ಮನೆ ರಾಜಕೀಯ ರಾಜಕೀಯವಾಗಿ ನನಗೆ ವಿಷ ಹಾಕಿದ್ದೀರಿ, ದೇವೆಗೌಡರ ಸುದೀರ್ಘ ರಾಜಕೀಯ ಇತಿಹಾಸಕ್ಕೆ ಕೊಳ್ಳಿ ಇಟ್ಟವರು ಡಿ.ಕೆ ಶಿವಕುಮಾರ್:...

ರಾಜಕೀಯವಾಗಿ ನನಗೆ ವಿಷ ಹಾಕಿದ್ದೀರಿ, ದೇವೆಗೌಡರ ಸುದೀರ್ಘ ರಾಜಕೀಯ ಇತಿಹಾಸಕ್ಕೆ ಕೊಳ್ಳಿ ಇಟ್ಟವರು ಡಿ.ಕೆ ಶಿವಕುಮಾರ್: ಹೆಚ್‌.ಡಿ ಕುಮಾರಸ್ವಾಮಿ

0

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿಯಲ್ಲಿ ಅಸಮಾಧಾನ ಉಂಟಾಗಿದೆ ಎನ್ನಲಾಗಿತ್ತು. ಈ ಹಿನ್ನೆಲೆಯಲ್ಲಿ ಸುದ್ದಿಗೋಷ್ಟಿ ನಡೆಸಿದ ಹೆಚ್‌ ಡಿ ಕುಮಾರಸ್ವಾಮಿ ಅವರು ನೇರವಾಗಿ ಡಿ.ಕೆ ಶಿವಕುಮಾರ್ ಅವರನ್ನ ಟಾರ್ಗೆಟ್‌ ಮಾಡಿ ವಾಗ್ದಾಳಿ ನಡೆಸಿದ್ದಾರೆ.

ನಾನು ಆಸ್ಪತ್ರೆಗೆ ದಾಖಲಾಗಲು ಹೋಗುವ ಮುನ್ನ ಮೈತ್ರಿ ಬಗ್ಗೆ ಗೊಂದಲ ಆಗಬಾರದು ಎಂಬ ಕಾರಣಕ್ಕೆ ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತಿದ್ದೇನೆ ಎಂದು ಎಚ್​ಡಿ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.

ನಿನ್ನೆ ಮೊನ್ನೆಯ ಬೆಳವಣಿಗೆಯಲ್ಲಿ ಯಾವುದೇ ಗೊಂದಲ ಆಗಬಾರದು, ಇದಕ್ಕೆ ಕೆಲವು ಮಾಹಿತಿ ಕೊಟ್ಟು ಹೋಗಬೇಕು ಎಂದು ನಿಮ್ಮನ್ನ ಕರೆದಿದ್ದೀನಿ. ನಿನ್ನೆಯ ಕೋರ್ ಕಮಿಟಿಯಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಅಂತ ಚರ್ಚೆ ನಡೆಸಿದ್ದೇನೆ. ಸಂಪರ್ಕದ ಕೊರತೆ ಬಗ್ಗೆ ನಿನ್ನೆಯ ಸಭೆಯಲ್ಲಿ ಚರ್ಚೆಯಾಯ್ತು, ವಾಸ್ತವಾಂಶವನ್ನು ನಿಮ್ಮ ಗಮನಕ್ಕೆ ತಂದಿದ್ದೀನಿ. ನಾನು ಪ್ರಾರಂಭಿಕ ಹಂತದಿಂದ 3 ಸ್ಥಾನವನ್ನು ಕೇಳಿದ್ದೇವೆ. ಬಿಜೆಪಿ ಹೈಕಮಾಂಡ್ ಬಳಿ ಎಷ್ಟು ಸೀಟು ಅಂತ ಸ್ಪಷ್ಟತೆಯಿಲ್ಲ, ನನ್ನ ಮನವಿಯನ್ನು ಹೈಕಮಾಂಡ್ ಗೌರವಯುತವಾಗಿ ಕಂಡಿದೆ ಎಂದು ತಿಳಿಸಿದರು.

ಮೈತ್ರಿ ಕುರಿತಂತೆ ವ್ಯಂಗ್ಯ ಮಾಡಿದ್ದ ಡಿಕೆ ಶಿವಕುಮಾರ್ ​ಗೆ ತಿರುಗೇಟು ನೀಡಿದ ಎಚ್​​ ಡಿಕೆ, ಟ್ರಬಲ್ ಶೂಟರ್ ಹೇಳಿಕೆಯನ್ನು ಗಮನಿಸಿದ್ದೆನೆ. ಇಷ್ಟು ಬೇಗ ಆಗುತ್ತೆ ಅಂತ ನಿರೀಕ್ಷಿಸಲಿಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ನಾನು ಹೊಂದಾಣಿಕೆ ಮಾಡಿಕೊಳ್ಳಲು ಮೂಲ ಕಾರಣ ನೀವು, 2018 ರ ಸರ್ಕಾರ ಮಾಡಲು ನಾನು ಪಟ್ಟ ಶ್ರಮವನ್ನು ನೀವು ದುರ್ಬಳಕೆ ಮಾಡಿಕೊಂಡಿದ್ದಿರಿ. ಪ್ರಾಮಾಣಿಕವಾಗಿ ಆಗ ಸರ್ಕಾರದಲ್ಲಿ ನಾಡಿನ ಜನರ ಕಷ್ಟಕ್ಕೆ ಸ್ಪಂದಿಸಿದೆ. ನೀವೆ ಆಗ ಬನ್ನಿ ಬನ್ನಿ ಅಂತ ಕರೆದ್ರಿ, ಹಳೆ ಮೈಸೂರಲ್ಲಿ ನಾವು ಸದೃಢರಾಗಿದ್ದೆವು. ಆದರೆ ನಿಮ್ಮ ಕುತಂತ್ರದಿಂದ ಹೀಗಾಯ್ತು? ಬಿಜೆಪಿ ಜೊತೆ ಹೋಗಿ ಅಂತ ಸಲಹೆ ಕೊಟ್ಟಿದ್ದೆ ನೀವು, ಇವತ್ತಿಗೂ ನಮ್ಮ‌ಪಕ್ಷದ ಶಾಸಕರನ್ನ ಸೆಳೆಯಲು ಪ್ರಯತ್ನ ಮಾಡ್ತಿದ್ದೀರಿ. ನನ್ನನ್ನ ರಾಜಕೀಯವಾಗಿ ಮುಗಿಸಲು ನೀವು ಏನ್ ಮಾಡಿದ್ದೀರ ಎಂಬುದು ಗೊತ್ತಿದೆ ಎಂದು ಹೇಳಿದರು.

ರಾಜಕೀಯವಾಗಿ ನನಗೆ ವಿಷ ಹಾಕಿದ್ದಾರೆ. ನನ್ನನ್ನು ಮುಗಿಸಲು ಯತ್ನಿಸಿದ್ರು, ಆದ್ರೆ ಆಗ್ಲಿಲ್ಲ, ನಮ್ಮ ಪಕ್ಷ ನಾಶ ಮಾಡಲು ಹೊರಟರು. ನನ್ನ ಮುಗಿಸಲು ಹಂತಹಂತವಾಗಿ ನೀವು ಏನೇನ್ ಮಾಡಿದ್ದೀರಿ ಗೊತ್ತಿದೆ. ರಾಜಕೀಯವಾಗಿ ನನಗೆ ವಿಷ ಹಾಕಿದ್ದೀರಿ, ದೇವೆಗೌಡರ ಸುದೀರ್ಘ ರಾಜಕೀಯ ಇತಿಹಾಸಕ್ಕೆ ಕೊಳ್ಳಿ ಇಟ್ಟವರು ಡಿಕೆ ಶಿವಕುಮಾರ್ ಎಂದು ಹೆಚ್‍ಡಿಕೆ ಕಿಡಿಕಾರಿದರು.

ಡಿಕೆಶಿ ಅಧಿಕಾರ ದುರುಪಯೋಗ ಮಾಡ್ತಿದ್ದೀರಿ. ಅಧಿಕಾರಿಗಳಿಗೆ ಕಾಂಗ್ರೆಸ್ ಗೆಲುವಿಗೆ ಶ್ರಮಿಸುವಂತೆ ತಾಕೀತು ಮಾಡ್ತೀರಿ. ಬಿಜೆಪಿಯಲ್ಲಿ ನಿಮ್ಮ ತರ ನಮ್ಮನ್ನ ನಡೆಸಿಕೊಂಡಿಲ್ಲ. ನಿಮ್ಮ ತರ ಕುತ್ತಿಗೆ ಕುಯ್ಯುವ ಕೆಲಸ ಮಾಡಿಲ್ಲ. ಡಿಕೆ ಶಿವಕುಮಾರ್ ನಿಮ್ಮ ಅನುಕಂಪ ಬೇಕಿಲ್ಲ. ಬೆಂಗಳೂರು ಗ್ರಾಮಾಂತರ ಚುನಾವಣೆಯಲ್ಲಿ ಅಕ್ರಮ ಮಾಡಲು ಡಿಕೆಶಿ ಮಂದಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ಅಲ್ಲದೇ, ಕಳೆದ ಚುನಾವಣೆಯಲ್ಲಿ ನಿಮ್ಮ ಸಹೋದರನಿಗೆ ಪ್ರಾಮಾಣಿಕವಾಗಿ ಕೆಲಸ ಮಾಡದಿದ್ದರೆ ಸೋಲುತ್ತಿದ್ದರು. ಪ್ರಾಮಾಣಿಕವಾಗಿ ಸಹಕಾರ ಕೊಟ್ಟ ನಮಗೆ ನೀವು ಕೊಟ್ಟ ಬಳುವಳಿ ಏನು‌ ಶಿವಕುಮಾರ್? ಜೆಡಿಎಸ್ ಭದ್ರಕೋಟೆ ರಾಮನಗರದ ಬಿಲ ಕೊರೆಯಲು ಅವತ್ತು ನಮ್ಮ ಜೊತೆ ಸೇರಿದ್ರಿ ಎಂದು ಎಚ್​ಡಿಕೆ ವಾಗ್ದಾಳಿ ನಡೆಸಿದರು.

ಮೈತ್ರಿ ಸರ್ಕಾರ ತೆಗೆಯಲು ನಿಮ್ಮಗಳ ಪಾತ್ರ ಏನು ಗೊತ್ತು? ಡಿಕೆಶಿ ನಿಮ್ಮ ಅನುಕಂಪ ಬೇಕಿಲ್ಲ. ಬೆಂಗಳೂರು ಗ್ರಾಮಾಂತರದಲ್ಲಿ ಒಂದೆಡೆ ಅಧಿಕಾರ ದುರುಪಯೋಗ, ಮಜಲ್ ಪವರ್, ಹಣ ಬಲದಿಂದ ಗೆಲ್ಲಲು ಸಾಧ್ಯವಿಲ್ಲ ಎಂದು ಹೇಳಿದ ಎಚ್​ಡಿಕೆ, ಬೆಂಗಳೂರು ಗ್ರಾಮಾಂತರದಲ್ಲಿ ಮತದಾರರಿಗೆ ಹಂಚಲು ತಂದಿದ್ದ ಗಿಫ್ಟ್ ಬಾಕ್ಸ್‌ಗಳ ಫೋಟೋ ಹಾಗೂ ವಿಡಿಯೋಗಳನ್ನು ಬಿಡುಗಡೆ ಮಾಡಿದರು. ಕ್ಷೇತ್ರದಲ್ಲಿ 2.10 ಲಕ್ಷ ಕುಕ್ಕರ್‌ ಗಳನ್ನ ಹಂಚಲು ತಂದಿದ್ದಾರೆ. ಆದರೆ ಚುನಾವಣಾಧಿಕಾರಿಗಳು ಏನ್ ಮಾಡ್ತಿದ್ದಾರೆ. ಕೇಂದ್ರ ಚುನಾವಣಾ ಆಯೋಗ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಅಕ್ರಮದ ಬಗ್ಗೆ ಕ್ರಮ ಕೈಗೊಳ್ಳಬೇಕು ಕುಮಾರಸ್ವಾಮಿ ಹೇಳಿದ್ದಾರೆ.

ಹಿಂದಿನ ಲೇಖನವೈದ್ಯಾದಿಕಾರಿಗಳಿಗೆ ಮತದಾನ ಜಾಗೃತಿ ಕಾರ್ಯಕ್ರಮ
ಮುಂದಿನ ಲೇಖನಸಿಎಎಗೆ ಇಲ್ಲ ತಡೆ; ಅರ್ಜಿಗಳಿಗೆ 3 ವಾರಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ಕೇಂದ್ರಕ್ಕೆ ಸುಪ್ರೀಂ ಸೂಚನೆ