ಮನೆ ರಾಜ್ಯ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಾಂಗ್ರೆಸ್‌ ನಿಂದ ಸುಪಾರಿ ಪಡೆದು ಬಿಜೆಪಿ ವಿರುದ್ಧ ಹೋರಾಟ: ಎಂ.ಪಿ.‌...

ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಾಂಗ್ರೆಸ್‌ ನಿಂದ ಸುಪಾರಿ ಪಡೆದು ಬಿಜೆಪಿ ವಿರುದ್ಧ ಹೋರಾಟ: ಎಂ.ಪಿ.‌ ರೇಣುಕಾಚಾರ್ಯ

0

ಮೈಸೂರು: ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಾಂಗ್ರೆಸ್‌ ನಿಂದ ಸುಪಾರಿ ಪಡೆದು ಬಿಜೆಪಿ ವಿರುದ್ಧವೇ  ಹೋರಾಟ ಮಾಡುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಎಂ.ಪಿ.‌ ರೇಣುಕಾಚಾರ್ಯ ವಾಗ್ದಾಳಿ ನಡೆಸಿದರು.

Join Our Whatsapp Group

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಜೊತೆ ಮ್ಯಾಚ್ ಫಿಕ್ಸಿಂಗ್ಸ್ ಮಾಡಿಕೊಂಡು ಮುಡಾ ಪಾದಯಾತ್ರೆಗೆ ಬರಲಿಲ್ಲ. ಭ್ರಷ್ಟಾಚಾರವನ್ನು ಪರೋಕ್ಷವಾಗಿ ಬೆಂಬಲಿಸಿದ್ದಾರೆ. ಸಿದ್ದರಾಮಯ್ಯ ಅವರಿಗೆ ಬೆಂಬಲ ನೀಡುತ್ತಿದ್ದಾರೆ. ಬ್ಲಾಕ್‌ಮೇಲ್ ರಾಜಕಾರಣ ಮಾಡುತ್ತಿದ್ದಾರೆ. ಈ ರೀತಿಯ ಬ್ಲಾಕ್ ಮೇಲ್ ರಾಜಕಾರಣ ನಡೆಯದು  ಎಂದರು.

ಯಡಿಯೂರಪ್ಪ ಅವರಿಗೆ ಇಂತಹ ಕೆಲವರು ಶಕುನಿಗಳು, ಮೀರ್ ಸಾಧಕರು ಕಾಟ ಕೊಡುತ್ತಲೇ ಇದ್ದಾರೆ‌. ವಿಜಯೇಂದ್ರ ಅವರನ್ನು ರಾಜ್ಯ ಅಧ್ಯಕ್ಷರಾಗಿ ಮಾಡಿದ್ದು ಬಿಜೆಪಿ ಹೈಕಮಾಂಡ್ ಹೊರತು ಯಡಿಯೂರಪ್ಪ ಅಲ್ಲ. ಹೀಗಾಗಿ ಅವರಿಗೆ ಬೈಯ್ದರೆ ಹೈಕಮಾಂಡ್ ಗೆ ಬೈಯ್ದಂತೆ ಎಂದರು.

ಯತ್ನಾಳ ಹಿಂದುತ್ವದ ಮುಖವಾಡ ಧರಿಸಿದ್ದಾರೆ. ಅವರ ಹರಕು ಬಾಯಿಯಿಂದ ಬಿಜೆಪಿಗೆ ಚುನಾವಣೆಯಲ್ಲಿ ಸೋಲಾಯಿತು.‌ ಉಪ ಚುನಾವಣೆ ಸೋಲಿಗೆ ಅವರೇ ಕಾರಣ. ವಿಜಯಪುರದ ಪ್ರಭಾವಿ ಸಚಿವರ ಜೊತೆಗೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದಾರೆ ಎಂದು ದೂರಿದರು.

 ‘ಯತ್ನಾಳ ವಿರುದ್ಧ ಮಾತನಾಡಿದ್ದಕ್ಕೆ ನಿನ್ನೆಯಿಂದ ಬೆದರಿಕೆಗಳು ಬರುತ್ತಿವೆ. ಆದರೆ ನಾನು ಯಾವುದಕ್ಕೂ ಹೆದರುವುದಿಲ್ಲ’ ಎಂದರು.‌

ಬಸವಣ್ಣ ಎಲ್ಲ ವರ್ಗದವರಿಗೆ ಸೇರಿದ ವಿಶ್ವಗುರು. ಅಂತಹವರಿಗೆ  ಅಪಮಾನ ಮಾಡಿರುವ ಯತ್ನಾಳ ವಿರುದ್ಧ ಮಠಾಧೀಶರು ಛೀಮಾರಿ ಹಾಕಬೇಕು. ಪಕ್ಷದಿಂದ ಉಚ್ಛಾಟಿಸುವಂತೆ ಒತ್ತಾಯಿಸಬೇಕು’ ಎಂದು ಆಗ್ರಹಿಸಿದರು.‌

ನಾವು ಬಣ ರಾಜಕೀಯ ಮಾಡುತ್ತಿಲ್ಲ. ವಿಜಯೇಂದ್ರ ಒಂದು ಶಕ್ತಿ. ಯತ್ನಾಳರದ್ದು ನಾಲ್ಕು ಜನರ ಒಂದು ಗುಂಪು ಅಷ್ಟೇ. ತಾಯಿ ಚಾಮುಂಡಿ ಇಂತಹ ಆಂತರಿಕ ದುಷ್ಟರನ್ನು ಸಂಹಾರ ಮಾಡಲಿ ಎಂದರು.‌

ದಾವಣಗೆರೆಯಲ್ಲಿ ಬೃಹತ್ ಸಭೆ

ಮುರ್ಡೇಶ್ವರದಲ್ಲಿ  ಸದ್ಯದಲ್ಲೇ ಇನ್ನೊಂದು ಸಭೆ ನಡೆಸಲಾಗುವುದು. ನಂತರ  ದಾವಣಗೆರೆಯಲ್ಲಿ   3-4 ಲಕ್ಷ ಜನ ಸೇರಿಸಿ ಬಿಜೆಪಿ ನಾಯಕರ ಸಮಾವೇಶ ಆಯೋಜಿಸಲಾಗುವುದು.‌ ಯತ್ನಾಳರ ಉಚ್ಛಾಟನೆಗೆ ಆಗ್ರಹಿಸಿ‌ ಸದ್ಯದಲ್ಲೇ ಬಿಜೆಪಿ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಲಾಗುವುದು.‌ ಕೇಂದ್ರದ ನಾಯಕರು ಶೀಘ್ರದಲ್ಲೇ ಕ್ರಮ ಕೈಗೊಳ್ಳಲಿದ್ದಾರೆ  ಎಂದರು.‌