ಹಾಸನ: ಸಬ್ ಇನ್ಸ್ ಪೆಕ್ಟರ್ ಮನೆಗೆಯೇ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಆಘಾತಕಾರಿ ಘಟನೆ ಹಾಸನ ಜಿಲ್ಲೆ, ಅರಕಲಗೂಡು ತಾಲೂಕಿನ ಕೊಣನೂರಿನಲ್ಲಿ ನಡೆದಿದೆ.
ಕೊಣನೂರು ಪೊಲೀಸ್ ಠಾಣೆ ಪಿಎಸ್ ಐ ಶೋಭಾ ಭರಮಕ್ಕನವರ್ ರಜೆಯ ಮೇಲೆ ಊರಿಗೆ ತೆರಳಿದ್ದರು. ಈ ವೇಳೆ ಅವರ ಬಾಡಿಗೆ ಮನೆಯ ಕಿಟಕಿ ಒಡೆದು ಸೀಮೆಎಣ್ಣೆ ಸುರಿದು ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಮನೆಯಲ್ಲಿದ್ದ ಲ್ಯಾಪ್ ಟಾಪ್, ಡ್ರೆಸ್ಸಿಂಗ್ ಟೇಬಲ್, ಬಟ್ಟೆ, ಪೀಠೋಪಕಣಗಳು ಸೇರಿ ಲಕ್ಷಾಂತರ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿವೆ.
ಶೋಭಾ ರಜೆ ಮುಗಿಸಿ ಶುಕ್ರವಾರ ಮನೆಗೆ ವಾಪಸಾದಾಗ ಕಿಡಿಗೇಡಿಗಳ ಕೃತ್ಯ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು, ಡಿವೈಎಸ್ ಪಿ ಮುರುಳೀಧರ್ ಹಾಗೂ ವೃತ್ತ ನಿರೀಕ್ಷಕ ರಘುಪತಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಶೋಭಾ ಭರಮಕ್ಕನವರ್ ಕಳೆದ ಮೂರುವರೆ ತಿಂಗಳ ಹಿಂದಷ್ಟೇ ಜಾವಗಲ್ ಪೊಲೀಸ್ ಠಾಣೆಯಿಂದ ಕೊಣನೂರು ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದರು.
ಇದೀಗ ಘಟನೆ ಬಗ್ಗೆ ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.