ಮನೆ ರಾಷ್ಟ್ರೀಯ ಭಾರತ್ ಜೋಡೋ ಯಾತ್ರೆಗೆ ದೇಣಿಗೆ ನೀಡದ್ದಕ್ಕೆ ಬೆದರಿಕೆ: ಮೂವರು ಕಾರ್ಯಕರ್ತರ ಅಮಾನತು

ಭಾರತ್ ಜೋಡೋ ಯಾತ್ರೆಗೆ ದೇಣಿಗೆ ನೀಡದ್ದಕ್ಕೆ ಬೆದರಿಕೆ: ಮೂವರು ಕಾರ್ಯಕರ್ತರ ಅಮಾನತು

0

ತಿರುವನಂತಪುರ(Thiruvananthapuram): ಕಾಂಗ್ರೆಸ್ ಹಮ್ಮಿಕೊಂಡಿರುವ ಭಾರತ್‌ ಜೋಡೊ ಯಾತ್ರೆಗೆ 2 ಸಾವಿರ ರೂ. ದೇಣಿಗೆ ನೀಡಲು ನಿರಾಕರಿಸಿದ ತರಕಾರಿ ವ್ಯಾಪಾರಿಗೆ ಬೆದರಿಕೆ ಹಾಕಿದ್ದ  ಮೂವರು ಕಾರ್ಯಕರ್ತರನ್ನು ಅಮಾನತ್ತು ಮಾಡಲಾಗಿದೆ.

ಘಟನೆಯಲ್ಲಿ ಭಾಗಿಯಾದ ಮೂವರು ಕಾರ್ಯಕರ್ತರನ್ನು ತಕ್ಷಣವೇ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ  ಎಂದು ಕೇರಳ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಕೆ. ಸುಧಾಕರನ್ ತಿಳಿಸಿದ್ದಾರೆ.

ಘಟನೆ ಕುರಿತು ಟ್ವೀಟ್ ಮಾಡಿರುವ ಅವರು, ಕೊಲ್ಲಂನಲ್ಲಿ ನಡೆದಿರುವ ಸ್ವೀಕಾರಾರ್ಹವಲ್ಲದ ಘಟನೆಯಲ್ಲಿ ಭಾಗಿಯಾಗಿರುವ ಪಕ್ಷದ ಮೂವರು ಕಾರ್ಯಕರ್ತರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ. ಬೆದರಿಕೆ ಹಾಕಿರುವುದು ಅಕ್ಷಮ್ಯ. ಇಂತಹ ನಡವಳಿಕೆ ಪಕ್ಷದ ಸಿದ್ಧಾಂತಕ್ಕೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ.

ಏನಿದು ಘಟನೆ ?

ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಗುಂಪೊಂದು ತರಕಾರಿ ವ್ಯಾಪರಿ ಬಳಿ ಬಂದು  ಬಂದು ಭಾರತ್‌ ಜೋಡೊ ಯಾತ್ರೆಗೆ ದೇಣಿಗೆ ನೀಡುವಂತೆ ಕೇಳಿದರು. ನಾನು ₹500 ಅವರಿಗೆ ಕೊಟ್ಟಿದ್ದೆ. ಆದರೆ, ₹2,000 ನೀಡುವಂತೆ ಅವರು ಬೇಡಿಕೆಯಿಟ್ಟಿದ್ದರು. ನಾನು ಅಷ್ಟೊಂದು ಹಣ ನೀಡುವುದಕ್ಕೆ ನಿರಾಕರಿಸಿದೆ. ಕೂಡಲೇ ಅವರು ತಕ್ಕಡಿಯನ್ನು ಹೊರಗೆ ಎಸೆದು, ತರಕಾರಿಗಳನ್ನು ಚೆಲ್ಲಾಡಿದರು ಎಂದು ಮಾಲೀಕ ಎಸ್.ಫವಾಜ್ ಕುನ್ನಿಕೋಡು ತಿಳಿಸಿದ್ದಾರೆ.

ಬೇಡಿಕೆಯ ಮೊತ್ತವನ್ನು ನೀಡದಿದ್ದರೆ ಯಾರನ್ನೂ ಜೀವಂತವಾಗಿ ಬಿಡುವುದಿಲ್ಲ ಎಂದು ಕಾಂಗ್ರೆಸ್‌ ಕಾರ್ಯಕರ್ತರು ಬೆದರಿಕೆ ಹಾಕಿದ್ದಾರೆ. ಘಟನೆ ಬಳಿಕ ಫವಾಜ್ ಪೊಲೀಸರಿಗೆ ದೂರು ನೀಡಿದ್ದಾರೆ.

ಕೇರಳದ ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಅನೀಶ್ ಖಾನ್ ಸೇರಿದಂತೆ ಐವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಹಿಂದಿನ ಲೇಖನಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಶಿಕ್ಷಕನಿಗೆ 20 ವರ್ಷ ಜೈಲು
ಮುಂದಿನ ಲೇಖನಮೈಸೂರು: ಎರಡನೇ ಹಂತದ ಸಿಡಿಮದ್ದು ತಾಲೀಮು ಯಶಸ್ವಿ