ಬೆಂಗಳೂರು(Bengaluru): ಮುಂದಿನ 24 ಗಂಟೆಗಳಲ್ಲಿ ಕರ್ನಾಟಕದ ಉತ್ತರ ಒಳನಾಡಿನಲ್ಲಿ ಶೀತಗಾಳಿ ಬೀಸುವ ಸಾಧ್ಯತೆಯಿದ್ದು, ಉಷ್ಣಾಂಶವು 5.5 ಡಿಗ್ರಿ ಸೆಲ್ಷಿಯಸ್’ಗೆ ಕುಸಿಯಬಹುದು ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಈ ಋತುಮಾನದ ಚಳಿಗಾಲದಲ್ಲಿ ಇದೇ ಮೊದಲ ಬಾರಿಗೆ ಹವಾಮಾನ ಇಲಾಖೆ ಶೀತಮಾರುತದ ಎಚ್ಚರಿಕೆ ನೀಡಿದೆ.
ಯಾವುದೇ ಎರಡು ಹವಾಮಾನ ಮಾಪಕ ಕೇಂದ್ರಗಳಲ್ಲಿ ಉಷ್ಣಾಂಶವು 4.5ರಿಂದ 6.5 ಡಿಗ್ರಿ ಸೆಲ್ಷಿಯಸ್’ನಷ್ಟು ಕುಸಿಯುವುದು ದೃಢಪಟ್ಟಾಗ ಅಥವಾ ಉಷ್ಣಾಂಶವು ಕುಸಿದಾಗ ಶೀತ ಮಾರುತದ ಎಚ್ಚರಿಕೆಯನ್ನು ನೀಡಲಾಗುವುದು ಎಂದು ಹವಾಮಾನ ಇಲಾಖೆಯ ವಿಜ್ಞಾನಿಗಳು ಹೇಳಿದ್ದಾರೆ.
ಪ್ರಸ್ತುತ ಬೀದರ್’ನಲ್ಲಿ ಉಷ್ಣಾಂಶವು 5.5 ಡಿಗ್ರಿ ಸೆಲ್ಷಿಯಸ್’ಗೆ ಕುಸಿದಿದೆ. ಬಾಗಲಕೋಟೆ ಮತ್ತು ವಿಜಯಪುರದಲ್ಲಿ 6 ಡಿಗ್ರಿ ಸೆಲ್ಷಿಯಸ್ ಉಷ್ಣಾಂಶ ದಾಖಲಾಗಿದೆ. ಈ ಜಿಲ್ಲೆಗಳ ವಾಡಿಕೆಯ ಕನಿಷ್ಠ ತಾಪಮಾನಕ್ಕಿಂತಲೂ ಈಗ ದಾಖಲಾಗಿರುವ ತಾಪಮಾನವು 5 ಡಿಗ್ರಿಗಳಷ್ಟು ಕಡಿಮೆಯಿದೆ. ಹೀಗಾಗಿಯೇ ಉತ್ತರ ಒಳನಾಡಿನ ಎಲ್ಲ ಜಿಲ್ಲೆಗಳಿಗೂ ಶೀತಮಾರುತದ ಮುನ್ನೆಚ್ಚರಿಕೆ ನೀಡಿದ್ದೇವೆ ಎಂಬ ಹವಾಮಾನ ಇಲಾಖೆಯ ವಿಜ್ಞಾನಿ ರಮೇಶ್ ತಿಳಿಸಿದ್ದಾರೆ.
ಇದೇ ಪರಿಸ್ಥಿತಿ ಮುಂದುವರಿದರೆ ‘ತೀವ್ರ ಶೀತಮಾರುತ’ದ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಲಿದೆ.
ಬೀದರ್’ನಲ್ಲಿ ಕನಿಷ್ಠ ತಾಪಮಾನ
ಬೀದರ್ ಜಿಲ್ಲೆಯಲ್ಲಿ ಕಳೆದ 10 ದಿನಗಳಿಂದ ಕನಿಷ್ಠ ಉಷ್ಣಾಂಶವು 12 ಡಿಗ್ರಿ ದಾಖಲಾಗುತ್ತಿತ್ತು. ಭಾನುವಾರ ಏಕಾಏಕಿ 5.5 ಡಿಗ್ರಿ ಸೆಲ್ಷಿಯಸ್’ಗೆ ಕುಸಿದಿದ್ದು, 2015ರ ನಂತರ ದಾಖಲಾದ ಅತ್ಯಂತ ಕನಿಷ್ಠ ತಾಪಮಾನ ಎಂದು ದಾಖಲೆ ಬರೆಯಿತು. 2022ರಲ್ಲಿ 5.7, 2021ರಲ್ಲಿ 8.6 ಡಿಗ್ರಿ ಸೆಲ್ಷಿಯಸ್ ಕನಿಷ್ಠ ಉಷ್ಠಾಂಶ ದಾಖಲಾಗಿತ್ತು. 2015ರ ಜನವರಿ 10ರಂದು ದಾಖಲಾಗಿದ್ದ 5.8 ಡಿಗ್ರಿ ಸೆಲ್ಷಿಯಸ್ ಇತ್ತೀಚಿನ ದಿನಗಳಲ್ಲಿ ದಾಖಲಾದ ಅತ್ಯಂತ ಕನಿಷ್ಠ ತಾಪಮಾನ ಎನಿಸಿತ್ತು.
ಬೀದರ್ ಜಿಲ್ಲೆಯಲ್ಲಿ ಜನವರಿ 25ರವರೆಗೂ ಕನಿಷ್ಠ ಉಷ್ಠಾಂಶ 12ರಿಂದ 14 ಡಿಗ್ರಿ ಆಸುಪಾಸಿನಲ್ಲಿಯೇ ಇರಬಹುದು. ಚಳಿ ವಾತಾವರಣ ಮುಂದುವರಿಯುವ ಸಾಧ್ಯತೆಯಿದೆ.