ಮನೆ ಸ್ಥಳೀಯ ಕುಂಬಾರಕೊಪ್ಪಲು ಸ್ಮಶಾನದ ಸಮಗ್ರ ಅಭಿವೃದ್ಧಿಗೆ ಶಾಸಕ ಕೆ. ಹರೀಶ ಗೌಡ ಸೂಚನೆ

ಕುಂಬಾರಕೊಪ್ಪಲು ಸ್ಮಶಾನದ ಸಮಗ್ರ ಅಭಿವೃದ್ಧಿಗೆ ಶಾಸಕ ಕೆ. ಹರೀಶ ಗೌಡ ಸೂಚನೆ

0

ಮೈಸೂರು: ಮೂಲಭೂತ ಸೌಕರ್ಯಗಳಾದ ಸ್ವಚ್ಛತೆ, ಕುಡಿಯುವ ನೀರು ಹಾಗೂ ಸಮರ್ಪಕ ನಿರ್ವಹಣೆಯಿಲ್ಲದೆ ಅವ್ಯವಸ್ಥೆಯ ಆಗಾರವಾಗಿರುವ ಕುಂಬಾರಕೊಪ್ಪಲು ಸ್ಮಶಾನದ ಸಮಗ್ರ ಅಭಿವೃದ್ಧಿಗೆ ಶಾಸಕ ಕೆ.ಹರೀಶ್ ಗೌಡ ತಾಕೀತು ಮಾಡಿದರು.

Join Our Whatsapp Group

ಚಾಮರಾಜ ವಿಧಾನಸಭಾ ಕ್ಷೇತ್ರದ ವಾರ್ಡ್ ನಂ.4 ರ ಹೆಬ್ಬಾಳು- ಲೋಕನಾಯಕನಗರದ ಆದಿತ್ಯ ಹೋಟೆಲ್ ರಸ್ತೆಯಿಂದ ಪಾದಯಾತ್ರೆ ಸ್ಮಶಾನದ ಅವ್ಯವಸ್ಥೆ ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕುಂಬಾರ ಕೊಪ್ಪಲು, ಹೆಬ್ಬಾಳು, ಲೋಕನಾಯಕನಗರ ಹಾಗೂ ಮಹದೇವಶ್ವರ ಬಡಾವಣೆಯ ನಿವಾಸಿಗಳ ಬಳಕೆಗೆ ಸ್ಮಶಾನ ಉಪಯುಕ್ತವಾಗಿದೆ. ಆದರೆ, ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಸ್ವಚ್ಛತೆ ಹಾಗೂ ಸಮರ್ಪಕೆ ನಿರ್ವಹಣೆ ಇಲ್ಲದಿರುವುದನ್ನು ಸರಿಪಡಿಸಬೇಕು, ಜೊತೆಗೆ ಸ್ಮಶಾನದ ಅಭಿವೃದ್ಧಿಗೆ ಕ್ರಿಯಾಯೋಜೆನೆ ತಯಾರಿಸುವಂತೆ ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರಿಗೆ ಸೂಚನೆ ನೀಡಿದರು. ಪುಂಡರ ಹಾವಳಿ ತಪ್ಪಿಸಲು ಉದ್ಯಾನವನ ಹಾಗೂ ಸ್ಮಶಾನ ಭಾಗದಲ್ಲಿ ರಾತ್ತಿ ಗಸ್ತು ಹೆಚ್ಚಿಸುವಂತೆ ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು. ಲೋಕನಾಯಕನಗರ ಪಕ್ಕದ ರಸ್ತೆಯಲ್ಲಿ ವಿದ್ಯುತ್ ಕಂಬಗಳು ಅವೈಜ್ಞಾನಿಕವಾಗಿದ್ದು ಅದನ್ನು ಸ್ಥಳಾಂತರಕ್ಕೆ ಹೇಳಿದರು. ಖಾತೆ, ಮನೆ ಹಾಗೂ ನೀರಿನ ಕಂದಾಯ ಸಮಸ್ಯೆಗಳ ಇತ್ಯರ್ಥಕ್ಕೂ ನಿರ್ದೇಶನ ನೀಡಿದರು.

ಪರ್ಯಾಯಕ್ಕೆ ಸೂಚನೆ: ಬಸವನಗುಡಿಯ ಡಾ.ಸುಧಾಮೂರ್ತಿ ರಸ್ತೆಯಲ್ಲಿ 40 ಕ್ಕೂ ಹೆಚ್ಚು ತಳ್ಳುವಗಾಡಿ ಮುಖಾಂತರ ವ್ಯಾಪಾರ ಮಾಡುತ್ತಿರುವುದರಿಂದ ಪಾದಚಾರಿಗಳಿಗೆ ಹಾಗೂ ಸಂಚಾರಿಗಳಿಗೂ ತೊಂದರೆ ಆಗುತ್ತಿರುವ ಬಗ್ಗೆ ಸ್ಥಳೀಯರು ದೂರಿದರು. ಇದಕ್ಕೆ ಶಾಸಕರು ಯಾರಿಗೂ ತೊಂದರೆ ಆಗದ ರೀತಿ ರಸ್ತೆ ಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಸುವ್ಯವಸ್ಥಿತ ಮಾರಾಟಕ್ಕೆ ಅನುಕೂಲ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಇದೇ ವೇಳೆ ರಾಜಕಾಲುವೆ ಪಕ್ಕದ ಚಾಮುಂಡೇಶ್ವರಿ ದೇವಸ್ಥಾನ, ಲೋಕನಾಯಕನಗರದ ಅಡ್ಡ ರಸ್ತೆಗಳು, ವೆಂಕಟೇಶ್ವರ ಪಾತ್ರೆ ಅಂಗಡಿ ರಸ್ತೆ, ಡಾ.ಸುಧಾಮೂರ್ತಿ ರಸ್ತೆ, ಬೊಮ್ಮೂರು ಅಮ್ಮ ದೇವಾಸ್ಥಾನದ ರಸ್ತೆ, ಬಸವೇಶ್ವರ ನಗರ, ಆಶಾಮಂದಿರ ಹಾಗೂ ಬಸವನಗುಡಿ ಉದ್ಯಾನವನದಲ್ಲಿ ಸಾರ್ವಜನಿಕ ಸಭೆ ನಡೆಸಿ ಸಾರ್ವಜನಿಕರ ಸಮಸ್ಯೆಗಳನ್ನು ತಾಳ್ಮೆಯಿಂದಲೇ ಆಲಿಸಿದರು.

ನಗರಪಾಲಿಕೆ ಮಾಜಿ ಸದಸ್ಯರಾದ ಪೈಲ್ವಾನ್ ಶ್ರೀನಿವಾಸ್, ಬ್ಲಾಕ್ ಅಧ್ಯಕ್ಷ ರವಿ ಮಂಚೇಗೌಡನಕೊಪ್ಪಲು, ವಾರ್ಡ್ ಅಧ್ಯಕ್ಷ ಕೇಬಲ್ ನಾಗಣ್ಣ, ಮುಖಂಡರಾದ ಕೇಬಲ್ ಮಹೇಶ್, ಜಯರಾಮೇಗೌಡ, ಅಪ್ಪಾಜಿಗೌಡ, ಎಲೆಕ್ಟ್ರಿಕ್ ಪ್ರಕಾಶ್, ಟ್ರಾವೆಲ್ಸ್ ರವಿ, ಶಿವಮಾದೇಗೌಡ, ನಾಗೇಗೌಡ, ಅನಿಲ್, ಅರವಿಂದ್, ಚಿಲ್ಲಿ ದಿನೇಶ್, ಶ್ರೀನಿವಾಸ್, ಮನೋಹರ್, ನಾಗೇಶ್, ವೆಂಕಟೇಶ್, ರವೀಶ್, ರತ್ನಮ್ಮ, ಕಮಲಮ್ಮ ಸೇರಿ ಇನ್ನಿತರರು ಉಪಸ್ಥಿತರಿದ್ದರು.