ವಾಷಿಂಗ್ಟನ್ : ಇರಾನ್ ವಿರುದ್ಧ ಮಿಲಿಟರಿ ದಾಳಿ ನಡೆಸಿದರೆ ಅದು ನಿರ್ಣಾಯಕ ಹೊಡೆತ ನೀಡುವಂತಿರಬೇಕು. ವಾರಗಳು ಅಥವಾ ತಿಂಗಳುಗಳ ಕಾಲ ಎಳೆಯುವಂತಿರಬಾರದು ಎಂದು ಡೊನಾಲ್ಡ್ ಟ್ರಂಪ್ ತಮ್ಮ ರಾಷ್ಟ್ರೀಯ ಭದ್ರತಾ ತಂಡಕ್ಕೆ ಸೂಚಿಸಿದ್ದಾರೆ.
ಇರಾನ್ ವಿರುದ್ಧ ಕಾರ್ಯಾಚರಣೆ ಸಂಬಂಧ ಡೊನಾಲ್ಡ್ ಟ್ರಂಪ್ ತಮ್ಮ ಅಧಿಕೃತ ನಿವಾಸ ಶ್ವೇತಭವನದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ. ಈ ವೇಳೆ ನಮ್ಮ ದಾಳಿಯ ನಂತರವೂ ಇರಾನ್ ಆಡಳಿತ ಶೀಘ್ರವಾಗಿ ಕುಸಿಯುತ್ತದೆ ಎನ್ನುವುದಕ್ಕೆ ಯಾವುದೇ ಖಾತರಿ ಇಲ್ಲ ಎಂದು ಟ್ರಂಪ್ ಅವರ ಸಲಹೆಗಾರರು ತಿಳಿಸಿರುವುದಾಗಿ ಮೂಲಗಳನ್ನು ಆಧಾರಿಸಿ ಅಮೆರಿಕದ ಮಾಧ್ಯಮವೊಂದು ವರದಿ ಮಾಡಿದೆ.
ಅಮೆರಿಕದ ಸೆಂಟ್ರಲ್ ಕಮಾಂಡ್ ಇರಾನ್ ವಿರುದ್ಧದ ಮಿಲಿಟರಿ ಆಯ್ಕೆಗಳನ್ನು ಸಿದ್ಧಪಡಿಸಿ ಟ್ರಂಪ್ ಮುಂದೆ ಈ ಹಿಂದೆ ಪ್ರಸ್ತುತಪಡಿಸಿತ್ತು. ಈಗ ಅವುಗಳನ್ನು ಮತ್ತಷ್ಟು ಪರಿಷ್ಕರಣೆ ಮಾಡಲಾಗಿದೆ ಎಂದು ವರದಿಯಾಗಿದೆ. ನಾವು ದಾಳಿ ನಡೆಸಿದ ಬಳಿಕ ಇರಾನ್ ಯಾವ ರೀತಿ ಪ್ರತಿದಾಳಿ ನಡೆಸಿ ಪ್ರತೀಕಾರ ತೀರಿಸಿಕೊಳ್ಳಬಹುದು? ಎಲ್ಲೆಲ್ಲಿ ದಾಳಿ ನಡೆಸಬಹುದು ಎನ್ನುವುದರ ಬಗ್ಗೆ ಶ್ವೇತಭವನದ ಅಧಿಕಾರಿಗಳು ಮಂಗಳವಾರ ಗಂಟೆಗಂಟಲೇ ಚರ್ಚೆ ನಡೆಸಿದ್ದಾರೆ.
ಜೂನ್ನಲ್ಲಿ ಆಪರೇಷನ್ ಮಿಡ್ನೈಟ್ ಹ್ಯಾಮರ್ ಹೆಸರಿನಲ್ಲಿ ಇರಾನ್ನ ಪರಮಾಣು ನೆಲೆಗಳ ಮೇಲೆ ಅಮೆರಿಕ ಬಾಂಬ್ ದಾಳಿ ನಡೆಸಿತ್ತು. ಈ ದಾಳಿಯ ನಂತರ ಇರಾನ್ ಕತಾರ್ನಲ್ಲಿರುವ ಅಮೆರಿಕದ ಅಲ್ ಉದೈದ್ ವಾಯು ನೆಲೆಯ ಮೇಲೆ ಏರ್ಸ್ಟ್ರೈಕ್ ಮಾಡಿತ್ತು. ಆದರೆ ಈ ದಾಳಿಗೂ ಮುನ್ನ ಇರಾನ್ ಅಮೆರಿಕಕ್ಕೆ ಮುಂಚಿತವಾಗಿಯೇ ಎಚ್ಚರಿಕೆ ನೀಡಿತ್ತು. ಹೀಗಾಗಿ ಅಮೆರಿಕದ ಪಡೆಗಳಿಗೆ ಯಾವುದೇ ಹಾನಿಯಾಗಿರಲಿಲ್ಲ.
ಕತಾರ್ನಲ್ಲಿರುವ ಅಲ್ ಉದೈದ್ ವಾಯುನೆಲೆಯಿಂದ ಅಮೆರಿಕದ 10 ಸಾವಿರ ಸೈನಿಕರನ್ನು ಹಿಂದಕ್ಕೆ ಕರೆಸಿಕೊಂಡಿತ್ತು. ಮಧ್ಯಪ್ರಾಚ್ಯದಲ್ಲಿರುವ ಅತಿ ದೊಡ್ಡ ಅಮೆರಿಕದ ಮಿಲಿಟರಿ ನೆಲೆ ಇದಾಗಿದೆ. ಇರಾನ್ ವಿರುದ್ಧ ಹೋರಾಟಕ್ಕೆ ಕೆಲ ದಿನಗಳಿಂದ ಅಮೆರಿಕ ಸಿದ್ಧತೆ ನಡೆಸುತ್ತಿದೆ. ಆದರೆ ದಾಳಿ ಯಾವಾಗ ಮಾಡುತ್ತದೆ ಎನ್ನುವುದೇ ಕುತುಹೂಲ ಮೂಡಿಸಿದೆ.















