ನವದೆಹಲಿ: ಗೆಲ್ಲುವ ಶಕ್ತಿ ಇದ್ದರೆ ವಿಧಾನ ಪರಿಷತ್ ಸದಸ್ಯರನ್ನು ಕೂಡ ಅಭ್ಯರ್ಥಿ ಸ್ಥಾನಕ್ಕೆ ಪರಿಗಣಿಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.
ದೆಹಲಿಯಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಬಾರಿಯ ವಿಧಾನಸಭೆ ಚುನಾವಣೆಗೆ ಗೆಲ್ಲುವ ಮಾನದಂಡಗಳನ್ನು ನೋಡಿಕೊಂಡು ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತೇವೆ. ಬೇರೆ ಯಾವುದೇ ವಿಚಾರವನ್ನು ಪರಿಗಣಿಸುವುದಿಲ್ಲ ಎಂದು ಹೇಳಿದರು.
ಮೂರು ವರ್ಷದಿಂದ ಪಕ್ಷ ಕಟ್ಟಿದ್ದೇವೆ, ಯಾರ್ಯಾರು ಪಕ್ಷಕ್ಕಾಗಿ ಕೆಲಸ ಮಾಡಿದ್ದಾರೆ ಎಂದು ಗೊತ್ತಿದೆ ನಮಗೆ, ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮೊದಲು 8ರಿಂದ 10 ಬಾರಿ ಸರ್ವೆ ಮಾಡಿಸಿದ್ದೇವೆ, ಇಂದು ಸಂಜೆ ವೇಳೆಗೆ ತೀರ್ಮಾನವಾಗುತ್ತದೆ ಎಂದರು.
ನಾನು ಪೂಜಾರಿಯಷ್ಟೆ, ದೇವರಿಗೆ ಒಪ್ಪಿಸುವುದಷ್ಟೇ ನನ್ನ ಕೆಲಸ, ಯುವಕರಿಗೆ ಅವಕಾಶವಿರುವ ಕಡೆ ಟಿಕೆಟ್ ನೀಡುತ್ತೇವೆ. ಎಲ್ಲರಿಗೂ ಟಿಕೆಟ್ ನೀಡಿ ಸಮಾಧಾನಪಡಿಸಲು ಸಾಧ್ಯವಿಲ್ಲ. ಕೆಲವೊಮ್ಮೆ ಪಕ್ಷಕ್ಕಾಗಿ ನಾವು ತ್ಯಾಗ ಮಾಡಲು ಸಿದ್ಧರಿರಬೇಕಾಗುತ್ತದೆ. ಧರ್ಮಸಿಂಗ್, ಸಿದ್ದರಾಮಯ್ಯ ಸರ್ಕಾರದಲ್ಲಿ ನಾನು ಮಂತ್ರಿ ಆಗಿದ್ನಾ ಎಂದು ಡಿ ಕೆ ಶಿವಕುಮಾರ್ ಕೇಳಿದ್ದಾರೆ.
ನಮ್ಮ ಪಕ್ಷದಲ್ಲಿ ಫಾದರ್ ಅಂಡ್ ಸನ್ಸ್ ಬೇಕಾದಷ್ಟಿದ್ದಾರೆ. ಯುವಕರಿಗೆ, ಹೆಣ್ಣುಮಕ್ಕಳಿಗೆ ಸಹ ಪ್ರಾಧಾನ್ಯತೆ ನೀಡಲಾಗುವುದು ಎಂದರು.