ನವದೆಹಲಿ: ಭಾರತದಲ್ಲಿ ಈ ಬಾರಿ ಮುಂಗಾರು ಸಾಧಾರಣವಾಗಿರಲಿದ್ದು, ವಾಡಿಕೆಗಿಂತ ಕಡಿಮೆ ಮಳೆಯಾಗುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
ಎಲ್ ನಿನೊ ಪರಿಣಾಮದಿಂದಾಗಿ ಜೂನ್ ಮತ್ತು ಸೆಪ್ಟೆಂಬರ್ ತಿಂಗಳ ನಡುವಿನ ಮಾನ್ಸೂನ್ ಅವಧಿಯಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಬಹುದು. ಇದರಿಂದ ದೇಶದಲ್ಲಿ ಬರಗಾಲ ಎದುರಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
ಕೇಂದ್ರ ಕೃಷಿ ಸಚಿವಾಲಯದ ಪ್ರಕಾರ, ದೇಶದ ಒಟ್ಟಾರೆ ಕೃಷಿ ಉತ್ಪಾದನೆಯಲ್ಲಿ ಶೇ 40ರಷ್ಟು ಮಳೆ ಆಧಾರಿತವಾಗಿದೆ. ದೇಶದ ಜನಸಂಖ್ಯೆಯ ಶೇ.47ರಷ್ಟು ಜನರು ಕೃಷಿಯನ್ನೇ ತಮ್ಮ ಜೀವನೋಪಾಯಕ್ಕೆ ಅವಲಂಬಿಸಿದ್ದಾರೆ. ಹಾಗಾಗಿ ಭಾರತೀಯರಿಗೆ ಮುಂಗಾರು ಬಹು ಮುಖ್ಯವಾಗಿದೆ. ಏಪ್ರಿಲ್ 15ರ ನಂತರ ದೇಶದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗುವುದರಿಂದ ತಾಪಮಾನ ಹೆಚ್ಚಾಗಲಿದೆ. ಇದರಿಂದ ಜನರು ಬಿಸಿ ಗಾಳಿ ಹಾಗೂ ಹೆಚ್ಚು ತಾಪಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬಹುದು.
ದೇಶದ ಹವಾಮಾನ ಇಲಾಖೆ ಹಾಗೂ ಖಾಸಗಿ ಹವಾಮಾನ ಮುನ್ಸೂಚನೆ ಸಂಸ್ಥೆ ಸ್ಕೈಮೆಟ್ ವೆದರ್ ಕೂಡ ದೇಶದಲ್ಲಿ ಶೇ. 20ರಷ್ಟು ಬರಗಾಲದ ಸಾಧ್ಯತೆಯಿದೆ ಎಂದು ಹೇಳಿವೆ.