿ ಬರುತ್ತವೆ. ಸಂಘದ ಪದಾಧಿಕಾರಿಗಳು ಈ ಬಗ್ಗೆ ಗಂಭೀರವಾಗಿ ಪರಿಶೀಲಿಸಿ ಎಂದು ಸಲಹೆ ನೀಡಿದರು.

ಪತ್ರಿಕಾ ವಿತರಕರ ಸಂಘದ ಕ್ಷೇಮಾಭಿವೃದ್ಧಿಗೆ 2 ಕೋಟಿ ರೂಪಾಯಿಯನ್ನು ಮುಂದಿನ ಬಜೆಟ್ ನಲ್ಲಿ ಖಂಡಿತಾ ನೀಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ ಎಂದು ಸಭೆಗೆ ತಿಳಿಸಿದರು.

ಸಿದ್ದರಬೆಟ್ಟ ಶಾಖಾ ಮಠದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮಿಗಳು ಕಾರ್ಯಕ್ರಮ ಉದ್ಘಾಟಿಸಿದರು. ಸ್ವಾಮಿ ಜಪಾನಂದಜೀ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಅತಿಥಿಗಳಾಗಿ ಪ್ರಜಾ ಪ್ರಗತಿ ಪತ್ರಿಕೆ ಸಂಪಾದಕರಾದ ಎಸ್.ನಾಗಣ್ಣ, ಶಾಸಕರಾದ ಜ್ಯೋತಿಗಣೇಶ್, ಹಿರಿಯ ಪತ್ರಕರ್ತರಾದ ಮಲ್ಲಿಕಾರ್ಜುನಯ್ಯ ಮತ್ತು ಪತ್ರಕರ್ತರ ಸಂಘ ಮತ್ತು ಪತ್ರಿಕಾ ವಿತರಕರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.