ಬೆಂಗಳೂರು: ಮೇಕೆದಾಟು ಯೋಜನೆ ವಿರುದ್ಧ ಸೋಮವಾರ ತಮಿಳುನಾಡು ಸರ್ಕಾರ ನಿರ್ಣಯ ಅಂಗೀಕರಿಸಿದ್ದು, ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಕರ್ನಾಟಕ ಸರ್ಕಾರ, ತಮಿಳುನಾಡಿನ ನಿಲುವನ್ನು ಖಂಡಿಸಿ ನಿರ್ಣಯ ಅಂಗೀಕರಿಸಲು ನಿರ್ಧರಿಸಿದೆ.
ಇಂದು ಕರ್ನಾಟಕ ವಿಧಾನಸಭೆಯಲ್ಲಿ ಸದಸ್ಯರು ಪಕ್ಷಾತೀತವಾಗಿ ಇದಕ್ಕೆ ಒಪ್ಪಿಗೆ ಸೂಚಿಸಿದರು ಮತ್ತು ಮಂಗಳವಾರ ಸಂಜೆ ಕಾನೂನು ತಜ್ಞರೊಂದಿಗೆ ಸಮಾಲೋಚಿಸಿದ ನಂತರ ರಾಜ್ಯ ಸರ್ಕಾರ ಬುಧವಾರ ಖಂಡನಾ ನಿರ್ಣಯವನ್ನು ಅಂಗೀಕರಿಸುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.
ಕಾವೇರಿಗೆ ಸಂಬಂಧಿಸಿದಂತೆ ಕರ್ನಾಟಕ ಯಾವುದೇ ಯೋಜನೆಯನ್ನು ಕೈಗೆತ್ತಿಕೊಂಡರೂ ತಮಿಳುನಾಡು ವಿರೋಧಿಸುತ್ತದೆ ಎಂದು ಸಿಎಂ ಬೊಮ್ಮಾಯಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
“ತಮಿಳುನಾಡು ತನ್ನ ಪಾಲಿನಲ್ಲದ ಹೆಚ್ಚುವರಿ ನೀರನ್ನು ಬಳಸಿಕೊಳ್ಳುತ್ತಿದೆ ಮತ್ತು ಯಾವುದೇ ಅನುಮತಿಯಿಲ್ಲದೆ ತಮಿಳುನಾಡಿನ ದಕ್ಷಿಣಕ್ಕೆ ಜಲಾಶಯದ ಕಾಮಗಾರಿಯನ್ನು ಕೈಗೆತ್ತಿಕೊಳ್ಳುತ್ತಿದೆ. ಇದು ಕಾನೂನುಬಾಹಿರವಾಗಿದೆ. ಇದರ ವಿರುದ್ಧವೂ ನಾವು ನಿರ್ಣಯ ಅಂಗೀಕರಿಸುತ್ತೇವೆ. ನಾವು ಕಾನೂನು ತಜ್ಞರೊಂದಿಗೆ ಚರ್ಚಿಸಿ ತಮಿಳುನಾಡು ವಿರುದ್ಧ ನಿರ್ಣಯವನ್ನು ಅಂಗೀಕರಿಸುತ್ತೇವೆ. ಉಭಯ ಸದನಗಳಲ್ಲಿ ಬುಧವಾರ ಸರ್ಕಾರದ ನಿರ್ಧಾರ ತೆಗೆದುಕೊಳ್ಳಲಿದೆ” ಎಂದರು.
ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ನ್ಯಾಯಾಧಿಕರಣದ ಆದೇಶದಂತೆ ಕರ್ನಾಟಕವು ಸಾಮಾನ್ಯ ವರ್ಷಗಳಲ್ಲಿ 177.25 ಟಿಎಂಸಿ ಕಾವೇರಿ ನೀರನ್ನು ಬಿಡುತ್ತಿದೆ. ಹೆಚ್ಚುವರಿ ನೀರನ್ನು ಕುಡಿಯಲು ಮತ್ತು ವಿದ್ಯುತ್ ಉತ್ಪಾದನೆಗೆ ಬಳಸುತ್ತಿದ್ದೇವೆ. ನೀರಾವರಿಗೆ ಬಳಸುತ್ತಿಲ್ಲ. ಕಳೆದ ಏಳು ವರ್ಷಗಳಲ್ಲಿ ಕರ್ನಾಟಕವು 582 ಟಿಎಂಸಿ ಹೆಚ್ಚುವರಿ ನೀರನ್ನು ತಮ್ಮ ಹಂಚಿಕೆಯನ್ನು ಹೊರತುಪಡಿಸಿ ತಮಿಳುನಾಡಿಗೆ ಬಿಡುಗಡೆ ಮಾಡಿದೆ. ತಮಿಳುನಾಡು ಸರ್ಕಾರಕ್ಕೆ ಮೇಕೆದಾಟು ಜಲಾಶಯ ಯೋಜನೆ ತಡೆಯುವ ಯಾವುದೇ ಹಕ್ಕು ಇಲ್ಲ. ಜಲ, ನೆಲ, ಸೀಮೆ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ. ನಮಗೆ ಕರ್ನಾಟಕ ಹಾಗೂ ಕನ್ನಡಿಗರ ಹಿತವೇ ಮುಖ್ಯ ಎಂದರು.