ಬೆಂಗಳೂರು: ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ರಾಜೀನಾಮೆ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅದು ನಕಲಿ ಎಂದು ಶಾಸಕರ ಆಪ್ತಮೂಲಗಳು ಹಾಗೂ ಸ್ಪೀಕರ್ ಕಚೇರಿ ಸ್ಪಷ್ಟಪಡಿಸಿದೆ.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ರಕ್ಷಾ ರಾಮಯ್ಯಗಿಂತ ಬಿಜೆಪಿ ಅಭ್ಯರ್ಥಿ ಡಾ.ಕೆ. ಸುಧಾಕರ್ 1 ಮತ ಹೆಚ್ಚಿಗೆ ಪಡೆದರೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಪ್ರದೀಪ್ ಈಶ್ವರ್ ಭಾಷಣ ಮಾಡಿದ್ದರು. ಅಷ್ಟೇ ಅಲ್ಲದೆ, ತಮ್ಮ ಈ ಸವಾಲನ್ನು ಬಿಜೆಪಿ ಅಭ್ಯರ್ಥಿ ಸ್ವೀಕರಿಸಬೇಕು ಎಂಬ ಷರತ್ತು ಕೂಡ ಹಾಕಿದ್ದರು.
ಆದರೆ, ಅದಕ್ಕೆ ಸುಧಾಕರ್ ಯಾವುದೇ ಪ್ರತಿಕ್ರಿಯೆ ಕೊಟ್ಟಿರಲಿಲ್ಲ, ಸವಾಲು ಸ್ವೀಕಾರವನ್ನೂ ಮಾಡಿರಲಿಲ್ಲ. ಆದರೂ “ಒಂದು ಮತ ಹೆಚ್ಚಿಗೆ ಪಡೆದರೆ ರಾಜೀನಾಮೆ ನೀಡುತ್ತೇನೆ’ ಎನ್ನುವ ಹೇಳಿಕೆಯನ್ನಷ್ಟೇ ಜಾಲತಾಣದಲ್ಲಿ ವೈರಲ್ ಮಾಡಿದ್ದು, ಟ್ರೋಲ್ ಮಾಡಲಾಗಿತ್ತು. ಅವರ ಲೆಟರ್ ಹೆಡ್ ನಂತೆ ಬೇರೊಂದು ಲೆಟರ್‌ಹೆಡ್ ಸಿದ್ಧಪಡಿಸಿ, ರಾಜೀನಾಮೆ ಬರೆದು ಸ್ಪೀಕರ್ ಗೆ ಸಲ್ಲಿಸಿದಂತೆ ಹರಿಬಿಡಲಾಗಿತ್ತು.