ಮೇಲುಕೋಟೆ… ಈ ಸ್ಥಳ ಅದೆಷ್ಟು ಜನಪ್ರಿಯ ಅಂದರೆ ಇದರ ಬಗ್ಗೆ ಲೆಕ್ಕವಿಲ್ಲದಷ್ಟು ಹಾಡುಗಳು ಸಿನಿಮಾಗಳಲ್ಲಿ ಮೂಡಿಬಂದಿದೆ. ಹಾಡುಗಳಷ್ಟೇ ಅಲ್ಲ, ಹಾಡಿನ ಶೂಟಿಂಗ್ ಸಹ ಇಲ್ಲಿ ನಡೆದಿದೆ. ಕೇವಲ ಕನ್ನಡ, ದಕ್ಷಿಣ ಭಾರತದ ಸಿನಿಮಾಗಳು ಮಾತ್ರವಲ್ಲದೆ, ಬಾಲಿವುಡ್ ಮಂದಿಗೂ ಈ ಸ್ಥಳ ಭಾರೀ ಫೇವರಿಟ್. ಭೂಲ್ ಭೂಲೈಯಾ ಸಿನಿಮಾದ ಕೆಲವು ದೃಶ್ಯಗಳಲ್ಲಿ ಈ ಮೇಲುಕೋಟೆಯನ್ನು ಅದ್ಭುತವಾಗಿ ತೋರಿಸಲಾಗಿದೆ.
ಶ್ರೀ ರಾಮಾನುಜಾಚಾರ್ಯರು ತಂಗಿದ್ದ ಸ್ಥಳ
ಮೈಸೂರಿನಿಂದ 50 ಕಿ.ಮೀ ಮತ್ತು ಬೆಂಗಳೂರಿನಿಂದ 133 ಕಿ.ಮೀ ದೂರದಲ್ಲಿರುವ ಮೇಲುಕೋಟೆ ಕರ್ನಾಟಕದ ರಾಜ್ಯದ, ಮಂಡ್ಯ ಜಿಲ್ಲೆಯ, ಪಾಂಡವಪುರ ತಾಲ್ಲೂಕಿನಲ್ಲಿರುವ ಒಂದು ಐತಿಹಾಸಿಕ ಪಟ್ಟಣ. ತಿರುನಾರಾಯಣಪುರಂ ಎಂದೂ ಕರೆಯಲ್ಪಡುವ ಈ ತಾಣ ಕರ್ನಾಟಕದ ಜನಪ್ರಿಯ ಯಾತ್ರಾಸ್ಥಳಗಳಲ್ಲಿ ಒಂದಾಗಿದ್ದು, ಮೈಸೂರು ಪ್ರವಾಸ ಪ್ಯಾಕೇಜ್ ಪಟ್ಟಿಯಲ್ಲಿ ನೀವು ಈ ಸ್ಥಳವನ್ನು ಮರೆಯದೆ ಸೇರಿಸಿಕೊಳ್ಳಿ. ಮೇಲುಕೋಟೆ ಕಾವೇರಿ ಕಣಿವೆಯ ಮೇಲಿರುವ ಯಾದವಗಿರಿ ಅಥವಾ ಯದುಗಿರಿ ಎಂದು ಕರೆಯಲ್ಪಡುವ ಕಲ್ಲಿನ ಬೆಟ್ಟಗಳ ಮೇಲಿದೆ. ಈ ಪಟ್ಟಣವು ಎರಡು ಪದಗಳಿಂದ ಈ ಹೆಸರನ್ನು ಪಡೆದುಕೊಂಡಿದಿರುವುದನ್ನು ನೀವು ಗಮನಿಸಬಹುದು. ಮೇಲು ಎಂದರೆ ಮೇಲ್ಭಾಗ ಮತ್ತು ಕೋಟೆ ಎಂದರೆ ಕೋಟೆ. ಇತಿಹಾಸದ ಪ್ರಕಾರ, ಮಹಾನ್ ವೈಷ್ಣವ ಸಂತ ಶ್ರೀ ರಾಮಾನುಜಾಚಾರ್ಯರು ಕ್ರಿ.ಶ 12 ನೇ ಶತಮಾನದಲ್ಲಿ ಸುಮಾರು 14 ವರ್ಷಗಳ ಕಾಲ ಇಲ್ಲಿ ವಾಸಿಸುತ್ತಿದ್ದರು. ಆದ್ದರಿಂದ ಇದು ಬ್ರಾಹ್ಮಣರ ಶ್ರೀವೈಷ್ಣವ ಪಂಥದ ಪ್ರಮುಖ ಕೇಂದ್ರವಾಯಿತು.
ವಿಷ್ಣುವಿಗೆ ಸಮರ್ಪಿತವಾದ ದೇವಾಲಯ
ಈ ಪಟ್ಟಣದಲ್ಲಿ ಎರಡು ಜನಪ್ರಿಯ ದೇವಾಲಯಗಳಿವೆ. ಒಂದು ಚೆಲುವನಾರಾಯಣ ಸ್ವಾಮಿ ದೇವಸ್ಥಾನ ಮತ್ತು ಇನ್ನೊಂದು ಯೋಗ ನರಸಿಂಹ ಸ್ವಾಮಿ ದೇವಸ್ಥಾನ. ಶ್ರೀ ರಾಮಾನುಜಾಚಾರ್ಯರು ಈ ಸ್ಥಳಕ್ಕೆ ಬರುವ ಮೊದಲೇ ಈ ದೇವಾಲಯಗಳು ಅಸ್ತಿತ್ವದಲ್ಲಿದ್ದವು. ಮುಖ್ಯ ದೇವಾಲಯವನ್ನು ತಿರುನಾರಾಯಣ ಅಥವಾ ಚೆಲುವರಾಯ ಎಂದು ಕರೆಯಲ್ಪಡುವ ವಿಷ್ಣುವಿಗೆ ಸಮರ್ಪಿಸಲಾಗಿದೆ. ದೇವತೆಯ ಉತ್ಸವಮೂರ್ತಿ ಅಥವಾ ಮೆರವಣಿಗೆಯ ವಿಗ್ರಹವನ್ನು ಚೆಲುವಾಪಿಲ್ಲೆ ರಾಯ ಎಂದು ಕರೆಯಲಾಗುತ್ತದೆ, ಇದರ ಮೂಲ ಹೆಸರು ರಾಮಪ್ರಿಯಾ. ಮೊಘಲರು ಈ ಸ್ಥಳವನ್ನು ಆಕ್ರಮಿಸಿದಾಗ ಈ ಉತ್ಸವಮೂರ್ತಿ ಕಳೆದುಹೋಗಿತ್ತಂತೆ. ನಂತರ ಅದನ್ನು ಮೊಹಮ್ಮದ್ ಷಾ ಅವರ ಪುತ್ರಿ ಬೀಬಿ ನಾಚಿಯಾರ್ನಿಂದ ರಾಮಾನುಜಾಚಾರ್ಯರು ವಶಪಡಿಸಿಕೊಂಡರು.
ಚೆಲುವನಾರಾಯಣ ಸ್ವಾಮಿ ದೇವಸ್ಥಾನ
ಚೆಲುವನಾರಾಯಣ ಸ್ವಾಮಿ ದೇವಸ್ಥಾನವು ಮೈಸೂರು ರಾಜಮನೆತನದ ಆಶ್ರಯದಲ್ಲಿದ್ದು, ಒಡೆಯರು ಸ್ವಾಮಿಗೆ ಅಮೂಲ್ಯವಾದ ಆಭರಣಗಳನ್ನು ಹಾಕಿದ್ದಾರೆ. ಕೃಷ್ಣರಾಜ-ಮುಡಿ ಮತ್ತು ವೈರಮುಡಿ ಅಥವಾ ವಜ್ರಮುಕುಟ ಎಂದು ಕರೆಯಲಾಗುವ ಎರಡು ಸುಂದರವಾದ ಕಿರೀಟಗಳನ್ನು ಒಡೆಯರು ಭಗವಂತನಿಗೆ ಉಡುಗೊರೆಯಾಗಿ ನೀಡಿದ್ದಾರೆ. ಮಾರ್ಚ್ – ಏಪ್ರಿಲ್’ನಲ್ಲಿ ನಡೆಯುವ ವೈರಮುಡಿ ಉತ್ಸವವು ಶ್ರೀ ಚೆಲುವನಾರಾಯಣ ಸ್ವಾಮಿ ದೇವಾಲಯದ ಮುಖ್ಯ ಹಬ್ಬವಾಗಿದ್ದು, 400,000 ಕ್ಕೂ ಹೆಚ್ಚು ಜನರು ಭಾಗವಹಿಸುತ್ತಾರೆ. ಈ ದಿನ ಮುಖ್ಯ ದೇವತೆ ತಿರುನಾರಾಯಣನನ್ನು ವಜ್ರದ ಕಿರೀಟದಿಂದ ಅಲಂಕರಿಸಿ ಮೆರವಣಿಗೆಯಲ್ಲಿ ಕರೆದೊಯ್ಯಲಾಗುತ್ತದೆ. ಚೆಲುವನಾರಾಯಣ ದೇವಾಲಯದ ಸಮಯ ಬೆಳಗ್ಗೆ 7.30 ರಿಂದ 1:00, ಸಂಜೆ 4:00 ರಿಂದ 8:00.
ಯೋಗ ನರಸಿಂಹ ಸ್ವಾಮಿ ದೇವಾಲಯ
ಯೋಗ ನರಸಿಂಹ ಸ್ವಾಮಿ ದೇವಾಲಯವು ಮೇಲುಕೋಟೆಯ ಮತ್ತೊಂದು ಪ್ರಮುಖ ದೇವಾಲಯವಾಗಿದ್ದು, ಇದನ್ನು ನರಸಿಂಹನಿಗೆ ಅರ್ಪಿಸಲಾಗಿದೆ. ಬೆಟ್ಟದ ಮೇಲೆ ನಿರ್ಮಿಸಲಾಗಿರುವ ಈ ದೇವಾಲಯದಿಂದ ಮೇಲುಕೋಟೆಯನ್ನು ಕಣ್ತುಂಬಿಕೊಳ್ಳಬಹುದು. ಮುಖ್ಯ ದೇವತೆಯು ಯೋಗಪಟ್ಟದೊಂದಿಗೆ ಕುಳಿತಿರುವ ಭಂಗಿಯಲ್ಲಿದೆ. ದೇವಾಲಯದಲ್ಲಿ ಪ್ರಹ್ಲಾದನು ಭಗವಾನ್ ಯೋಗನರಸಿಂಹನ ವಿಗ್ರಹವನ್ನು ಸ್ಥಾಪಿಸಿದನೆಂದು ನಂಬಲಾಗಿದೆ. ನರಸಿಂಹನ ಆರಾಧನೆಗೆ ಮೀಸಲಾಗಿರುವ ಏಳು ಪವಿತ್ರ ಕೇಂದ್ರಗಳಲ್ಲಿ ಈ ದೇವಾಲಯವನ್ನು ಪರಿಗಣಿಸಲಾಗಿದೆ. 1853 ರ ಹಿಂದಿನ ಕಾಲದ ಈ ದೇವಾಲಯದ ಒಳಗೆ ಸಂಸ್ಕೃತ ಪಾಠಶಾಲವಿದೆ. ತಪ್ಪಲಿನಲ್ಲಿರುವ ದೇವಾಲಯವನ್ನು ತಲುಪಲು ಸುಮಾರು 400 ಮೆಟ್ಟಿಲುಗಳನ್ನು ಹತ್ತಬೇಕು. ಯೋಗ ನರಸಿಂಹ ದೇವಾಲಯದ ಸಮಯ ಬೆಳಿಗ್ಗೆ 9.30 ರಿಂದ 1.30 ಮತ್ತು ಸಂಜೆ 5.30 ರಿಂದ ರಾತ್ರಿ 8.
ಶೂಟಿಂಗ್ ತಾಣವಾದ ರಾಯಗೋಪುರ
ಪಟ್ಟಣದಲ್ಲಿ ಮೂರು ಕೊಳಗಳಿವೆ. ಎರಡು ತಪ್ಪಲಿನಲ್ಲಿ ಮತ್ತು ಇನ್ನೊಂದು ಬೆಟ್ಟದ ಮೇಲಿದೆ. ಇವುಗಳಲ್ಲಿ, ಶ್ರೀ ಚೆಲುವನಾರಾಯಣ ಸ್ವಾಮಿ ದೇವಾಲಯದ ಬಳಿಯಿರುವ ಕಲ್ಯಾಣಿ ಕೊಳವು ದೊಡ್ಡದಾಗಿದ್ದು, ಸುಂದರವಾಗಿ ಕೆತ್ತಿದ ಕಂಬದ ಮಂಟಪಗಳಿಂದ ಆವೃತವಾಗಿದೆ. ಚೆಲುವನಾರಾಯಣ ದೇವಸ್ಥಾನದಿಂದ ಸುಮಾರು 300 ಮೀಟರ್ ದೂರದಲ್ಲಿರುವ ರಾಯಗೋಪುರ ಒಂದು ಆಸಕ್ತಿದಾಯಕ ಸ್ಥಳವಾಗಿದ್ದು, ನೆಚ್ಚಿನ ಶೂಟಿಂಗ್ ತಾಣವಾಗಿದೆ. ಗೋಪಾಲರಾಯ ಪ್ರವೇಶದ್ವಾರ ಎಂದೂ ಕರೆಯಲ್ಪಡುವ ರಾಯಗೋಪುರ ಮೇಲುಕೋಟೆ ಬೆಟ್ಟದ ಅಪೂರ್ಣ ರಚನೆಯಾಗಿದೆ. ಇದು ನಾಲ್ಕು ಎತ್ತರದ ಸ್ತಂಭಗಳನ್ನು ಹೊಂದಿದ್ದು, ಮಾಮಲ್ಲಾಪುರಂ ರಾಜ ಗೋಪುರಂಗೆ ಹೋಲುತ್ತದೆ. ಈ ದೇವಾಲಯದ ಪ್ರವೇಶದ್ವಾರವನ್ನು ಹೊಯ್ಸಳ ರಾಜ ವಿಷ್ಣುವರ್ಧನ ನಿರ್ಮಿಸಿದ್ದು, ರಾತ್ರಿಯಿಡೀ ಇದನ್ನು ನಿರ್ಮಿಸಲಾಗಿದೆ ಎಂದು ಹೇಳಲಾಗಿದೆ.
ಧನುಷ್ಕೋಟಿ
ಇದು ಬೆಟ್ಟದ ಮೇಲಿರುವ ಒಂದು ತಾಣವಾಗಿದ್ದು, ಪವಿತ್ರ ಗ್ರಂಥ ರಾಮಾಯಣದಲ್ಲಿ ಬರುವ ಘಟನೆಯೊಂದಿಗೆ ನೇರವಾಗಿ ಸಂಪರ್ಕ ಹೊಂದಿದೆ. ಸ್ಥಳೀಯರು ಈ ಸ್ಥಳವನ್ನು ಪವಿತ್ರವೆಂದು ಭಾವಿಸುತ್ತಾರೆ. ಏಕೆಂದರೆ ರಾಮನು ತನ್ನ ಪ್ರೀತಿಯ ಹೆಂಡತಿ ಸೀತಾಳ ಬಾಯಾರಿಕೆಯನ್ನು ನೀಗಿಸುವ ಸಲುವಾಗಿ ನೀರಿನ ಬುಗ್ಗೆ ಸೃಷ್ಟಿಸಲು ತನ್ನ ಬಾಣದಿಂದ ಭೂಮಿಗೆ ಹೊಡೆದನಂತೆ.
ಮೇಲುಕೋಟೆ ದೇವಾಲಯ ವನ್ಯಜೀವಿ ಅಭಯಾರಣ್ಯ
ಮೇಲುಕೋಟೆ ದೇವಾಲಯ ವನ್ಯಜೀವಿ ಅಭಯಾರಣ್ಯವು 50 ಚದರ ಕಿ.ಮೀ. ವ್ಯಾಪ್ತಿಯಲ್ಲಿದ್ದು, ಅಪರೂಪದ ಮತ್ತು ಅಳಿವಿನಂಚಿನಲ್ಲಿರುವ ಬ್ಲಾಕ್ ಬಕ್ ಮತ್ತು ಬೂದು ತೋಳಗಳಿಗೆ ಆವಾಸಸ್ಥಾನವಾಗಿದೆ. ಕಡಿದಾದ ಬಂಡೆಗಳು ಮತ್ತು ಉದ್ದವಾದ ಹಸಿರು ಮರಗಳು ಈ ಪ್ರದೇಶದ ಸೌಂದರ್ಯವನ್ನು ಹೆಚ್ಚಿಸಿವೆ. ಈ ಅಭಯಾರಣ್ಯದಲ್ಲಿ ಸುಂದರವಾದ ಚಿಟ್ಟೆಗಳು ಮತ್ತು ಪಕ್ಷಿಗಳನ್ನು ಸೆರೆಹಿಡಿಯಲು ಛಾಯಾಗ್ರಾಹಕರಿಗೆ ಸಾಕಷ್ಟು ಅವಕಾಶಗಳಿವೆ. ಪಟ್ಟಣದ ಜನಪ್ರಿಯ ತಿನಿಸು ಪುಳಿಯೊಗರೆ. ಈ ಖಾದ್ಯವು ರುಚಿಯಾಗಿದ್ದು, ದೇವತೆಗಳಿಗೆ ಅರ್ಪಣೆ ಮಾಡಲಾಗುತ್ತದೆ.
ಭೇಟಿ ನೀಡಲು ಉತ್ತಮ ಸಮಯ
ಜೂನ್ -ನವೆಂಬರ್ ಮೇಲುಕೋಟೆಗೆ ಭೇಟಿ ನೀಡಲು ಉತ್ತಮ ಸಮಯ. ವರ್ಷವಿಡೀ ತಾಪಮಾನವು ಆಗಾಗ್ಗೆ ಏರಿಳಿತಗೊಳ್ಳುತ್ತದೆ.
ತಲುಪುವುದು ಹೇಗೆ?
ಹತ್ತಿರದ ವಿಮಾನ ನಿಲ್ದಾಣ ಬೆಂಗಳೂರಿನಲ್ಲಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ. ಪಟ್ಟಣದಿಂದ 50 ಕಿ.ಮೀ. ದೂರದಲ್ಲಿರುವ ಮಂಡ್ಯ ರೈಲ್ವೆ ನಿಲ್ದಾಣ ಹತ್ತಿರದ ರೈಲು ನಿಲ್ದಾಣವಾಗಿದೆ. ಬೆಂಗಳೂರಿನಿಂದ ಅಥವಾ ಮೈಸೂರಿನಿಂದ ಹಲವಾರು ಖಾಸಗಿ ಮತ್ತು ಸರ್ಕಾರಿ ಬಸ್ ಸೌಲಭ್ಯವಿದೆ.