ಬೆಂಗಳೂರು: ಮುಸ್ಲಿಮರಿಗೆ ರಂಜಾನ್ ಕಿಟ್ ಘೋಷಣೆ ಮಾಡಿರುವ ಮೋದಿ ಅವ್ರೇ, ಹಿಂದೂಗಳಿಗೆ ಯುಗಾದಿ ಕಿಟ್ ಯಾವಾಗ ಕೊಡ್ತೀರೀ? ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಪ್ರಶ್ನಿಸಿದ್ದಾರೆ.
ಸದಾ ಧರ್ಮದ ಆಧಾರದಲ್ಲಿ ರಾಜಕಾರಣ ಮಾಡುವ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಮುಸ್ಲಿಮರಿಗೆ ರಂಜಾನ್ ಕಿಟ್ ಕೊಟ್ಟಿರುವುದಕ್ಕೆ ಸ್ವಾಗತ. ಅದೇ ರೀತಿ ದೇಶದಲ್ಲಿರುವ ಎಲ್ಲ ಹಿಂದೂಗಳು ಯುಗಾದಿ ಕಿಟ್ ನಿರೀಕ್ಷೆಯಲ್ಲಿದ್ದಾರೆ. ನೀವು ಆದಷ್ಟು ಬೇಗ ಯುಗಾದಿ ಕಿಟ್ ಘೋಷಣೆ ಮಾಡಿ ಬಹುಸಂಖ್ಯಾತ ಹಿಂದೂಗಳ ಹಬ್ಬದ ಸಂಭ್ರಮವನ್ನು ಹೆಚ್ಚಿಸಿ ಎಂದು ಸಲಹೆ ನೀಡಿದ್ದಾರೆ.
ಧರ್ಮದ ಆಧಾರದಲ್ಲಿ ಚುನಾವಣೆ ಎದುರಿಸುತ್ತಾ ಮುಸ್ಲಿಂ ದ್ವೇಷ ಕಾರುವ ಬಿಜೆಪಿ, ಈಗ ಕಿಟ್ ಕೊಟ್ಟು ಮುಸ್ಲಿಮರ ಓಲೈಕೆಗೆ ಮುಂದಾಗಿದೆ. ಅದೇ ರಾಜ್ಯದಲ್ಲಿ ಬಿಜೆಪಿ ನಾಯಕರು ರಾಜ್ಯ ಬಜೆಟ್ ಅನ್ನು ಹಲಾಲ್ ಬಜೆಟ್ ಎಂದು ಟೀಕೆ ಮಾಡ್ತಾರೆ. ಇಂತಹ ಡಬಲ್ ಸ್ಟಾಂಡರ್ಡ್ ಮನಸ್ಥಿತಿಯನ್ನು ಬಿಜೆಪಿ ನಾಯಕರು ಬಿಟ್ಟರೆ ಒಳ್ಳೆಯದು ಎಂದಿದ್ದಾರೆ.
ನಮ್ಮ ಸರಕಾರ ಅಲ್ಪಸಂಖ್ಯಾತರು, ದಲಿತರು, ಹಿಂದುಳಿದ ವರ್ಗದವರು ಎಲ್ಲರ ಪರವಾಗಿ ಯೋಜನೆಗಳನ್ನು ರೂಪಿಸುತ್ತಿದೆ. ಇದನ್ನು ಸಹಿಸದ ಬಿಜೆಪಿ ನಾಯಕರು ನಮ್ಮ ಯೋಜನೆಗಳನ್ನು ಟೀಕೆ ಮಾಡ್ತಾರೆ. ಆದರೆ, ಒಂದು ಕಡೆ ಮುಸ್ಲಿಂ ದ್ವೇಷ ಹರಡುತ್ತಾರೆ. ಮತ್ತೊಂದು ಕಡೆ ಓಲೈಕೆ ಮಾಡ್ತಾರೆ. ಇಂತಹ ದ್ವಂದ್ವ ನೀತಿಯನ್ನು ಬಿಜೆಪಿ ದೇಶದಲ್ಲಿ ಬಿತ್ತುತ್ತಿದೆ ಎಂದು ಆರೋಪಿಸಿದ್ದಾರೆ.