ಕೊಪ್ಪಳ: ಭಾರತೀಯ ಜನತಾ ಪಕ್ಷದ ಸರ್ಕಾರ ಕಳೆದ 10 ವರ್ಷಗಳಲ್ಲಿ 20 ಕೋಟಿ ಉದ್ಯೋಗಗಳನ್ನು ನೀಡಲು ವಿಫಲವಾಗಿದೆ. ಆದರೆ ಇನ್ನೂ ಮೋದಿ, ಮೋದಿ ಎಂದು ಹೊಗಳುವ ಯುವಕರಿಗೆ “ಕಪಾಳಮೋಕ್ಷ” ಮಾಡಬೇಕು ಎಂದು ಸಚಿವ ಶಿವರಾಜ್ ತಂಗಡಗಿ ಅವರು ಸೋಮವಾರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಇಂದು ಕಾರಟಗಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಶಿವರಾಜ್ ತಂಗಡಗಿ, ಪ್ರಧಾನಿ ಮೋದಿ ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದ್ದಾರೆ ಎಂದು ಆರೋಪಿಸಿದರು.
“ಬಿಜೆಪಿಯವರು ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದ್ದಾರೆ. ಪ್ರಧಾನಿ ಮೋದಿಯವರು ಯುವಕರಿಗೆ ಎರಡು ಕೋಟಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದರು. ಅವರು ಉದ್ಯೋಗ ನೀಡಿದ್ದಾರಾ? ಅವರಿಗೆ ನಾಚಿಕೆಯಾಗಬೇಕು. ಇನ್ನೂ ‘ಮೋದಿ ಮೋದಿ’ ಎಂದು ಜಪಿಸುತ್ತಿರುವ ಅವರ ಯುವ ಬೆಂಬಲಿಗರ ಕಪಾಳಕ್ಕೆ ಹೊಡೆಯಬೇಕು” ಎಂದು ತಂಗಡಗಿ ಕಿಡಿ ಕಾರಿದರು.
“ಇನ್ನೂ 5 ವರ್ಷಗಳ ಕಾಲ ಜನರನ್ನು ಮೂರ್ಖರನ್ನಾಗಿ ಮಾಡಬಹುದು ಎಂದು ಅವರು(ಬಿಜೆಪಿ) ಭಾವಿಸಿದ್ದಾರೆ. ಪ್ರಧಾನಿ ಮೋದಿ ಅವರು ಭಾರತದಲ್ಲಿ 100 ಸ್ಮಾರ್ಟ್ ಸಿಟಿಗಳ ಭರವಸೆ ನೀಡಿದರು. ಅವು ಎಲ್ಲಿವೆ? ಹೆಸರಿಸಿ ಪ್ರಧಾನಿ ಮೋದಿ ಸಮುದ್ರದ ಆಳಕ್ಕೆ ಹೋಗಿ ಅಲ್ಲಿ ಪೂಜೆ ಮಾಡುತ್ತಾರೆ. ಒಬ್ಬ ಪ್ರಧಾನಿ ಮಾಡಬೇಕಾದ ಕೆಲಸ ಇದೇನಾ?” ತಂಗಡಗಿ ಪ್ರಶ್ನಿಸಿದರು.
ಸಂಗಣ್ಣ ಕರಡಿ ಅವರಿಗೆ ಮೋಸ ಮಾಡಿದ್ದಾರೆ. ಸಂಸದ ಸಂಗಣ್ಣ ಅವರು ಮೋದಿ ಮೋದಿ ಎಂದು ಹೊಗಳಿದರು. ಪಾಪ ಒಳ್ಳೆಯ ಮನುಷ್ಯ ಅವರಿಗೆ ಟಿಕೆಟ್ ನೀಡದೆ ಮನೆಯಲ್ಲಿ ಕೂಡಿಸಿದ್ದಾರೆ. ಸಂಗಣ್ಣ ಕಣದಲ್ಲಿಲ್ಲದೇ ಇರುವದರಿಂದ ಈಗ ಕಾಂಗ್ರೆಸ್ ಅಭ್ಯರ್ಥಿ ರಾಜಣ್ಣ ಗೆದ್ದಂತೆ. ಕ್ಷೇತ್ರದಲ್ಲಿ ಎಲ್ಲಿ ನೋಡಿದರು ಕಾಂಗ್ರೆಸ್ ಪರ ಒಲವಿದೆ ಎಂದು ಸಚಿವರು ಹೇಳಿದರು.