ಮನೆ ಕಾನೂನು ಅನುಚಿತ ವರ್ತನೆ: ವಕೀಲನ ವಿರುದ್ಧ ನ್ಯಾಯಾಧೀಶೆ ದೂರು

ಅನುಚಿತ ವರ್ತನೆ: ವಕೀಲನ ವಿರುದ್ಧ ನ್ಯಾಯಾಧೀಶೆ ದೂರು

0

ಲಖನೌ(Lucknow): ವಕೀಲರೊಬ್ಬರು ತಮ್ಮೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿ ನ್ಯಾಯಾಧೀಶೆಯೊಬ್ಬರು ದೂರು ದಾಖಲಿಸಿದ್ದಾರೆ.

ವಕೀಲ ತಮ್ಮ ಕಡೆಗೆ ಕಾಮುಕ ಭಾವನೆ ವ್ಯಕ್ತಪಡಿಸುತ್ತಿದ್ದಾರೆ ಮತ್ತು ಹಿಂಬಾಲಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ಐಪಿಸಿಯ ಸಂಬಂಧಿತ ಸೆಕ್ಷನ್‌ಗಳ ಅಡಿ ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಹಮೀರ್ಪುರ ನ್ಯಾಯಾಧೀಶೆ ನೀಡಿರುವ ದೂರಿನ ಅನ್ವಯ ವಕೀಲ ಮೊಹಮ್ಮದ್ ಹರೂನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಹಮೀರ್ಪುರ ಹೆಚ್ಚುವರಿ ಎಸ್‌ಪಿ ಅನೂಪ್ ಕುಮಾರ್ ತಿಳಿಸಿದ್ದಾರೆ.

ತಾವು ಇತ್ತೀಚೆಗಷ್ಟೆ ನ್ಯಾಯಾಲಯದಲ್ಲಿ ಹುದ್ದೆ ಸ್ವೀಕರಿಸಿದ್ದಾಗಿ ಎಫ್‌ಐಆರ್‌ನಲ್ಲಿ ಜಡ್ಜ್ ತಿಳಿಸಿದ್ದಾರೆ. ಜುಲೈ ನಾಲ್ಕನೇ ವಾರ (18-24) ತಾವು ತಮ್ಮ ಚೇಂಬರ್‌ನಿಂದ ಹೊರಗೆ ನಡೆಯುವಾಗ ಆರೋಪಿ ವಕೀಲ, ಕಿಟಕಿ ಸಂಧಿಯಿಂದ ಕಾಮುಕ ದೃಷ್ಟಿಯೊಂದಿಗೆ ತಮ್ಮನ್ನು ದಿಟ್ಟಿಸಿದ್ದನ್ನು ಗಮನಿಸಿದ್ದಾಗಿ ಹೇಳಿದ್ದಾರೆ. ಆ ವಾರ ಎರಡು ಬಾರಿ ಅದು ನಡೆದಿದೆ ಎಂದು ಅವರು ಎಫ್‌ಐಆರ್‌ನಲ್ಲಿ ಹೇಳಿದ್ದಾರೆ.

ಆ ಸಮಯದಲ್ಲಿ ನನಗೆ ಆ ವಕೀಲರ ಹೆಸರು ಗೊತ್ತಿರಲಿಲ್ಲ. ಆದರೆ ಜುಲೈ 25ರಂದು ರಾತ್ರಿ 8.45ರ ಸುಮಾರಿಗೆ ಅವರು ನನ್ನ ಕೋರ್ಟ್‌ರೂಮ್‌ಗೆ ಬಂದಾಗ ಅವರನ್ನು ಗುರುತಿಸಿದ್ದೆ. ಯಮುನಾ ವಾಕ್‌ವೇನಲ್ಲಿ ನಾನು ಎಂದಿನಂತೆ ವಾಕಿಂಗ್ ಹೋದಾಗ, ಅಲ್ಲಿನ ಬೆಂಚ್ ಒಂದರಲ್ಲಿ ಕುಳಿತಿದ್ದೆ. ಇಯರ್ ಫೋನ್ ಆನ್ ಮಾಡಿ ಸಂಗೀತ ಆಲಿಸುತ್ತಿದ್ದೆ. ಎರಡು ನಿಮಿಷದ ಬಳಿಕ, ಅದೇ ವಕೀಲ ನನ್ನ ಬೆಂಚ್ ಪಕ್ಕದಲ್ಲಿಯೇ ನಿಂತಿರುವುದನ್ನು ಕಂಡೆ. ಅವರು ಏನನ್ನೋ ಹೇಳಲು ಪ್ರಯತ್ನಿಸುತ್ತಿದ್ದರು. ಸೌಜನ್ಯಕ್ಕಾಗಿ ನಾನು ನನ್ನ ಇಯರ್‌ಫೋನ್ ತೆಗೆದು, ಶುಭಾಶಯ ವಿನಿಮಯ ಮಾಡಿಕೊಂಡೆ ಎಂದು ತಿಳಿಸಿದ್ದಾರೆ.

ಈ ಜಿಲ್ಲೆಗೆ ನೇಮಕವಾಗಿದ್ದರಿಂದ ಖುಷಿಯಾಗುತ್ತಿರಬಹುದು ಎಂದು ವಕೀಲರು ಮಾತಿಗೆ ಇಳಿದರು. ಬೇರೆ ಜಿಲ್ಲೆಯಲ್ಲಿ ಹುದ್ದೆಗೆ ನೇಮಕ ಮಾಡಿದ್ದಾಗ ತನಗೆ ಇಷ್ಟವಾಗಿರಲಿಲ್ಲ” ಎಂದು ಹೇಳಿದ್ದಾಗಿ ಎಫ್‌ಐಆರ್‌ನಲ್ಲಿ ನ್ಯಾಯಾಧೀಶೆ ಹೇಳಿದ್ದಾರೆ.

ಕೆಲವು ದಿನಗಳ ಬಳಿಕ, ನಾನು ನನ್ನ ಚೇಂಬರ್‌ನಿಂದ ಹೊರ ಹೋಗುವಾಗ ಅವರು ದಿಟ್ಟಿಸಿ ನೋಡುತ್ತಿರುವುದು ಗಮನಕ್ಕೆ ಬಂದಿತ್ತು. ನನಗೆ ಅದರಿಂದ ಕಸಿವಿಸಿ ಉಂಟಾಗಿತ್ತು. ಆಗಸ್ಟ್ 1ರಂದು ನಾನು ವಾಯುವಿಹಾರ ಹೊರಟಾಗ, ಏನಾದರೂ ಅಹಿತಕರ ಘಟನೆ ನಡೆಯಬಹುದು ಎಂಬ ಭಯದೊಂದಿಗೆ ಸ್ನೇಹಿತರೊಬ್ಬರಿಗೆ ಲೈವ್ ಲೊಕೇಷನ್ ಕಳುಹಿಸಿದ್ದೆ. ನಾನು ಬೆಂಚ್ ಮೇಲೆ ಕುಳಿತ ಕೆಲವು ನಿಮಿಷಗಳಲ್ಲಿಯೇ ಆರೋಪಿಯು ಬೆಂಚ್ ಕಡೆಗೆ ನಡೆದು ಬಂದಿದ್ದರು ಎಂದು ತಿಳಿಸಿದ್ದಾರೆ.

ನಾನು ಅವರನ್ನು ಅಸಮಾಧಾನದಿಂದ ಮಾತನಾಡಿಸಿದ್ದೆ. ಅವರ ಹೆಸರು ಕೇಳಿದ್ದೆ. ನಿಮ್ಮ ವರ್ತನೆ ನನಗೆ ಸರಿಬರುತ್ತಿಲ್ಲ ಎಂದು ಕೂಡ ತಿಳಿಸಿದ್ದೆ. ನನ್ನ ಚೇಂಬರ್‌ನ ಕಿಟಕಿ ಬದಿಯಿಂದ ನನ್ನ ಕಡೆಗೆ ಕೆಟ್ಟದಾಗಿ ನೋಡುವುದು ಏಕೆ ಎಂದು ಪ್ರಶ್ನಿಸಿದ್ದೆ. ಆ ವರ್ತನೆ ಮತ್ತೆ ಕಾಣಿಸಿಕೊಳ್ಳಬಾರದು ಎಂದು ಎಚ್ಚರಿಕೆ ನೀಡಿದ್ದೆ.

ಆದರೆ ಆರೋಪಿ ಹಿಂಬಾಲಿಸುವುದನ್ನು ಮುಂದುವರಿಸಿದ್ದಾರೆ. ನನ್ನ ಯಾವುದೇ ಪ್ರಕರಣ ಇಲ್ಲದೆ ಇದ್ದಾಗಲೂ ಕೋರ್ಟ್ ರೂಮ್‌ಗೆ ಬಂದಿದ್ದರು. ಎಚ್ಚರಿಕೆ ನೀಡಿದ್ದರೂ, ನಾನು ವಾಕಿಂಗ್ ಹೋಗುವಾಗ ಹಿಂಬಾಲಿಸುವುದನ್ನು ಮುಂದುವರಿಸಿದ್ದರು” ಎಂದು ಆರೋಪಿಸಿದ್ದಾರೆ.

ಈ ನಡವಳಿಕೆಯಿಂದ ನನಗೆ ಭಯವಾಗಿತ್ತು. ಆಗಸ್ಟ್ 18ರಂದು ಕಳವಳದಿಂದ ನನ್ನ ಸ್ನೇಹಿತರೊಬ್ಬರಿಗೆ ಕರೆ ಮಾಡಿದ್ದೆ. ಬೆಂಚ್ ಮೇಲೆ ಕುಳಿತರೆ ಅವರು ಹಿಂಬಾಲಿಸುವುದನ್ನು ನಿಲ್ಲಿಸಬಹುದು ಎಂದು ಭಾವಿಸಿದ್ದೆ. ಆದರೆ ಅವರು ನನ್ನ ಬಳಿ ಬಂದು ಏನನ್ನೋ ಗೊಣಗಿದರು. ನಾನು ನಡೆಯುವುದನ್ನು ಮುಂದುವರಿಸಿದೆ. ಅವರ ಬಾಯಿಯಿಂದ ಲಿಕ್ಕರ್ ವಾಸನೆ ಬಂದಿತ್ತು. ಅವರು ನನ್ನ ಕಡೆ ಬರುವುದನ್ನು ರೆಕಾರ್ಡ್ ಮಾಡಿದ್ದೆ. ಅದೇ ಜಾಗದಲ್ಲಿ ಅಲ್ಲಿಂದ ಇಲ್ಲಿಗೆ ಓಡಾಡತೊಡಗಿದ ಅವರು, ನಾನು ನಡೆಯುವುದನ್ನು ಕಾಯತೊಡಗಿದರು. ಇದಾದ ಬಳಿಕ ನಾನು ಹಿರಿಯ ನ್ಯಾಯಾಧೀಶರ ಜತೆ ಮಾತನಾಡಲು ಮತ್ತು ಎಫ್‌ಐಆರ್ ದಾಖಲಿಸಲು ನಿರ್ಧರಿಸಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.