ಹಾಸನ(Hassan): ಮಿಕ್ಸಿ ಬ್ಲಾಸ್ಟ್ ಪ್ರಕರಣ ಕುರಿತು ಸಾಕಷ್ಟು ಗೊಂದಲಗಳು ಸೃಷ್ಠಿಯಾಗುತ್ತಿರುವ ಬೆನ್ನಲ್ಲೇ ಇದೊಂದು ವೈಯಕ್ತಿಕ ದ್ವೇಷದಿಂದ ನಡೆದಿರುವ ಕೃತ್ಯವೇ ಹೊರತು ಯಾವುದೇ ಉಗ್ರಗಾಮಿಗಳಿಗೆ ಸಂಬಂಧಿಸಿದ್ದಲ್ಲ ಎಂಬ ಮಾಹಿತಿ ಹೊರಬಿದ್ದಿದೆ.
ಎಸ್ಪಿ ಹರಿರಾಮ ಶಂಕರ್ ಪ್ರಕರಣ ಕುರಿತು ಮಾತನಾಡಿ, ಡೆಲಿವರಿ ಕೊಟ್ಟ ವ್ಯಕ್ತಿಯನ್ನು ಟಾರ್ಗೆಟ್ ಮಾಡಲಾಗಿದೆ. ಇದರಲ್ಲಿ ಉಗ್ರರು ನಡೆಸುವ ಯಾವುದೇ ರೀತಿಯಾದ ತಂತ್ರಜ್ಞಾನ ಬಳಸಿಲ್ಲ. ಮೈಸೂರಿನ ಎಫ್ಎಸ್ಎಲ್ ತಂಡ ಕೆಲವು ಅವಶೇಷಗಳನ್ನು ಪಡೆದು ಪರಿಶೀಲಿಸಿದ್ದಾರೆ. ಇದು ವೈಯಕ್ತಿಕ ದ್ವೇಷದಿಂದ ನಡೆದಿರುವ ಘಟನೆ ಇದರಲ್ಲಿ ಯಾವುದೇ ಉಗ್ರರ ಪಾತ್ರ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಇನ್ನು ಈ ಪ್ರಕರಣದಲ್ಲಿ ಇಬ್ಬರನ್ನ ವಶಕ್ಕೆ ಪಡೆದು ಹೆಚ್ಚಿನ ತನಿಖೆ ನಡೆಸಿದ್ದು ಶೀಘ್ರ ಸತ್ಯಾಂಶ ಹೊರಬೀಳಲಿದೆ. ಎಲೆಕ್ಟ್ರಾನಿಕ್ ಸರ್ಕ್ಯೂಟ್’ನಿಂದ ಇಷ್ಟು ದೊಡ್ಡ ಪ್ರಮಾಣದಲ್ಲಿ ಬ್ಲಾಸ್ಟ್ ಆಗಲ್ಲ ಬದಲಿಗೆ ಸಣ್ಣ ಮಟ್ಟದ ಸ್ಫೋಟಕ ವಸ್ತುಗಳನ್ನು ಬಳಸಿ ಕೃತ್ಯ ಎಸಗಿದ್ದಾರೆ. ಸಾರ್ವಜನಿಕರು ಆತಂಕಕ್ಕೆ ಒಳಗಾಗುವುದು ಬೇಡ. ಕೊರಿಯರ್ ಪಡೆದು ವಾಪಸ್ ನೀಡಿದವರನ್ನು ಹಾಗೂ ಕೊರಿಯರ್ ಮಾಡಿದವರನ್ನು ವಶಕ್ಕೆ ಪಡೆಯಲಾಗಿದೆ. ಪಾರ್ಸಲ್ ಡೀಟೇಲ್ಸ್ ಬಗ್ಗೆ ಇನ್ನು ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದರು.
ಸೋಮವಾರ ಸಂಜೆ ನಗರದ ಕೆ.ಆರ್. ಪುರಂ ಬಡಾವಣೆಯಲ್ಲಿ ಮಿಕ್ಸಿ ಬ್ಲಾಸ್ಟ್ ಆಗಿ ಅವಘಡ ನಡೆದಿತ್ತು.