ಮನೆ ರಾಜಕೀಯ ಜಿಲ್ಲಾಧಿಕಾರಿ ಪರಿಶೀಲನೆ ನಡೆಸುವವರೆಗೆ ಗಣಿಗಳು ಸ್ಥಗಿತ: ವಿ.ಸೋಮಣ್ಣ

ಜಿಲ್ಲಾಧಿಕಾರಿ ಪರಿಶೀಲನೆ ನಡೆಸುವವರೆಗೆ ಗಣಿಗಳು ಸ್ಥಗಿತ: ವಿ.ಸೋಮಣ್ಣ

0

ಚಾಮರಾಜನಗರ: ಜಿಲ್ಲಾಧಿಕಾರಿ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸುವವರೆಗೆ ಜಿಲ್ಲೆಯಲ್ಲಿರುವ ಎಲ್ಲ ಗಣಿಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಶನಿವಾರ ತಿಳಿಸಿದರು.

ಗುಂಡ್ಲುಪೇಟೆ ತಾಲ್ಲೂಕಿನ ಮಡಹಳ್ಳಿಯಲ್ಲಿ ಕ್ವಾರಿ ಗುಡ್ಡ ಕುಸಿತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸುದ್ದಿಗೋಷ್ಠಿ ನಡೆಸಿದ ಅವರು, ‘ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ. ಇಂತಹ ಘಟನೆಗಳು ಪುನರಾವರ್ತನೆಯಾಗಬಾರದು. ಜಿಲ್ಲೆಯಲ್ಲಿ ನಡೆಯುತ್ತಿರುವ ಎಲ್ಲ ಕಲ್ಲು ಗಣಿಗಳ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಜಿಲ್ಲಾಧಿಕಾರಿಗಳು, ಗಣಿ ಇಲಾಖೆಯ ಅಧಿಕಾರಿಗಳ ತಂಡವು ಜಿಲ್ಲೆಯ ಪ್ರತಿ ಗಣಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ. ಎಲ್ಲ ದಾಖಲೆಗಳು ಸರಿ ಇದ್ದರೆ, ನಿಯಮ ಪ್ರಕಾರ ನಡೆಯುತ್ತಿದ್ದರೆ ತಕ್ಷಣವೇ ಗಣಿಗಾರಿಕೆ ನಡೆಸಲು ಅವಕಾಶ ನೀಡಲಾಗುವುದು’ ಎಂದರು.

‘ಒಂದು ಎಕರೆ, ಎರಡು ಎಕರೆಯಲ್ಲಿ ಗಣಿಗಾರಿಕೆ ನಡೆಸಲು ಪರವಾನಗಿ ಪಡೆದು, ಜಾಗ ಒತ್ತುವರಿ ಮಾಡಿ ಹೆಚ್ಚು ಪ್ರದೇಶದಲ್ಲಿ ಕಲ್ಲಿನ ಗಣಿಗಾರಿಕೆ ನಡೆಸಲಾಗುತ್ತಿದೆ ಎಂಬ ದೂರುಗಳು ಇವೆ. ಅಧಿಕಾರಿಗಳು ಈ ಬಗ್ಗೆ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಲಿದ್ದಾರೆ. ಅಕ್ರಮವಾಗಿ ನಡೆಯುತ್ತಿದೆ ಎಂದು ತಿಳಿದು ಬಂದರೆ ಗಣಿಯನ್ನು ಸ್ಥಗಿತಗೊಳಿಸಲಾಗುವುದು. ಭಾನುವಾರದಿಂದಲೇ ಈ ಕಾರ್ಯ ನಡೆಯಲಿದ್ದು, ತಿಂಗಳ ಅವಧಿಯಲ್ಲಿ ಈ ಪೂರ್ಣ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಆಗ ಜಿಲ್ಲೆಯಲ್ಲಿ ನಡೆಯುತ್ತಿರುವ ಸಕ್ರಮ ಹಾಗೂ ಅಕ್ರಮ ಗಣಿಗಾರಿಕೆ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ” ಎಂದು ತಿಳಿಸಿದರು.

”ದುರಂತ ಸಂಭವಿಸಿದ ಮಡಹಳ್ಳಿ ಕ್ವಾರಿಯ ಗಣಿ ಗುತ್ತಿಗೆ ಪಡೆದಿದ್ದ ಸ್ಥಳೀಯ ವ್ಯಕ್ತಿ ಕೇರಳದವರೊಬ್ಬರಿಗೆ ಉಪ ಗುತ್ತಿಗೆ ನೀಡಿದ್ದಾರೆ. ಇದಕ್ಕೆ ನಿಯಮದಲ್ಲಿ ಅವಕಾಶ ಇದೆಯೇ ಎಂಬುದು ಗೊತ್ತಿಲ್ಲ. ಅದನ್ನು ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ. ತಕ್ಷಣದಿಂದಲೇ ಈ ಕ್ವಾರಿಯನ್ನು ಸ್ಥಗಿತಗೊಳಿಸಲು ಸೂಚಿಸಿದ್ದೇನೆ. ಮುಂದೆ ಇಲ್ಲಿ ಗಣಿಗಾರಿಕೆ ನಡೆಸಲು ಅವಕಾಶ ನೀಡುವುದಿಲ್ಲ. ಗಣಿ ಗುತ್ತಿಗೆ ಪಡೆದಿರುವ ಮಹೇಂದ್ರಪ್ಪ, ಉಪ ಗುತ್ತಿಗೆ ಪಡೆದಿರುವ ಕೇರಳದ ಹಕೀಂ ಹಾಗೂ ಮ್ಯಾನೇಜರ್ ನವೀದ್ ಎಂಬುವವರ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಗುತ್ತಿಗೆ ಪಡೆದ ಮಹೇಂದ್ರಪ್ಪ ಅವರನ್ನು ಶೀಘ್ರ ಬಂಧಿಸಲಾಗುವುದು’ ಎಂದರು.

ಹಿಂದಿನ ಲೇಖನಅಂತರರಾಜ್ಯ ಜಲವಿವಾದ ಕಾಯ್ದೆಗೆ ಸಂಪೂರ್ಣ ತಿದ್ದುಪಡಿ ಅಗತ್ಯ: ಸಿಎಂ ಬೊಮ್ಮಾಯಿ
ಮುಂದಿನ ಲೇಖನಬಿಬಿಎಂಪಿ ಆಯುಕ್ತ ಗುಪ್ತಾ ಅಫಿಡವಿಟ್‌ ಸಲ್ಲಿಕೆ ನಂತರ ಕರುಣೆ ತೋರಬೇಕೆ, ಬೇಡವೇ ಎಂದು ನಿರ್ಧಾರ: ಹೈಕೋರ್ಟ್‌