ಬೆಂಗಳೂರು(Bengaluru): ಸಚಿವಾಲಯದ ಹಲವು ಹುದ್ದೆಗಳನ್ನು ಕಡಿತಗೊಳಿಸಿದ ಕ್ರಮ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಚಿವಾಲಯ ನೌಕರರ ಸಂಘ ಕರೆ ನೀಡಿದ್ದ ಬಂದ್ ಬಹುತೇಕ ಯಶಸ್ವಿಯಾಗಿದೆ.
ಅಧಿಕಾರಿಗಳನ್ನು ಹೊರತುಪಡಿಸಿ 85% ರಿಂದ 90%ರಷ್ಟು ಸಿಬ್ಬಂದಿ ಇಂದು ಕಚೇರಿಗೆ ಹಾಜರಾಗದೆ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರ್ಕಾರ ಈ ಬಂದ್‌ನ ಗಂಭೀರವಾಗಿ ಪರಿಗಣಿಸಿದೆ. ಸಚಿವಾಲಯದ ಸಿಬ್ಬಂದಿ ಕಡ್ಡಾಯವಾಗಿ ಕಚೇರಿಗೆ ಹಾಜರಾಗುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಸೂಚಿಸಿ ಸುತ್ತೋಲೆ ಹೊರಡಿಸಿದ್ದರು. ಸಚಿವಾಲಯದ ನೌಕರರ ಸಂಘದವರು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಬಂದ್‌ಗೆ ಕರೆ ನೀಡಿರುವುದು ಕಾನೂನು ಬಾಹಿರವಾಗಿದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಈ ಹಿನ್ನೆಲೆಯಲ್ಲಿ ಸಚಿವಾಲಯದ ಎಲ್ಲ ಸಿಬ್ಬಂದಿ ಮತ್ತು ಅಧಿಕಾರಿಗಳು ಕೆಲಸಕ್ಕೆ ಕಡ್ಡಾಯವಾಗಿ ಹಾಜರಾಗಬೇಕು. ಒಂದು ವೇಳೆ ಮೇಲಧಿಕಾರಿಗಳ ಅನುಮತಿ ಪಡೆಯದೆ ಗೈರು ಹಾಜರಾದರೆ ಅದನ್ನು ಲೆಕ್ಕಕ್ಕಿಲ್ಲದ ಅವಧಿ ಎಂದು ಪರಿಗಣಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದರು. ಆದರೆ, ಇದ್ಯಾವುದಕ್ಕೂ ಕ್ಯಾರೇ ಎನ್ನದ ಸಚಿವಾಲಯ ಸಿಬ್ಬಂದಿ, ತಮ್ಮ ತಮ್ಮ ಕಚೇರಿಗೆ ಹಾಜರಾಗದೆ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಸಚಿವಾಲಯದ ಸಿಬ್ಬಂದಿ ಬಂದ್ ಹಿನ್ನೆಲೆ ವಿಧಾನಸೌಧ, ವಿಕಾಸಸೌಧ ಹಾಗೂ ಎಂಎಸ್ ಬಿಲ್ಡಿಂಗ್‌ನಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ. ಎಂ ಎಸ್ ಬಿಲ್ಡಿಂಗ್ನ ಪ್ರತಿ ಬ್ಲಾಕ್ನ ದ್ವಾರದ ಬಳಿ ಪೊಲೀಸರನ್ನು ನಿಯೋಜಿಸಲಾಗಿದೆ. ಅದೇ ರೀತಿ ವಿಧಾನಸೌಧದ ಪ್ರವೇಶ ದ್ವಾರದಲ್ಲಿ ಹೆಚ್ಚಿನ ಪೊಲೀಸರನ್ನು ಹಾಗೂ ಕೆಎಸ್ಆರ್ಪಿ ತುಕಡಿಯನ್ನು ನಿಯೋಜಿಸಲಾಗಿದೆ.