ಮನೆ ಕಾನೂನು ಎಂ.ಎಂ.ಕಲಬುರ್ಗಿ, ಗೌರಿ ಲಂಕೇಶ್ ಹತ್ಯೆ ಪ್ರಕರಣಗಳ ವಿಚಾರಣೆ ವಿಳಂಬಕ್ಕೆ ಹೈಕೋರ್ಟ್ ಅಸಮಾಧಾನ

ಎಂ.ಎಂ.ಕಲಬುರ್ಗಿ, ಗೌರಿ ಲಂಕೇಶ್ ಹತ್ಯೆ ಪ್ರಕರಣಗಳ ವಿಚಾರಣೆ ವಿಳಂಬಕ್ಕೆ ಹೈಕೋರ್ಟ್ ಅಸಮಾಧಾನ

0

ಬೆಂಗಳೂರು: ಹಿರಿಯ ಸಂಶೋಧಕ ಎಂ.ಎಂ.ಕಲಬುರ್ಗಿ ಮತ್ತು ಗೌರಿ ಲಂಕೇಶ್ ಹತ್ಯೆ ಪ್ರಕರಣಗಳ ವಿಚಾರಣೆಗೆ ತ್ವರಿತಗತಿಯ ವಿಶೇಷ ನ್ಯಾಯಾಲಯ ಸ್ಥಾಪಿಸುವ ಸಂಬಂಧ ವಿಳಂಬ ನೀತಿ ಅನುಸರಿಸುತ್ತಿರುವ ಸರ್ಕಾರದ ಕ್ರಮಕ್ಕೆ ಹೈಕೋರ್ಟ್ ಸೋಮವಾರ ಮೌಖಿಕವಾಗಿ ಅಸಮಾಧಾನ ವ್ಯಕ್ತಪಡಿಸಿತು. ಎರಡೂ ಪ್ರಕರಣಗಳಲ್ಲಿ ಆರೋಪಿಗಳಾಗಿರುವ ವಾಸುದೇವ್ ಭಗವಾನ್ ಸೂರ್ಯವಂಶಿ ಹಾಗೂ ಅಮಿತ್ ಬಡ್ಡಿ ಎಂಬುವರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಎಂ.ಜಿ.ಉಮಾ ಅವರಿದ್ದ ಏಕಸದಸ್ಯ ಪೀಠ ನಡೆಸಿತು.

Join Our Whatsapp Group

ವಿಚಾರಣೆಯಲ್ಲಿ ಅರ್ಜಿದಾರರ ಪರವಾಗಿ ವಾದಿಸಿದ ಹಿರಿಯ ವಕೀಲ ಎಂ.ಅರುಣ್ ಶ್ಯಾಮ್, ಎಂ.ಎಂ. ಕಲಬುರ್ಗಿ ಅವರ ಕೊಲೆಗೆ ಬಳಸಲಾದ ವಾಹನ ಕಳವು ಮಾಡಲಾದ ಆರೋಪ ಮಾತ್ರ ಅರ್ಜಿದಾರರ ಮೇಲಿದೆ. ಆರೋಪಿಗಳು ಕಳೆದ ಆರು ವರ್ಷಗಳಿಂದ ಜೈಲಿನಲ್ಲಿದ್ದಾರೆ. ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲೂ ಆರೋಪಿಗಳ ಪಾತ್ರವಿದೆ ಎಂಬ ಆರೋಪವಿದೆ. ಇದರ ತ್ವರಿತ ವಿಚಾರಣೆಗಾಗಿ ವಿಶೇಷ ನ್ಯಾಯಾಲಯ ಆರಂಭಿಸುವುದಾಗಿ ರಾಜ್ಯ ಸರ್ಕಾರ ಹೇಳಿತ್ತು. ಆದರೆ, ಈವರೆಗೂ ಆ ಕೆಲಸವಾಗಿಲ್ಲ. ಕಲಬುರ್ಗಿ ಪ್ರಕರಣದಲ್ಲಿ 138 ಸಾಕ್ಷಿಗಳ ಪೈಕಿ ಕೇವಲ 10 ಸಾಕ್ಷ್ಯಗಳ ವಿಚಾರಣೆ ಮಾತ್ರ ಈಗ ಮುಗಿದಿದೆ. ಉಳಿದ ಸಾಕ್ಷಿಗಳ ವಿಚಾರಣೆ ಸದ್ಯಕ್ಕೆ ಮುಗಿಯುವ ಸಾಧ್ಯತೆ ಇಲ್ಲ. ಹೀಗಾಗಿ, ಅರ್ಜಿದಾರರಿಗೆ ಜಾಮೀನು ಮಂಜೂರು ಮಾಡಬೇಕು ಎಂದು ಕೋರಿದರು.

ಅಲ್ಲದೆ, 2019ರ ಜುಲೈ 14ರಂದು ತನಿಖಾಧಿಕಾರಿ ಆರೋಪಪಟ್ಟಿ ಸಲ್ಲಿಸಿದ್ದಾರೆ. ಇದುವರೆಗೆ 10 ಸಾಕ್ಷಿಗಳ ವಿಚಾರಣೆ ಮಾತ್ರ ನಡೆದಿದೆ. ವಿಚಾರಣೆಯ ನೆಪದಲ್ಲಿ ದೀರ್ಘಕಾಲ ಆರೋಪಿಗಳನ್ನು ಜೈಲಿನಲ್ಲಿಡಬಾರದು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ಗೌರಿ ಲಂಕೇಶ್ ಪ್ರಕರಣದಲ್ಲಿ ಈಗಾಗಲೇ ಹೈಕೋರ್ಟ್ ಮೂವರು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದೆ ಎಂದರು.

ಈ ವೇಳೆ ನ್ಯಾಯಪೀಠ, ಕಳೆದ ಮಾರ್ಚ್‌ನಲ್ಲಿ ಪ್ರಕರಣದಲ್ಲಿ ಆರೋಪಿಯೊಬ್ಬರಿಗೆ ಜಾಮೀನು ನಿರಾಕರಿಸುವ ಸಂದರ್ಭದಲ್ಲಿ ಪ್ರಾಸಿಕ್ಯೂಷನ್, ವಿಶೇಷ ನ್ಯಾಯಾಲಯ ಆರಂಭಿಸುವುದಾಗಿ ಹೇಳಿತ್ತು. ಈಗ ಜುಲೈ ಅಂತ್ಯ ಸಮೀಪಿಸುತ್ತಿದ್ದು, ಇದುವರೆಗೂ ವಿಶೇಷ ನ್ಯಾಯಾಲಯವೇಕೆ ಸ್ಥಾಪನೆಯಾಗಿಲ್ಲ ಎಂದು ಪ್ರಶ್ನಿಸಿತು. ಇದಕ್ಕೆ ಪ್ರಾಸಿಕ್ಯೂಷನ್ ಪರ ವಿಶೇಷ ಸರ್ಕಾರಿ ಅಭಿಯೋಜಕ ಅಶೋಕ್ ನಾಯಕ್, ಹೈಕೋರ್ಟ್‌ನಲ್ಲಿ ಸಂಬಂಧಿತರ ಜೊತೆ ಅಡ್ವೊಕೇಟ್ ಜನರಲ್ ಮಾತುಕತೆ ನಡೆಸಿದ್ದಾರೆ. ಮುಂದಿನ ವಿಚಾರಣೆ ವೇಳೆಗೆ ಈ ವಿಚಾರದ ಬಗೆಗಿನ ಮಾಹಿತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು. ಇದಕ್ಕೆ ಪೀಠ, ವಿಶೇಷ ನ್ಯಾಯಾಲಯ ಆರಂಭಿಸಿ, ನ್ಯಾಯಾಧೀಶರನ್ನು ನೇಮಿಸಿ ಅಧಿಸೂಚನೆ ಹೊರಡಿಸಲು ಸಲಹೆ ನೀಡಿತು.

ಸರ್ಕಾರದ ಪರ ವಾದ ಮಂಡಿಸಿದ ಎಸ್‌ಪಿಪಿ ಅಶೋಕ್ ನಾಯಕ್ ಅವರು ಅರ್ಜಿದಾರರು, ಕೊಲೆಯಂಥ ಹೀನ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಸೂರ್ಯವಂಶಿಯು ಅನಿಲ್ ಜೊತೆ ಸೇರಿ ಎರಡನೇ ಆರೋಪಿಯ ಸೂಚನೆಯಂತೆ ಹುಬ್ಬಳ್ಳಿಯಲ್ಲಿ ಬೈಕ್ ಕಳವು ಮಾಡಿದ್ದಾನೆ. ಅದನ್ನು ಕೊಲೆ ಕೃತ್ಯಕ್ಕೆ ಬಳಕೆ ಮಾಡಲಾಗಿದೆ. ಹೀಗಾಗಿ ಜಾಮೀನು ಮಂಜೂರು ಮಾಡಬಾರದು ಎಂದು ಕೋರಿದರು. ಅಲ್ಲದೆ, ಪ್ರಕರಣ ಸಂಬಂಧ ಮುಂದಿನ ವಾದ ಮಂಡಿಸಲು ಕಾಲಾವಕಾಶ ಕೋರಿದರು. ಈ ಅಂಶವನ್ನು ದಾಖಲಿಸಿಕೊಂಡ ಪೀಠ ವಿಚಾರಣೆ ಮುಂದೂಡಿತು.