ಬೆಂಗಳೂರು(Bengaluru): ತ್ಯಾಜ್ಯದಿಂದ ವಿದ್ಯುತ್ ಚ್ಛಕ್ತಿಯನ್ನು ಉತ್ಪಾದಿಸುತ್ತಿರುವ ದೇಶದ ಏಕೈಕ ವಾರ್ಡ್ ಎಂಬ ಖ್ಯಾತಿಗೆ ಪಾತ್ರವಾಗಿರುವ ಯಡಿಯೂರು ವಾರ್ಡ್ ನಲ್ಲಿರುವ “ಜೈವಿಕ ಅನಿಲ ಘಟಕ”ಕ್ಕೆ ಕರ್ನಾಟಕ ರಾಜ್ಯ ಸರ್ಕಾರದ ವಿದ್ಯುತ್ ಇಲಾಖೆಯ ಸಚಿವ ಸುನಿಲ್ ಕುಮಾರ್ ಬೇಟಿ ನೀಡಿ ಪರಿಶೀಲನೆ ನಡೆಸಿದರು.
ನಂತರ ಮಾತನಾಡಿದ ಅವರು, “ಯಡಿಯೂರು ಜೈವಿಕ ಅನಿಲ ಘಟಕ”ದಲ್ಲಿ ದಿನವೊಂದಕ್ಕೆ 3000 kv ವಿದ್ಯುತ್ ಚ್ಛಕ್ತಿಯಷ್ಟು ವಿದ್ಯುತ್ತನ್ನು 05 ಟನ್ ಹಸಿ ತ್ಯಾಜ್ಯದಿಂದ ಉತ್ಪಾದಿಸುತ್ತಿರುವ ಬಗ್ಗೆ ಮತ್ತು ಈ ಘಟಕದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ದ್ರಾವಣದಿಂದ ಪ್ರತಿ ನಿತ್ಯ 40,000 ಲೀಟರ್ ಸಾಮರ್ಥ್ಯದ ಸಾವಯವ ಗೊಬ್ಬರವನ್ನು ಉತ್ಪಾದಿಸುತ್ತಿರುವ ಬಗ್ಗೆ ಅಭಿನಂದನೆಯನ್ನು ವ್ಯಕ್ತಪಡಿಸಿದರು.
ಕೇವಲ “ಯಡಿಯೂರು ಜೈವಿಕ ಅನಿಲ ಘಟಕ” ಒಂದರಿಂದಲೇ ಪಾಲಿಕೆಗೆ ಪ್ರತೀ ತಿಂಗಳು 10 ಕೋಟಿ 10 ಲಕ್ಷ ರೂಪಾಯಿಗಳಷ್ಟು ಹಣ ಉಳಿತಾಯ ಮತ್ತು ಆದಾಯದ ರೂಪದಲ್ಲಿ ಬರುತ್ತಿರುವುದನ್ನು ಪ್ರಶಂಸಿಸಿದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ 198 ವಾರ್ಡ್ ಗಳಲ್ಲಿ ಇದೇ ಮಾದರಿಯನ್ನು ಯಶಸ್ವಿಯಾಗಿ ನಿರ್ವಹಿಸಿದರೆ ಪಾಲಿಕೆಯ ಆರ್ಥಿಕ ಸ್ಥಿತಿ ಸಧೃಢಗೊಳ್ಳುತ್ತದೆಯಲ್ಲದೇ, ಬೆಂಗಳೂರು ನಗರದ ತ್ಯಾಜ್ಯ ಸಮಸ್ಯೆ ಸಂಪೂರ್ಣವಾಗಿ ನಿವಾರಣೆಯಾಗುತ್ತದೆ ಎಂಬ ಆಶಾಭಾವನೆಯನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪಾಲಿಕೆಯ ಮಾಜಿ ಉಪ ಮಹಾಪೌರ ಹರೀಶ್, ಜಂಟಿ ಆಯುಕ್ತರು (ದಕ್ಷಿಣ) ಮತ್ತು ಮುಖ್ಯ ಅಭಿಯಂತರರು ದಕ್ಷಿಣ ವಲಯ ಸೇರಿದಂತೆ ಹಲವಾರು ಅಧಿಕಾರಿಗಳು ಉಪಸ್ಥಿತಸಿದ್ದರು.