ವಹಿವಾಟಿನ ಆರಂಭದಲ್ಲಿ ವಂಚನೆ ಅಥವಾ ಅಪ್ರಾಮಾಣಿಕ ಉದ್ದೇಶ ಇಲ್ಲದೆ ಕೇವಲ ಒಪ್ಪಂದ ಉಲ್ಲಂಘನೆಯಾದ ಮಾತ್ರಕ್ಕೆ ಅದು ಕ್ರಿಮಿನಲ್ ವಂಚನೆ ಪ್ರಕರಣಕ್ಕೆ ಕಾರಣವಾಗದು ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ಅಭಿಪ್ರಾಯಪಟ್ಟಿದೆ.
[ಸರಬ್ಜಿತ್ ಕೌರ್ ಮತ್ತು ಪಂಜಾಬ್ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ಕೇವಲ ಭರವಸೆ ಉಳಿಸಿಕೊಳ್ಳಲಿಲ್ಲ ಎಂಬ ಆರೋಪದ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ರಾಜೇಶ್ ಬಿಂದಾಲ್ ಅವರಿದ್ದ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ.
“ವ್ಯವಹಾರದ ಆರಂಭದಲ್ಲಿ ವಂಚನೆ ಅಥವಾ ಅಪ್ರಾಮಾಣಿಕ ಉದ್ದೇಶ ಇರದೆ ಕೇವಲ ಒಪ್ಪಂದ ಉಲ್ಲಂಘನೆಯಾದ ಮಾತ್ರಕ್ಕೆ ಅದು ವಂಚನೆಗಾಗಿನ ಕ್ರಿಮಿನಲ್ ಮೊಕದ್ದಮೆಗೆ ಕಾರಣವಾಗುವುದಿಲ್ಲ. ಕೇವಲ ಭರವಸೆ ಉಳಿಸಿಕೊಳ್ಳಲು ವಿಫಲವಾದ ಆರೋಪದ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಲು ಸಾಧ್ಯವಿಲ್ಲ” ಎಂದು ಪೀಠ ಹೇಳಿದೆ.
ಸಿವಿಲ್ ವ್ಯಾಜ್ಯಗಳನ್ನು ಇತ್ಯರ್ಥಪಡಿಸುವುದಕ್ಕಾಗಿ ಕಕ್ಷಿದಾರರ ಮೇಲೆ ಒತ್ತಡ ಹೇರಲು ಕ್ರಿಮಿನಲ್ ಪ್ರಕರಣಗಳನ್ನು ಬಳಸದಂತೆಯೂ ನ್ಯಾಯಾಲಯ ಇದೇ ವೇಳೆ ಎಚ್ಚರಿಕೆ ನೀಡಿದೆ.
ದೂರಿನಲ್ಲಿ ಮಾಡಲಾದ ಆರೋಪಗಳು ಸಿವಿಲ್ ಸ್ವರೂಪದಲ್ಲಿವೆ ಎಂಬುದನ್ನು ಗಮನಿಸಿದ ನ್ಯಾಯಾಲಯ “ಸಿವಿಲ್ ವ್ಯಾಜ್ಯವನ್ನು ಕ್ರಿಮಿನಲ್ ಮೊಕದ್ದಮೆಯಾಗಿ ಪರಿವರ್ತಿಸಿ ತಾನು ನೀಡಿದ ಮೊತ್ತವನ್ನು ಮರಳಿಸುವಂತೆ ಮೇಲ್ಮನವಿದಾರರ ಮೇಲೆ ಒತ್ತಡ ಹೇರುವಂತೆ ಇಡೀ ಆಲೋಚನೆ ತೋರುತ್ತಿದೆ. ಕ್ರಿಮಿನಲ್ ನ್ಯಾಯಾಲಯಗಳನ್ನು ಸೇಡು ತೀರಿಸಿಕೊಳ್ಳಲು ಅಥವಾ ಸಿವಿಲ್ ವ್ಯಾಜ್ಯಗಳನ್ನು ಇತ್ಯರ್ಥ ಪಡಿಸಿಕೊಳ್ಳಲು ಒತ್ತಡ ಹೇರುವ ಸಲುವಾಗಿ ಬಳಸಿಕೊಳ್ಳಲಾಗದು. ಕ್ರಿಮಿನಲ್ ಆರೋಪ ಮಾಡಿರುವೆಡೆ ಮಾತ್ರ ಕ್ರಿಮಿನಲ್ ನ್ಯಾಯಾಲಯಗಳು ಪ್ರಕರಣ ದಾಖಲಿಸಿಕೊಳ್ಳಬೇಕು…” ಎಂದು ನ್ಯಾಯಾಲಯ ಹೇಳಿತು. ಈ ಹಿನ್ನೆಲೆಯಲ್ಲಿ ಮೇಲ್ಮನವಿ ಪುರಸ್ಕರಿಸಿದ ನ್ಯಾಯಾಲಯ ಪ್ರಕರಣವನ್ನು ರದ್ದುಗೊಳಿಸಿತು.
ಹಿನ್ನೆಲೆ
ಆಸ್ತಿ ಖರೀದಿಗೆ ಸಂಬಂಧಿಸಿದಂತೆ ಪ್ರಕರಣದ ಆರೋಪಿಯಾಗಿರುವ ಮೇಲ್ಮನವಿದಾರರ ಮೇಲೆ ವಂಚನೆಗೆ ಸಂಬಂಧಿಸಿದ ವಿವಿಧ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿತ್ತು. ಪ್ರತಿವಾದಿ ನೀಡಿದ ಮೂರನೇ ದೂರನ್ನು ಆಧರಿಸಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದರು. ಆದರೆ ಮೊದಲೆರಡು ದೂರುಗಳಲ್ಲಿ ಪ್ರತಿವಾದಿಯು, ಮೇಲ್ಮನವಿದಾರರ ವಿರುದ್ಧ ವಂಚನೆ ಆರೋಪ ಮಾಡದೆ ಒಪ್ಪಂದದ ಹಣ ಹಿಂತಿರುಗಿಸುವಂತೆ ಮಾತ್ರ ಮನವಿ ಮಾಡಿದ್ದರು. ಅಲ್ಲದೆ ದೂರುಗಳು ಆಸ್ತಿ ವಿತರಕರನ್ನು ಉದ್ದೇಶಿಸಿದ್ದವೇ ವಿನಾ ಮೇಲ್ಮನವಿದಾರರನ್ನಲ್ಲ.
ಆದರೆ ಮೂರನೇ ದೂರಿನಲ್ಲಿ ಮಾತ್ರ ಪ್ರತಿವಾದಿಯು ವಂಚನೆ ಮತ್ತಿತರ ಆರೋಪಗಳನ್ನು ಅರ್ಜಿದಾರರ ವಿರುದ್ಧ ಮಾಡಿದ್ದರು. ಇದನ್ನು ಸುಪ್ರೀಂ ಕೋರ್ಟ್’ಲ್ಲಿ ಪ್ರಶ್ನಿಸಲಾಗಿತ್ತು. ದೂರುಗಳ ಅನುಕ್ರಮವನ್ನು ಪರಿಗಣಿಸಿದ ಸುಪ್ರೀಂ ಕೋರ್ಟ್ ಹಣವನ್ನು ಹಿಂಪಡೆಯಲು ಮೇಲ್ಮನವಿದಾರನ ಮೇಲೆ ಒತ್ತಡ ಹೇರಲೆಂದೇ ದೂರುದಾರರು (ಪ್ರಕರಣದ ಪ್ರತಿವಾದಿ) ಮೂರನೇ ದೂರು ನೀಡಿದ್ದಾರೆ ಎಂದು ತಿಳಿಸಿತು.