ಮನೆ ಸ್ಥಳೀಯ ತಹಶೀಲ್ದಾರ್ ಎಸಿ-ಡಿಸಿ ನ್ಯಾಯಾಲಯಗಳ ತಕರಾರು ಪ್ರಕರಣಗಳ ಇತ್ಯರ್ಥಕ್ಕೆ ಗಡುವು ನೀಡಿದ ಸಚಿವ ಕೃಷ್ಣ ಬೈರೇಗೌಡ

ತಹಶೀಲ್ದಾರ್ ಎಸಿ-ಡಿಸಿ ನ್ಯಾಯಾಲಯಗಳ ತಕರಾರು ಪ್ರಕರಣಗಳ ಇತ್ಯರ್ಥಕ್ಕೆ ಗಡುವು ನೀಡಿದ ಸಚಿವ ಕೃಷ್ಣ ಬೈರೇಗೌಡ

0

61.34 ಕೋಟಿ ರೂ. ಕಾಮಗಾರಿ ಪೂರ್ಣಗೊಳಿಸಲು ತಾಕೀತು

ಮೈಸೂರು: ಆರು ತಿಂಗಳಿಂದ ಐದು ವರ್ಷಗಳ ವರೆಗಿನ ಎಲ್ಲ ತಕರಾರು ಪ್ರಕರಣಗಳನ್ನೂ ತಹಶೀಲ್ದಾರ್, ಎಸಿ ಹಾಗೂ ಡಿಸಿ ನ್ಯಾಯಾಲಯಗಳು ಮೂರು ತಿಂಗಳ ಕಾಲಮಿತಿಯಲ್ಲಿ ಇತ್ಯರ್ಥಪಡಿಸಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಗಡುವು ನೀಡಿದರು.

ಮೈಸೂರು ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಕಂದಾಯ ಇಲಾಖೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ ಅವರು, “ಜನರಿಗೆ ಉತ್ತಮ ಆಡಳಿತ ನೀಡುತ್ತೇವೆ ಎಂದು ನಮ್ಮ ಸರ್ಕಾರ ಭರವಸೆ ನೀಡಿದೆ. ಅಧಿಕಾರಿಗಳ ಸಹಕಾರ ಇಲ್ಲದೆ ನಾವು ಕೊಟ್ಟ ಭರವಸೆ ಈಡೇರಿಸಲು ಸಾಧ್ಯವಿಲ್ಲ. ಆದರೆ, ಅಧಿಕಾರಿಗಳು ಉತ್ತಮ ಆಡಳಿತಕ್ಕೆ ಅನುವಾಗುವ ಬದಲಾಗಿ ಜನ ಸಾಮಾನ್ಯರ ಸಾವಿರಾರು ತಕರಾರು ಪ್ರಕರಣಗಳನ್ನು ಇತ್ಯರ್ಥಗೊಳಿಸದೆ ಸರ್ಕಾರವನ್ನು ಇಕ್ಕಟ್ಟಿಗೆ ಸಿಕ್ಕಿಸಿದ್ದಾರೆ” ಎಂದು ಅಸಮಾಧಾನ ಹೊರಹಾಕಿದರು.

”ಮೈಸೂರು ಪ್ರಾದೇಶಿಕ ವಿಭಾಗದ ವ್ಯಾಪ್ತಿಯ ತಹಶೀಲ್ದಾರ್ ನ್ಯಾಯಾಲಯಗಳಲ್ಲಿ 6 ತಿಂಗಳಿಂದ 5 ವರ್ಷಗಳವರೆಗಿನ ಒಟ್ಟು 4,362 ತಕರಾರು ಪ್ರಕರಣಗಳು ಈವರೆಗೆ ಇತ್ಯರ್ಥವಾಗದೆ ಬಾಕಿ ಉಳಿದಿವೆ. ಇದರಿಂದಾಗಿ ಸಂಬಂಧಪಟ್ಟವರು ದಿನಂಪ್ರತಿ ತಹಶೀಲ್ದಾರ್ ಕಚೇರಿಗೆ ಅಲೆಯುವಂತಾಗಿದೆ. ಹೀಗಾಗಿ ತಹಶೀಲ್ದಾರ್ ಕಚೇರಿಯಲ್ಲಿ ಬಾಕಿ ಉಳಿದಿರುವ ಪ್ರಕರಣಗಳನ್ನು ಮುಂದಿನ 3 ತಿಂಗಳ ಒಳಗಾಗಿ ಇತ್ಯರ್ಥಗೊಳಿಸಬೇಕು” ಎಂದು ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಸೂಚಿಸಿದರು.

ಉಪ ವಿಭಾಗಾಧಿಕಾರಿ ಜಿಲ್ಲಾಧಿಕಾರಿಗಳಿಗೂ ಗಡುವು!

ಮೈಸೂರು ಪ್ರಾದೇಶಿಕ ವಿಭಾಗದ ಉಪ ವಿಭಾಗಾಧಿಕಾರಿ (ಎಸಿ) ಹಾಗೂ ಜಿಲ್ಲಾಧಿಕಾರಿ (ಡಿಸಿ) ನ್ಯಾಯಾಲಯಗಳಲ್ಲೂ ಸಾಕಷ್ಟು ತಕರಾರು ಪ್ರಕರಣಗಳು ಬಾಕಿ ಉಳಿದಿವೆ.
ಕೊಳ್ಳೆಗಾಲ 540, ಚಿಕ್ಕಮಗಳೂರು 473, ತರೀಕರೆ 952, ಮಂಗಳೂರು 3627, ಪುತ್ತೂರು 243, ಹಾಸನ 678, ಸಕಲೇಶಪುರ 189, ಮಡಿಕೇರಿ 827, ಮಂಡ್ಯ 1456, ಪಾಂಡವಪುರ 1111, ಮೈಸೂರು 1535, ಹುಣಸೂರು 751, ಮತ್ತು ಕುಂದಾಪುರದಲ್ಲಿ 2061 ಪ್ರಕರಣಗಳು ಸೇರಿದಂತೆ ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಒಟ್ಟಾರೆಯಾಗಿ 14,444 ಪ್ರಕರಣಗಳು ಬಾಕಿ ಇವೆ.

ಜಿಲ್ಲಾಧಿಕಾರಿ ನ್ಯಾಯಾಲಯಗಳ ಪೈಕಿ ಚಿಕ್ಕಮಗಳೂರು 652, ಚಾಮರಾಜನಗರ 213, ದಕ್ಷಿಣ ಕನ್ನಡ 507, ಹಾಸನ 547, ಕೊಡಗು 140, ಮಂಡ್ಯ 320, ಮೈಸೂರು 1040, ಉಡುಪಿ 130 ಪ್ರಕರಣಗಳು ಸೇರಿದಂತೆ ಒಟ್ಟಾರೆಯಾಗಿ 3,513 ಪ್ರಕರಣಗಳು ಬಾಕಿ ಇವೆ.

ಪರಿಶೀಲನೆಯ ವೇಳೆ ಎಸಿ-ಡಿಸಿ ನ್ಯಾಯಾಲಯಗಳಲ್ಲೂ ಬಾಕಿ ಇರುವ ಪ್ರಕರಣಗಳ ಬಗ್ಗೆ ಅಸಮಾಧಾನ ಹೊರಹಾಕಿದ ಸಚಿವರು, “ಉನ್ನತ ಅಧಿಕಾರಿಗಳೇ ತಮ್ಮ ನ್ಯಾಯಾಲಯದಲ್ಲಿರುವ ಪ್ರಕರಣಗಳನ್ನು ಇತ್ಯರ್ಥಪಡಿಸದಿದ್ದರೆ, ತಹಶೀಲ್ದಾರರಿಂದ ನೀವು ಹೇಗೆ ಪರಿಣಾಮಕಾರಿ ಕೆಲಸವನ್ನು ನಿರೀಕ್ಷೆ ಮಾಡಲು ಸಾಧ್ಯ. ಹೀಗಾಗಿ ನೀವು ಇತರರಿಗೆ ತಪ್ಪು ಉದಾಹರಣೆಯಾಗಬೇಡಿ” ಎಂದು ಸಲಹೆ ನೀಡಿದರು.

ಹೌಸಿಂಗ್ ಸ್ಕೀಮ್ ದುರುಪಯೋಗವಾಗಬಾರದು

ಮಳೆ-ಪ್ರವಾಹದ ಕಾರಣಕ್ಕೆ ಮನೆ ಕಳೆದುಕೊಂಡವರಿಗೆ ನಾವು ತ್ವರಿತವಾಗಿ ಹಣ ಬಿಡುಗಡೆ ಮಾಡುತ್ತಿದ್ದೇವೆ. ಈ ವಿಚಾರದಲ್ಲಿ ನಾವು ಬೇರೆ ರಾಜ್ಯಗಳಿಗೆ ಮಾದರಿಯಾಗಿದ್ದೇವೆ. 2019 ರಿಂದ 2022ರ ಅವಧಿಯಲ್ಲಿ ಮೈಸೂರು ವಿಭಾಗದ 9 ಜಿಲ್ಲೆಗಳಲ್ಲಿ ಸಾವಿರಾರು ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಮನೆ ದುರಸ್ಥಿಗೂ ಫಲಾನುಭವಿಗಳಿಗೆ ಹಣ ಮಂಜೂರು ಮಾಡಲಾಗಿದೆ. ಆದರೆ, ಕೆಲವರು ಈ ಯೋಜನೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದನ್ನು ಒಪ್ಪಲು ಸಾಧ್ಯವಿಲ್ಲ. ಜಿಲ್ಲಾಧಿಕಾರಿಗಳೂ ಈ ಬಗ್ಗೆ ಸಮಗ್ರ ಪರೀಲನೆ ನಡೆಸದೆ ಸರ್ಕಾರವನ್ನು ಮುಜುಗರಕ್ಕೀಡು ಮಾಡುತ್ತಿದ್ದಾರೆ ಎಂದು ಸಚಿವ ಕೃಷ್ಣ ಬೈರೇಗೌಡ ಬೇಸರ ವ್ಯಕ್ತಪಡಿಸಿದರು.

ಮಳೆಯಿಂದ ಮನೆ ರಿಪೇರಿಯಾದವರಿಗೆ ಸರ್ಕಾರ 50,000 ರೂ ಹಾಗೂ ಸಂಪೂರ್ಣ ಮನೆ ಕಳೆದುಕೊಂಡವರಿಗೆ ಮನೆ ಕಳೆದುಕೊಂಡದ್ದಕ್ಕೆ 1.3 ಲಕ್ಷ ಹಾಗೂ ಮನೆ ಮರು ನಿರ್ಮಾಣಕ್ಕೆ 3.7 ಲಕ್ಷ ರೂ. ಸೇರಿ ಒಟ್ಟಾರೆ 5 ಲಕ್ಷ ರೂ. ನೀಡುತ್ತೇವೆ. ಆದರೆ, ಕೆಲವು ಫಲಾನುಭವಿಗಳು ಮನೆಯನ್ನೇ ಕಟ್ಟಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳ ಬಳಿ ಕಾರಣ ಇಲ್ಲ.

2018-19ರಲ್ಲಿ ಫಲಾನುಭವಿಗಳಿಗೆ ಮನೆ ರಿಪೇರಿಗೆ ಹಣ ನೀಡಲಾಗಿದೆ. ಆದರೆ, ಹಣ ಪಡೆದವರು ಇನ್ನೂ ಮನೆ ರಿಪೇರಿ ಮಾಡಿದ ದಾಖಲೆಯೇ ಇಲ್ಲ. ಐದು ವರ್ಷಗಳಿಂದ ಫಲಾನುಭವಿಗಳು ರಿಪೇರಿ ಮಾಡದ ಮನೆಯಲ್ಲೇ ಇದ್ದಾರ? ಇದು ಹೇಗೆ ಸಾಧ್ಯ ? ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದ ಸಚಿವರು ಜಿಲ್ಲಾಧಿಕಾರಿಗಳು ಇನ್ನಾದರೂ ಫಲಾನುಭವಿಗಳಿಗೆ ಹಣ ಬಿಡುಗಡೆಗೆ ಮುನ್ನ ಎಚ್ಚರವಹಿಸಬೇಕು. ಮನೆ ನಿರ್ಮಾಣಕ್ಕೆ ಸಂಬಂಧಿಸಿದ ಹಳೆಯ ಕಡತಗಳನ್ನು ಶೀಘ್ರ ವಿಲೇವಾರಿಗೊಳಿಸಿ ಎಂದು ತಿಳಿಸಿದರು.

ಅಲ್ಲದೆ, “ಉಪ ವಿಭಾಗಾಧಿಕಾರಿಗಳು ತಮ್ಮ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳ ಪೈಕಿ 6 ತಿಂಗಳಿಗಿಂತ ಹಳೆಯ ಎಲ್ಲಾ ಪ್ರಕರಣಗಳೂ ಸೇರಿದಂತೆ ಉಳಿದ 7000 ಪ್ರಕರಣಗಳನ್ನೂ ಮುಂದಿನ 4 ತಿಂಗಳಲ್ಲಿ ವಿಲೇವಾರಿ ಮಾಡಬೇಕು. ಜಿಲ್ಲಾಧಿಕಾರಿಗಳೂ ಸಹ ತಮ್ಮ ನ್ಯಾಯಾಲಯದಲ್ಲಿರುವ 6 ತಿಂಗಳಿಗಿಂತ ಹಳೆಯ ಎಲ್ಲಾ ಪ್ರಕರಣಗಳನ್ನೂ ಮುಂದಿನ 3 ತಿಂಗಳಲ್ಲಿ ವಿಲೇವಾರಿ ಮಾಡಬೇಕು. ಮುಂದಿನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಫಲಿತಾಂಶ ನೀಡಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಸೂಚಿಸಿದರು.

ಇದರ ಜೊತೆಗೆ ತಹಶೀಲ್ದಾರರು ವಾರದಲ್ಲಿ ಕನಿಷ್ಟ 2 ದಿನ ನ್ಯಾಯಾಲಯ ನಡೆಸಿ ಪ್ರಕರಣಗಳ ವಿಲೇವಾರಿಗೆ ವೇಗ ನೀಡಬೇಕು. ಉಪವಿಭಾಗಾಧಿಕಾರಿಗಳು ವಾರದಲ್ಲಿ 3 ದಿನ ನ್ಯಾಯಾಲಯ ನಡೆಸಿ ಬಾಕಿ ಪ್ರಕರಣಗಳನ್ನು ತ್ವರಿತ ವಿಲೇವಾರಿಗೊಳಿಸಿ ಜನರಿಗೆ ಆಗುತ್ತಿರುವ ವಿಳಂಬವನ್ನು ಪರಿಹರಿಸಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಗಿಯಿ. ಅಧಿಕ ಸಂಖ್ಯೆಯಲ್ಲಿ ಪ್ರಕರಣಗಳ ವಿಲೇವಾರಿ ನೆಪದಲ್ಲಿ ಗುಣಮಟ್ಟದ ಜೊತೆಗೆ ಹೊಂದಾಣಿಕೆ ಸಲ್ಲದು ಎಂದು ಸಚಿವರು ಅಧಿಕಾರಿಗಳಿಗೆ ತಾಕೀತು ಮಾಡಿದರು.

61.34 ಕೋಟಿ ರೂ. ಕಾಮಗಾರಿ ಪೂರ್ಣಗೊಳಿಸಿ

ಸಾರ್ವಜನಿಕ ಆಸ್ತಿಗಳಿಗೆ ಉಂಟಾಗಿರುವ ಹಾನಿ ದುರಸ್ಥಿಗೆ 2019ರಿಂದ 2022 ರ ಅವಧಿಯಲ್ಲಿ ಮಂಜೂರಾಗಿ ಇನ್ನೂ ಪೂರ್ಣಗೊಳ್ಳದ 61.34 ಕೋಟಿ ರೂ. ವೆಚ್ಚದ ಕಾಮಗಾರಿಗಳ ಬಗ್ಗೆಯೂ ಸಚಿವ ಕೃಷ್ಣ ಬೈರೇಗೌಡ ಅಸಮಾಧಾನ ಹೊರಹಾಕಿದರು.

ಈ ಕಾಮಗಾರಿಗಳು ಇನ್ನೂ ಪೂರ್ಣಗೊಳ್ಳದಿರಲು ಕಾರಣವೇನು? ಎಂದು ಜಿಲ್ಲಾಧಿಕಾರಿಗಳ ಎದುರು ಕಟು ಪ್ರಶ್ನೆಗಳನ್ನಿಟ್ಟ ಸಚಿವರು ಮುಂದಿನ 15 ದಿನಗಳಲ್ಲಿ ಈ ಎಲ್ಲಾ ಕಾಮಗಾರಿಗಳೂ ಪೂರ್ಣಗೊಳಿಸಬೇಕು, ಸಂಬಂಧಪಟ್ಟ ಕಾಮಗಾರಿಗೆ ಹಣ ಪಾವತಿ ಮಾಡಬೇಕು. ಕಳೆದ ವರ್ಷದ ಬಾಕಿಯನ್ನೂ ಸಂಪೂರ್ಣವಾಗಿ ವಿಲೇವಾರಿ ಮಾಡಬೇಕು ಎಂದು ಸಭೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.