ಮಡಿಕೇರಿ : ಕರ್ನಾಟಕದ ಕಾಶ್ಮೀರ ಮತ್ತು ಭಾರತದ ಸ್ಕಾಟ್ಲೆಂಡ್ ಎಂದು ಕರೆಸಿಕೊಳ್ಳುವ ಕೊಡಗಿನಲ್ಲಿ ಪ್ರವಾಸಿಗರಿಗೆ ಹುಡುಗಿಯರು ಮತ್ತು ಮಹಿಳೆಯರು ಲಭ್ಯವಿದ್ದಾರೆ ಎಂದು ದುಷ್ಟರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ್ದಾರೆ.
ಕೊಡಗಿನ ವಾತಾವರಣ, ಮಳೆ, ಟೂರಿಸಂಗೆ ಪ್ರಸಿದ್ಧಿ ಹೊಂದಿರುವ, ರಮಣೀಯ ಗುಡ್ಡಗಾಡು ಪ್ರದೇಶಗಳು, ಹಸಿರನ್ನು ಹೊದ್ದಂತಿರುವ ನೆಲ, ಮತ್ತು ಭೋರ್ಗರೆಯುವ ಹಲವಾರು ಜಲಪಾತಗಳಿಂದ ಪ್ರತಿದಿನ ಸಾವಿರಾರು ಪ್ರವಾಸಿಗರನ್ನು ಕೈಮಾಡಿ ಕರೆಯುವ ಸುಂದರವಾದ ಸ್ಥಳವಾಗಿದೆ. ಹೀಗಾಗಿ ದೇಶ ವಿದೇಶಗಳಿಂದ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಕೊಡಗು ಜಿಲ್ಲೆಗೆ ಆಗಮಿಸುತ್ತಾರೆ.
ಇಲ್ಲಿನ ಹೋಂಸ್ಟೇಗಳಲ್ಲಿ ತಂಗುವ ಪ್ರವಾಸಿಗರು ಚುಮು ಚುಮು ಚಳಿ, ಆಹ್ಲಾದಕರವಾದ ವಾತಾವರಣಗಳನ್ನು ನೋಡಿ ಎಂಜಾಯ್ ಮಾಡಿ ಹೋಗುತ್ತಾರೆ. ಇನ್ನೂ ಕೆಲವರು ಕೊಡಗಿನ ಆಹಾರ ಪದ್ಧತಿಗೆ ಮನಸೋತು ಇಲ್ಲಿನ ವಿಶೇಷ ಖಾದ್ಯಗಳನ್ನು ಸವಿದು ತೆರಳುತ್ತಾರೆ. ವರ್ಷದಿಂದ ವರ್ಷಕ್ಕೆ ಪ್ರವಾಸೋದ್ಯಮ ಚಟುವಟಿಕೆಗಳು ಹೆಚ್ಚಾಗುತ್ತಿದೆ.
ಈ ನಡುವೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಕೊಡಗಿನ ಹುಡುಗಿಯರು ಬೇಕಾ, ಮಹಿಳೆಯರು ಬೇಕಾ, ಇಲ್ಲಿ ಬಂದರೆ ಈ ದೂರವಾಣಿ ಸಂಖ್ಯೆಗೆ ಕರೆಮಾಡಿ ಎಂದೆಲ್ಲ ಜಿಲ್ಲೆಯ ಮೇಲೆ ಅಪಪ್ರಚಾರ ಮಾಡಲು ಮುಂದಾಗುತ್ತಿದ್ದಾರೆ. ಈ ರೀತಿಯ ಅಪಪ್ರಚಾರ ಮಾಡುತ್ತಿರುವುದು ವರದಿಯಾಗುತ್ತಲೇ ಇರುವುದರಿಂದ ಇದೀಗ ಜಿಲ್ಲೆಯ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.















