ಮನೆ ರಾಷ್ಟ್ರೀಯ ಎಂಎಫ್‌ ಹುಸೇನ್‌ ದಾಖಲೆ ಬ್ರೇಕ್‌ – 163 ಕೋಟಿ ರೂ.ಗೆ ರಾಜಾ ರವಿವರ್ಮ ಚಿತ್ರ ಮಾರಾಟ

ಎಂಎಫ್‌ ಹುಸೇನ್‌ ದಾಖಲೆ ಬ್ರೇಕ್‌ – 163 ಕೋಟಿ ರೂ.ಗೆ ರಾಜಾ ರವಿವರ್ಮ ಚಿತ್ರ ಮಾರಾಟ

0

ನವದೆಹಲಿ : ಭಾರತೀಯ ಕಲಾ ಪಿತಾಮಹ ರಾಜಾ ರವಿವರ್ಮ ಅವರ ಯಶೋಧ ಮತ್ತು ಕೃಷ್ಣ ಚಿತ್ರಕಲೆಯನ್ನು ಉದ್ಯಮಿ, ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸಂಸ್ಥಾಪಕ ಡಾ.ಸೈರಸ್ ಪೂನಾವಾಲಾ ಅವರು ದಾಖಲೆಯ 163 ಕೋಟಿ ರೂ.ಗೆ ಖರೀದಿಸಿದ್ದಾರೆ. ಸಫ್ರಾನ್ ಆರ್ಟ್ ಸಂಸ್ಥೆ ಆನ್‌ಲೈನ್‌ನಲ್ಲಿ ಆಯೋಜಿಸುವ ಸಫ್ರಾನ್ ಆರ್ಟ್ ಸೇಲ್ ಎಂಬ ಹರಾಜಿನಲ್ಲಿ ಯಶೋಧ ಮತ್ತು ಕೃಷ್ಣ ಚಿತ್ರಕಲೆ ದಾಖಲೆಯ ಮೊತ್ತಕ್ಕೆ ಮಾರಾಟವಾಗಿದೆ. ಇದೇ ಮೊದಲ ಬಾರಿಗೆ 167.2 ಕೋಟಿ ರೂ. ಮೌಲ್ಯಕ್ಕೆ ಮಾರಾಟವಾದ ಅತ್ಯಂತ ದುಬಾರಿಯ ಚಿತ್ರಕಲೆ ಇದಾಗಿದೆ.

ಕಳೆದ ವರ್ಷ ಎಂ.ಎಫ್. ಹುಸೇನ್ ಅವರ `ಅನ್‌ಟೈಟಲ್ಡ್’ ಚಿತ್ರಕಲೆ 118 ಕೋಟಿ ರೂ.ಗೆ ದೆಹಲಿ ಮೂಲದ ಕಿರಣ್ ನಾಡರ್ ಅವರು ಖರೀದಿಸಿದ್ದರು. ಆ ದಾಖಲೆಯನ್ನು ಮುರಿದು ರಾಜಾ ರವಿವರ್ಮ ಅವರ ಯಶೋಧ ಮತ್ತು ಕೃಷ್ಣ ಚಿತ್ರಕಲೆ ದಾಖಲೆ ಸೃಷ್ಟಿಸಿದೆ. ಖರೀದಿಸಿದ ಬಳಿಕ ಸೈರಸ್ ಪೂನಾವಾಲಾ ಅವರು ಮಾಹಿತಿ ಹಂಚಿಕೊಂಡಿದ್ದು, ಇದನ್ನು ಖರೀದಿಸುವುದು ಹಕ್ಕು ಹಾಗೂ ಒಂದು ಜವಾಬ್ದಾರಿಯೂ ಹೌದು. ಇದು ಕೇವಲಕ್ಕೆ ಚಿತ್ರಕಲೆಯಲ್ಲ. ರಾಷ್ಟ್ರೀಯ ಸಂಪತ್ತು. ಹಾಗಾಗಿ ಸಾರ್ವಜನಿಕ ವೀಕ್ಷಣೆಗೆ ಇದು ಲಭ್ಯವಾಗಬೇಕು. ಜನರಿಗೆ ನೋಡಲು ಸಿಗುವಂತೆ ನನ್ನ ಕೈಲಾದಷ್ಟು ನಾನು ಪ್ರಯತ್ನಿಸುತ್ತೇನೆ ಎಂದಿದ್ದಾರೆ.

1848ರಲ್ಲಿ ತಿರುವಾಂಕೂರು ರಾಜಪ್ರಭುತ್ವದ ಶ್ರೀಮಂತ ಕುಟುಂಬದಲ್ಲಿ ರಾಜ ರವಿವರ್ಮ ಜನಿಸಿದರು. ಯುರೋಪಿಯನ್ ತೈಲವನ್ನು ಬಳಸಿ ವರ್ಣಚಿತ್ರಗಳನ್ನು ರಚಿಸುತ್ತಿದ್ದರು. ಈ ಮೂಲಕ ಭಾರತೀಯ ಕಲೆಯಲ್ಲಿ ಕ್ರಾಂತಿಯನ್ನುಂಟು ಮಾಡಿದರು. ಈ ಮೂಲಕ ಭಾರತೀಯರಲ್ಲಿ ಸಾಂಸ್ಕೃತಿಕ ಮತ್ತು ಭಾವನಾತ್ಮಕ ಪ್ರಜ್ಞೆಯನ್ನು ಬಿತ್ತಿದ್ದರು. 1890ರ ದಶಕದಲ್ಲಿ ವರ್ಮಾ ಅವರು `ಯಶೋದಾ ಮತ್ತು ಕೃಷ್ಣ’ ಚಿತ್ರಕಲೆಯನ್ನು ರಚಿಸಿದರು. ಅದು ಬಾಲ ಕೃಷ್ಣ ಮತ್ತು ಅವನ ದತ್ತು ತಾಯಿ ಯಶೋದಾಳ ಪ್ರೀತಿಯನ್ನು ಬಿಂಬಿಸುತ್ತದೆ. ಆರಂಭದಲ್ಲಿ 80 ಕೋಟಿ ರೂ.ಯಿಂದ 120 ಕೋಟಿ ರೂ.ಯವರಗೆ ಮಾರಾಟವಾಗುವುದಾಗಿ ಅಂದಾಜಿಸಲಾಗಿತ್ತು. ಕೊನೆಗೆ 163 ಕೋಟಿ ರೂ.ಗೆ ಮಾರಾಟವಾಗಿದೆ.