ಮನೆ ರಾಜ್ಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ರಿಂದ ಮಹತ್ವದ ಹೆಜ್ಜೆ: ಗೃಹಲಕ್ಷ್ಮಿ ಸಂಘಗಳ ಮೂಲಕ ಆರ್ಥಿಕ ಕ್ರಾಂತಿ

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ರಿಂದ ಮಹತ್ವದ ಹೆಜ್ಜೆ: ಗೃಹಲಕ್ಷ್ಮಿ ಸಂಘಗಳ ಮೂಲಕ ಆರ್ಥಿಕ ಕ್ರಾಂತಿ

0

ಬೆಂಗಳೂರು: ರಾಜ್ಯದ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಮತ್ತೊಂದು ಉತ್ಸಾಹಭರಿತ ಸುದ್ದಿ ಬಂದಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು “ಗೃಹಲಕ್ಷ್ಮಿ ಸಂಘ”ಗಳನ್ನು ರಾಜ್ಯದಾದ್ಯಾಂತ ರಚಿಸುವ ಮಹತ್ವದ ಯೋಜನೆ ಘೋಷಿಸಿದ್ದು, ಮಹಿಳೆಯರ ಆರ್ಥಿಕ ಸಬಲತೆಗೆ ಹೊಸ ದಾರಿ ತೆರೆದಿದ್ದಾರೆ.

ವಿಧಾನಸೌಧದಲ್ಲಿ ಇಂದು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿ ಮಹಿಳೆಯರಿಂದ ಸ್ವಸಹಾಯ/ಸ್ತ್ರೀ ಶಕ್ತಿ ಗುಂಪುಗಳನ್ನು ರಚಿಸುವ ಸಂಬಂಧ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಸಚಿವರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೂಲಕ ‘ಗೃಹಲಕ್ಷ್ಮಿ’ ಸಂಘವನ್ನು ರಚಿಸಲಾಗುವುದು ಎಂದರು.

ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆಯಡಿ 1.25 ಕೋಟಿ ಫಲಾನುಭವಿಗಳಿದ್ದಾರೆ. ಪ್ರತಿ ತಿಂಗಳು ಸಂದಾಯ ಆಗುತ್ತಿರುವ 2 ಸಾವಿರ ರೂಪಾಯಿ ಹಣವನ್ನು ಇನ್ನಷ್ಟು ಸದುಪಯೋಗ ಪಡಿಸಿಕೊಳ್ಳುವ ನಿಟ್ಟಿನಲ್ಲಿ ಗೃಹಲಕ್ಷ್ಮಿ ಸಂಘಗಳನ್ನು ರಚಿಸಲಾಗುವುದು. ಈ ಮೂಲಕ ಗೃಹಲಕ್ಷ್ಮಿ ಯಜಮಾನಿಯರನ್ನು ಆರ್ಥಿಕವಾಗಿ ಮತ್ತಷ್ಟು ಸದೃಢರನ್ನಾಗಿ ಮಾಡುವುದೇ ಉದ್ದೇಶವಾಗಿದೆ ಎಂದು ಹೇಳಿದರು.

ಈ ಸಂಘಗಳ ಮಾದರಿಯನ್ನು ಆರಂಭಿಕ ಹಂತದಲ್ಲಿ ನಾಲ್ಕು ಅಥವಾ ಐದು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗುವುದು. ಯಶಸ್ಸು ಕಂಡ ನಂತರ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಈ ಯೋಜನೆ ವಿಸ್ತರಿಸಲಾಗುವುದು.

“ಈ ಹಿಂದೆ ಮಾಜಿ ಸಚಿವೆ ಮೋಟಮ್ಮ ಅವರು ಸ್ತ್ರೀಶಕ್ತಿ ಸಂಘಗಳ ಮೂಲಕ ಮಹಿಳೆಯರಲ್ಲಿ ಆರ್ಥಿಕ ಬದಲಾವಣೆ ತಂದಿದ್ದ ಹಾಗೆ, ನಾವು ಈಗ ಗೃಹಲಕ್ಷ್ಮಿ ಸಂಘಗಳ ಮೂಲಕ ಆ ಚಲನವಲನವನ್ನು ಮತ್ತೆ ಜೀವಂತಗೊಳಿಸುತ್ತಿದ್ದೇವೆ” ಎಂದು ಸಚಿವೆ ತಿಳಿಸಿದರು. ಈ ಸಂಘಗಳು ನಾಡಿನ ಹಳ್ಳಿಗಳವರೆಗೂ ತಲುಪುವಂತೆ ತಯಾರಿ ನಡೆಯುತ್ತಿದೆ.

ಅಂಗನವಾಡಿಗಳಿಗೆ ರಾಜ್ಯದಲ್ಲಿ 50 ವರ್ಷ ಪೂರ್ಣವಾಗುತ್ತಿರುವ ಹಿನ್ನೆಲೆಯಲ್ಲಿ, ಅಕ್ಟೋಬರ್ ತಿಂಗಳಲ್ಲಿ “ಅಂಗನವಾಡಿಗಳ ಸುವರ್ಣೋತ್ಸವ”ವನ್ನು ಮೈಸೂರಿನಲ್ಲಿ ಅಥವಾ ಬೆಂಗಳೂರಿನಲ್ಲಿ ಭವ್ಯವಾಗಿ ಆಚರಿಸಲು ತೀರ್ಮಾನಿಸಲಾಗಿದೆ. ಈ ಸಂದರ್ಭದಲ್ಲಿಯೇ ಗೃಹಲಕ್ಷ್ಮಿ ಸಂಘಗಳ ಅಧಿಕೃತ ಉದ್ಘಾಟನೆಯೂ ನೆರವೇರಲಿದೆ.

ಸಭೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಡಾ. ಶಾಮ್ಲಾ ಇಕ್ಬಾಲ್, ಕೌಶಲ್ಯ ಅಭಿವೃದ್ಧಿ ಸಂಸ್ಥೆಯ ವ್ಯವಸ್ಥಾಪಕಿ ಶ್ರೀವಿದ್ಯಾ, ಇಸಿಡಿಸಿ ಸಿಇಒ ಡಾ. ದಿಲೀಶ್ ಸಸಿ, ಇಲಾಖೆಯ ನಿರ್ದೇಶಕ ಟಿ. ರಾಘವೇಂದ್ರ, ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಆಪ್ತ ಕಾರ್ಯದರ್ಶಿ ಡಾ. ಟಿ.ಎಚ್. ವಿಶ್ವನಾಥ್ ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.