ಮನೆ ಸಾಹಿತ್ಯ “ಕಾಲಾಯ ತಸ್ಮೈ ನಮಃ”: ಕವಿತೆ

“ಕಾಲಾಯ ತಸ್ಮೈ ನಮಃ”: ಕವಿತೆ

0

“ಕಾಲಾಯ ತಸ್ಮೈ ನಮಃ”

ಹಾದಿಬೀದಿ ಕಲ್ಲಾಗಿ
ಕಂಡ ಕಂಡವರ
ಕಾಲ್ತುಳಿತಕೆ ಸಿಕ್ಕು
ಕಂಬನಿಗರೆಯುತ್ತಾ
ಶಾಪವಿಮೋಚನಾ
ಕಾಲಕ್ಕೆ ಕಾಯುತ್ತಾ
ಕಲ್ಲೊಳಗೆ ಕಲ್ಲಾಗಿ
ಕಂಗೆಟ್ಟು ಕುಳಿತ
ಅಹಲ್ಯೆ ಅರುಹಿದ್ದು
“ಕಾಲಾಯ ತಸ್ಮೈ ನಮಃ”

ಒಂದೊಂದೆ ಹಣ್ಣುಗಳ
ಹೆಕ್ಕಿ ಹೆಕ್ಕಿ ಕೂಡಿಟ್ಟು
ಸಾವಿಗೂ ಸಂಕೋಲೆಯಿಟ್ಟು
ಸನಿಹ ಬಾರದಂತೆ
ಸೆರಗೊಡ್ಡಿ ಬೇಡುತ
ಹಣ್ಣುಗಳರ್ಪಿಸಲೆಂದು
ಹಪಹಪಿಸಿ ನಿಂತ
ಹಣ್ಣುಹಣ್ಣು ಮುದುಕಿ
ಶಬರಿ ಧ್ಯಾನಿಸಿದ್ದು
“ಕಾಲಾಯ ತಸ್ಮೈ ನಮಃ”

ಕತ್ತರಿಸಿದ ರೆಕ್ಕೆಯಿಂದ
ಸುರಿವ ನೆತ್ತರಧಾರೆ
ಎದುರು ಧೃತಿಗೆಡದೆ
ನೋವ ಸಹಿಸುತ
ವಿಷಯ ತಿಳಿಸಲೆಂದೇ
ಉಸಿರ ಬಿಗಿಹಿಡಿದು
ಮೋಕ್ಷಕಾಲಕೆ ಕಾದು
ನರಳುತ್ತಾ ಮಲಗಿದ್ದ
ಜಟಾಯು ಜಪಿಸಿದ್ದು
“ಕಾಲಾಯ ತಸ್ಮೈ ನಮಃ”

ಕಲ್ಲಿರಲಿ ಮುಪ್ಪಿರಲಿ
ಅರ್ಧಜೀವ ಆಗಿರಲಿ
ಎಲ್ಲರೂ ಕಾಲನೆದುರು
ಕಾರುಣ್ಯಕೆ ಕಾಯಲೇಬೇಕು
ಬದುಕಿನ ಭಿಕ್ಷೆಯೋ
ಮೋಕ್ಷದ ರಕ್ಷೆಯೋ
ಬೆಳಕಿನ ಕಕ್ಷೆಯೋ
ಸಕಲಕೂ ತಪಿಸಲೇಬೇಕು
ಕರಮುಗಿದು ಹೇಳಲೇಬೇಕು
“ಕಾಲಾಯ ತಸ್ಮೈ ನಮಃ

ಹಿಂದಿನ ಲೇಖನಕರ್ನಾಟಕ ಮೂಲದ ಸಿನಿ ಶೆಟ್ಟಿಗೆ `ಮಿಸ್ ಇಂಡಿಯಾ’ ಮುಕುಟ
ಮುಂದಿನ ಲೇಖನಅಪಘಾತ: ಹೋಂಗಾರ್ಡ್ ಸಾವು