ಬೆಂಗಳೂರು (Bengaluru): ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ವಿರುದ್ಧವಾಗಿ ಕಾಂಗ್ರೆಸ್ ಪಕ್ಷಕ್ಕೆ ಅಡ್ಡಮತ ಹಾಕಿರುವ ಕೋಲಾರ ಶಾಸಕ ಶ್ರೀನಿವಾಸ ಗೌಡ ಅವರ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶ್ರೀನಿವಾಸ್ ಗೌಡ ಅವರು ಕಾಂಗ್ರೆಸ್ ಗೆ ಮತ ಹಾಕುವ ನಿರ್ಧಾರ ಮಾಡಿದ್ದಾರೆ ಅಂತ ನಾನು ಮೊದಲೇ ಹೇಳಿದ್ದೆ. ನನ್ನ ಅನುಮಾನದಂತೆ ಅವರು ಪಕ್ಷಕ್ಕೆ ದ್ರೋಹ ಬಗೆದಿದ್ದಾರೆ. ಆ ಮನುಷ್ಯನಿಗೇನಾದರೂ ಮಾನ ಮರ್ಯಾರೆ ಇದ್ದರೆ ರಾಜೀನಾಮೆ ಕೊಟ್ಟು ಹೊರ ಹೋಗಿ ರಾಜಕಾರಣ ಮಾಡಲಿ ಎಂದು ಅವರು ಕಿಡಿಕಾರಿದರು.
ನಮ್ಮ ಪಕ್ಷದ ಚಿಹ್ನೆಯಿಂದ ಶ್ರೀನಿವಾಸಗೌಡ ಗೆದ್ದಿದ್ದಾರೆ. ಶಾಸಕ ಸ್ಥಾನ ಉಳಿಸಿಕೊಳ್ಳಬೇಕು ಅಂತ ಅವರು ಹೀಗೆ ಮಾಡೋದಾ? ತಮಗೆ ಮತ ಕೊಟ್ಟ ಕೋಲಾರ ಜನರಿಗೆ ಹಾಗೂ ಕಾರ್ಯಕರ್ತರಿಗೆ ಮಾಡಿರುವ ಅವಮಾನ ಇದು ಎಂದು ಅವರು ಹೇಳಿದರು.
ಅಡ್ಡಮತ ಹಾಕಿದ ಅವರ ವಿರುದ್ಧ ಪಕ್ಷ ಕ್ರಮ ಕೈಗೊಳ್ಳುವುದರಿಂದ ಏನು ಪ್ರಯೋಜನ ಇಲ್ಲ. ವಿಪ್ ಕೊಡುವುದು ಇದೆಲ್ಲಾ ಕಾಟಾಚಾರಕ್ಕೆ. ಕಾನೂನುಬಾಹಿರ ಚಟುವಟಿಕೆ ಮಾಡುವಂತವರಿಗೆ ಶಿಕ್ಷೆ ಕೊಡುವಂತ ಆಕ್ಟ್ ನನ್ನ ಪ್ರಕಾರ ಇಲ್ಲ. ಆ ಮನುಷ್ಯನಿಗೆ ಮಾನಮರ್ಯಾದೆ ಇದ್ದರೆ ರಾಜೀನಾಮೆ ಕೊಡಲಿ ಎಂದು ಅವರು ಕಿಡಿಕಾರಿದರು.
ನಮ್ಮ ಪಕ್ಷದ ಚಿಹ್ನೆಯಿಂದ ಗೆದ್ದು, ಕಾಂಗ್ರೆಸ್ ಜೊತೆಗೆ ಒಡನಾಟ ಇಟ್ಟುಕೊಂಡು ಯಾವ ನೈತಿಕತೆ ಇಟ್ಟುಕೊಂಡು ಜನರ ಮುಂದೆ ಹೋಗುತ್ತಾರೆ. ಆತ್ಮಸಾಕ್ಷಿ ಎಂದರೆ ಇದೇನಾ? ಎಂದು ಮಾಜಿ ಮುಖ್ಯಮಂತ್ರಿಗಳು ಪ್ರಶ್ನೆ ಮಾಡಿದರು.
ಪ್ರಜಾಪ್ರಭುತ್ವವನ್ಬ ಉಳಿಸಿ ಎನ್ನುವ ಸಿದ್ದರಾಮಯ್ಯ ಟ್ವೀಟ್ ಏನಿದೆ? ಇನ್ನೊಂದು ಪಕ್ಷದಿಂದ ಗೆದ್ದವರನ್ನ ಹೈಜಾಕ್ ಮಾಡಿ ಇಂತಹ ಕೀಳುಮಟ್ಟದ ರಾಜಕಾರಣ ಮಾಡುವುದು ಕಾಂಗ್ರೆಸ್ ಪಕ್ಷದ ಪ್ರಜಾಪ್ರಭುತ್ವವಾ? 2016ರಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದ ಸಂದರ್ಭದಲ್ಲಿ 8 ಜನ ಶಾಸಕರನ್ನು ಅಪಹರಿಸಿ ಕ್ರಾಸ್ ಓಟ್ ಮಾಡಿಸಿದರು. ಇವರು ಪ್ರಜಾಪ್ರಭುತ್ವ ಉಳಿಸುತ್ತಾರಾ ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ನಾಯಕರು ಕೀಳುಮಟ್ಟದ ರಾಜಕರಣ ಮಾಡುತ್ತಿದ್ದಾರೆ. ದೇಶದ ಸಂವಿಧಾನದ ಮೇಲೆ ಕಾಂಗ್ರೆಸ್ ನಾಯಕರಿಗೆ ಗೌರವ ಇದೆಯಾ? ಬಿಜೆಪಿಗಿಂತ ಕಾಂಗ್ರೆಸ್ ಪಕ್ಷದವರೇನು ಕಡಿಮೆ ಇಲ್ಲ. ಬಿಜೆಪಿ ನಾಯಕರು ಮಾಡುವ ಕೆಲಸಗಳನ್ನು ಇವರು ಕೂಡ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಅವರು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ನಾಯಕರು ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲು ಹಠಕ್ಕೆ ಬಿದ್ದಿದ್ದಾರೆ. ಶ್ರೀನಿವಾಸ ಗೌಡರ ಮತದಿಂದ ಬಿಜೆಪಿಯವರು ಗೆದ್ದರೆ ಸಂತೋಷ. ಆದರೆ ಇದು ಬಿಜೆಪಿ ಗೆಲ್ಲಿಸುವ ಆಟ. ಬಿಜೆಪಿಯನ್ನು ಗೆಲ್ಲಿಸಿ ಯಾವ ಮುಖ ಇಡ್ಕೊಂಡು ಕ್ಷೇತ್ರಕ್ಕೆ ಹೋಗುತ್ತಾರೆ ಇವರು ಎಂದ ಅವರು ನಿಮ್ಮ ಬೆಂಬಲ ಇಲ್ಲ ಅಂದರೂ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳನ್ನು ಎದರಿಸುವ ಶಕ್ತಿ ನಮ್ಮ ಕಾರ್ಯಕರ್ತರಿಗಿದೆ ಎಂದರು.
ಹಿಂದೆ ಫಾರೂಕ್ ಅವರು ರಾಜ್ಯಸಭೆ ಚುನಾವಣೆಗೆ ನಿಂತಾಗ ನಮ್ಮ ಪಕ್ಷದ ಎಂಟು ಶಾಸಕರು ಕ್ರಾಸ್ ವೋಟ್ ಮಾಡಿದ್ದರು. ನಂತರ ಆ ಚುನಾವಣೆಯಲ್ಲಿ ಗೆದ್ದ ಕೆ.ಸಿ.ರಾಮಮೂರ್ತಿ ಅವರು ಬಿಜೆಪಿಗೆ ಹೋದರು. ಆಗ ಅಡ್ಡಮತ ಮಾಡಿಸಿ ಕಾಂಗ್ರೆಸ್ ಗಳಿಸಿದ್ದೇನು? ಕಾಂಗ್ರೆಸ್ ನಾಯಕರಿಗೆ ಯಾವ ನೈತಿಕತೆ ಇಲ್ಲ. ಈಗ ಕಾಂಗ್ರೆಸ್ ಗೆದ್ದರೆ ಅದು ಕಾಂಗ್ರೆಸ್ ನಿಂದಲೆ. ಆ ಪಕ್ಷದ ನಿಜಬಣ್ಣ ಇನ್ನೇನು ಬಯಲಾಗಲಿದೆ ಎಂದು ಕುಮಾರಸ್ವಾಮಿ ಅವರು ಹೇಳಿದರು.