ಚನ್ನಪಟ್ಟಣ:ಕೇವಲ ಒಬ್ಬ ಯುವಕನನ್ನು ಕಟ್ಟಿ ಹಾಕಲು ಚನ್ನಪಟ್ಟಣದಲ್ಲಿ ಸರ್ಕಾರದ ಸಚಿವರ ದಂಡೇ ಬಂದಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರಚಾರದ ನಡುವೆ ಕಲ್ಲಾಪುರ ಗ್ರಾಮದಲ್ಲಿ ಭಾಷಣ ಮಾಡಿದ ಅವರು, 13 ರಂದು ನಡೆಯುವ ಉಪಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಕಣದಲ್ಲಿ ಇದ್ದಾರೆ.
ಅವರನ್ನು ಕಟ್ಟಿ ಹಾಕಲು ಮುಖ್ಯಮಂತ್ರಿ ಡಿಸಿಎಂ ಕೂಡ ಬಂದಿದ್ದಾರೆ, ಹದಿನೈದಕ್ಕೂ ಹೆಚ್ಚು ಸಚಿವರು, ಮೂವತ್ತಕ್ಕೂ ಹೆಚ್ಚು ಶಾಸಕರು ದಂಡೆತ್ತಿ ಬಂದಿದ್ದಾರೆ. ಆದರೆ ಜನರು ನಮ್ಮ ಜತೆ ಇದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕ್ಷೇತ್ರಕ್ಕೆ ನಾನು ಮಾಡಿರುವ ಕೆಲಸಗಳ ಬಗ್ಗೆ ಕಾಂಗ್ರೆಸ್ ನಾಯಕರು ಪ್ರಶ್ನೆ ಮಾಡುತ್ತಾರೆ. ಅವರಿಗೆ ಕಣ್ಣಿಲ್ಲವೇ? ಪ್ರತಿ ಹಳ್ಳಿಯಲ್ಲಿಯೂ 8ರಿಂದ 10 ಕೋಟಿ ಮೌಲ್ಯದ ಅಭಿವೃದ್ದಿ ಕಾರ್ಯಗಳು ಆಗಿವೆ. ಇವೆಲ್ಲವನ್ನೂ ಕಣ್ಣಿಗೆ ಕಾಣುತ್ತಿಲ್ಲವೇ? ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಯೋಗೇಶ್ವರ್ ಅವರಿಗೆ ಜೆಡಿಎಸ್ ನಿಂದ ಕೊಟ್ಟರೂ ನಿಲ್ಲುತ್ತೇನೆ ಎಂದಿದ್ದರು. ನಾವು ಕೊಡುತ್ತೇವೆ ಎಂದೆವು. ಆಮೇಲೆ ಬಿಜೆಪಿ ಟಿಕೆಟ್ ಬೇಕು ಎಂದರು. ಅದಕ್ಕೂ ನಾವು ಒಪ್ಪಿಕೊಂಡೆವು. ಸ್ವತ ಜೆಪಿ ನಡ್ಡಾ ಅವರೇ ನಿಮ್ಮ ಪಕ್ಷದಿಂದಲೇ ಯೋಗೇಶ್ವರ್ ಅವರಿಗೆ ಟಿಕೆಟ್ ಕೊಡಿ ಎಂದು ಕೇಳಿದರು. ನಾವು ಒಪ್ಪಿಕೊಂಡೆವು. ಆಮೇಲೆ ಈ ವ್ಯಕ್ತಿ ಜೆಡಿಎಸ್ ಟಿಕೆಟ್ ಮೇಲೆ ನಿಲ್ಲಲ್ಲ ಅಂದರು. ಸಂಸದ ಡಾ.ಮಂಜುನಾಥ್ ಅವರು ಬಿಜೆಪಿ ಪಕ್ಷದಿಂದಲೇ ನಿಲ್ಲಿಸಿ ಎಂದರು. ಅದಕ್ಕೂ ಒಪ್ಪಿದೆ. ಆಮೇಲೆ ಇವರು ಹೇಳದೆ ಕೇಳದೆ ಕಾಂಗ್ರೆಸ್ ಪಕ್ಷಕ್ಕೆ ಹಾರಿದರು ಎಂದು ಕುಮಾರಸ್ವಾಮಿ ಕಿಡಿಕಾರಿದರು.
ನನ್ನಿಂದ ನಿಮಗೆ ಅನ್ಯಾಯ ಆಗಿಲ್ಲ. ಒಬ್ಬ ರೈತನ ಜಮೀನಲ್ಲಿ ಇದ್ದ ಬಂಡೆ ಹೊಡೆದು ಅವನಿಗೆ ಅನ್ಯಾಯ ಮಾಡಿದರು ಅವರು ಎಂದು ಡಿಕೆ ಸಹೋದರರ ಮೇಲೆ ಹರಿಹಾಯ್ದ ಅವರು, ನಾನು ಅವರ ಹಾಗೆ ಮಾಡಿಲ್ಲ. ನಿಖಿಲ್ ಕುಮಾರಸ್ವಾಮಿ ಒಂದು ಅವಕಾಶ ಕೊಡಿ. ಈ ಕೆಟ್ಟ ಕಾಂಗ್ರೆಸ್ ಆಡಳಿತಕ್ಕೆ ಅಂಕುಶ ಹಾಕಬಹುದು ಎಂದು ಮನವಿ ಮಾಡಿದರು.
ಚನ್ನಪಟ್ಟಣ – ರಾಮನಗರ ಅವಳಿ ನಗರ ಆಗುವ ದಿನಗಳು ದೂರವಿಲ್ಲ. ಬೃಹತ್ ಕಾರ್ಖಾನೆ ತಂದು ಸ್ಥಳೀಯ ಯುವ ಜನರಿಗೆ ಉದ್ಯೋಗ ಕೊಡುವ ಕೆಲಸ ಮಾಡುತ್ತೇನೆ. ಈ ಬಗ್ಗೆ ನಾನು ಹಲವರ ಜತೆ ಸಮಾಲೋಚನೆ ನಡೆಸಿದ್ದೇನೆ. ಮಂಡ್ಯ, ಚನ್ನಪಟ್ಟಣ, ರಾಮನಗರ ಭಾಗದಲ್ಲಿ ಕೈಗಾರಿಕೆಗಳನ್ನು ತರುವ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಕೇಂದ್ರ ಸಚಿವರು ಭರವಸೆ ನೀಡಿದರು.