ಮೈಸೂರು: ತಾಲ್ಲೂಕಿನ ದೊಡ್ಡಮಾರಗೌಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಡುವ ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಟ್ಟಡಗಳ ಉದ್ಘಾಟನೆ ಹಾಗೂ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿಪೂಜೆಯನ್ನು ಶಾಸಕರಾದ ಜಿ.ಟಿ.ದೇವೇಗೌಡ ಅವರು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಗಾಯಿತ್ರಿ ಅವರು ಸೋಮವಾರ ನೆರವೇರಿಸಿದರು.
ಮಾದಳ್ಳಿ ಗ್ರಾಮದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಿರ್ಮಿಸಿದ ಶೌಚಾಲಯ, ಅಂಗನವಾಡಿ ಕಟ್ಟಡ, ಕಟ್ಟೆಹುಂಡಿ ಗ್ರಾಮದ ಅಂಗನವಾಡಿ ಕಟ್ಟಡ, ಕುಡಿಯುವ ನೀರಿನ ಟ್ಯಾಂಕ್, ಮಾಣಿಕ್ಯಪುರದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ನೂತನ ಕಟ್ಟಡ, ಶೆಟ್ಟಿನಾಯಕನಹಳ್ಳಿಯಲ್ಲಿ ಜಲಜೀವನ ಮಿಷನ್ ಅಡಿ ನಿರ್ಮಿಸಿದ ಕುಡಿಯುವ ನೀರಿನ ಟ್ಯಾಂಕ್, ದೊಡ್ಡಟ್ಟಿಹುಂಡಿಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಕಟ್ಟಡ, ಉದ್ಘಾಟಿಸಿದರು. ಡಿ.ಎಂ.ಜಿ ಹಳ್ಳಿಯಲ್ಲಿ ಬಸ್ ನಿಲ್ದಾಣ ಹಾಗೂ ಸಿಸಿ ರಸ್ತೆಗೆ ಶಂಕುಸ್ಥಾಪನೆ ನೆರವೇರಿಸಿದರು.
ಬಳಿಕ ಗ್ರಾಮ ಪಂಚಾಯಿತಿ ಆವರಣದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಶಾಸಕ ಜಿ.ಟಿ.ದೇವೇಗೌಡ ಅವರು ಮಾತನಾಡಿ, ಗ್ರಾಮಗಳ ಮೂಲಭೂತ ಸೌಕರ್ಯಕ್ಕೆ ಗ್ರಾಮ ಪಂಚಾಯಿತಿ ಸದಸ್ಯರು ಒಕ್ಕೂರಲಿನಿಂದ ಕೆಲಸ ಮಾಡುತ್ತಿದ್ದು, ಅದಕ್ಕೆ ತಕ್ಕಂತೆ ಪಿಡಿಒ ಅವರು ಕೂಡ ಪೂರಕವಾಗಿ ಅಭಿವೃದ್ಧಿ ಮಾಡುತ್ತಿರುವುದು ಪ್ರಶಂಸನೀಯ ಎಂದು ಹೇಳಿದರು.
ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಅಭಿವೃದ್ಧಿಪಡಿಸಿರುವ ಅಂಗನವಾಡಿ, ಶಾಲಾ ಶೌಚಾಲಯ ಸೇರಿದಂತೆ ಮುಂತಾದ ಕಟ್ಟಡವನ್ನು ಅತ್ಯಂತ ಸಂತೋಷದಿಂದ ಉದ್ಘಾಟಿಸಿದ್ದೇನೆ. ಇದೇ ರೀತಿ ನರೇಗಾ ಯೋಜನೆಯಡಿ ಅನೇಕ ಕಾಮಗಾರಿಗಳನ್ನು ಕೈಗೊಂಡರೆ ಗ್ರಾಮಗಳ ಅಭಿವೃದ್ಧಿಗೆ ಅನುಕೂಲವಾಗಲಿದೆ.
-ಜಿ.ಟಿ.ದೇವೇಗೌಡ, ಶಾಸಕರು, ಚಾಮುಂಡೇಶ್ವರಿ ಕ್ಷೇತ್ರ
ಗ್ರಾಮಗಳಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಆಗಬೇಕಿದ್ದರೂ ನನ್ನನ್ನು ಭೇಟಿಯಾಗಿ ಅಹವಾಲು ನೀಡಬಹುದು. ಗ್ರಾಮಗಳಿಗೆ ಭೇಟಿ ನೀಡಿದ್ದಾಗ ಪಡಿತರ ಚೀಟಿ ಹಾಗೂ ಮನೆ ಇಲ್ಲವೆಂದು ಜನರ ಮನವಿ ಮಾಡಿದ್ದಾರೆ. ಗ್ರಾಮಕ್ಕೆ ಸ್ಮಶಾನ ಅಭಿವೃದ್ಧಿಪಡಿಸುವಂತೆ ಕೇಳಿದ್ದಾರೆ. ಮುಂದಿನ ದಿನಗಳಲ್ಲಿ ಕಾಮಗಾರಿಯನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ರೈತರೂ ತಾವು ವ್ಯವಸಾಯ ಮಾಡುವ ಕೃಷಿ ಜಮೀನುಗಳನ್ನು ಮಾರಾಟ ಮಾಡಬಾರದು. ನೀವೂ ವ್ಯವಸಾಯ ಮಾಡಿ, ಮಕ್ಕಳಿಗೂ ವ್ಯವಸಾಯ ಮಾಡಲು ವರ್ಗಾಯಿಸಿ. ಈ ಹಿಂದೆ ಜಮೀನು ಮಾರಿಕೊಂಡವರು ಇಂದು ಬಿಕ್ಕಟ್ಟಿಗೆ ಸಿಲುಕಿದ್ದಾರೆ. ಕೃಷಿಯ ಜೊತೆಗೆ ಹೈನುಗಾರಿಕೆಯನ್ನು ಕೈಗೊಂಡು ಜೀವನ ನಡೆಸಿ ಎಂದು ಕಿವಿಮಾತು ಹೇಳಿದರು.
ಇದೇ ವೇಳೆ ಗ್ರಾಮ ಪಂಚಾಯಿತಿ ವತಿಯಿಂದ ಅಂಗವಾಡಿಗಳಿಗೆ ವಿವಿಧ ಸಾಮಾಗ್ರಿಗಳನ್ನು ವಿತರಿಸಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮಿತ್ರಾ ಮಾದಪ್ಪ, ಅವರು, ಉಪಾಧ್ಯಕ್ಷೆ ಪ್ರಭಾ ಅವರು, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸಿ.ಕೃಷ್ಣ ಅವರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆ.ರುಕ್ಮಾಂಗದ ಅವರು, ಮಾಜಿ ಅಧ್ಯಕ್ಷ ಬಸವರಾಜು, ಎಪಿಎಂಸಿ ಸದಸ್ಯ ಕೋಟೆಹುಂಡಿ ಮಹದೇವು ಸೇರಿದಂತೆ ಸದಸ್ಯರು ಉಪಸ್ಥಿತರಿದ್ದರು.