ಮನೆ ರಾಜ್ಯ ರಾಜಕೀಯಕ್ಕೆ ಬರಲು ಮೋದಿ ಅವರ ಕೆಲಸ ಪ್ರೇರಣೆ: ಬಿಜೆಪಿ ಅಭ್ಯರ್ಥಿ ಯದುವೀರ್

ರಾಜಕೀಯಕ್ಕೆ ಬರಲು ಮೋದಿ ಅವರ ಕೆಲಸ ಪ್ರೇರಣೆ: ಬಿಜೆಪಿ ಅಭ್ಯರ್ಥಿ ಯದುವೀರ್

0

ಮೈಸೂರು: ನಾನು ರಾಜಕೀಯಕ್ಕೆ ಬರಲು ಮೋದಿ ಅವರ ಕೆಲಸ, ಕಾರ್ಯ ವೈಖರಿ ನನಗೆ ಪ್ರೇರಣೆ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ನುಡಿದರು.

ಮೈಸೂರು-ಕೊಡಗು ಲೋಕಸಭಾ ಚುನಾವಣೆ ಕಣ ರಂಗೇರಿದ್ದು, ಅಹಿಂದ ಮತಗಳ ಸೆಳೆಯಲು ಮುಂದಾಗಿರುವ ಬಿಜೆಪಿ ಮೈಸೂರಿನ ಖಾಸಗಿ ಸಮುದಾಯ ಭವನದಲ್ಲಿ  ಹಿಂದುಳಿದ ವರ್ಗಗಳ ಸಾಮಾಜಿಕ ಸಮ್ಮೇಳನ ಸಮಾವೇಶ ಆಯೋಜನೆ ಮಾಡಿತ್ತು.  ಕಾರ್ಯಕ್ರಮವನ್ನು ಮೈಸೂರು ಬಿಜೆಪಿ ಅಭ್ಯರ್ಥಿ ಯದುವೀರ್ ಉದ್ಘಾಟಿಸಿದರು.

ಸಮಾವೇಶದಲ್ಲಿ ಸಂಸದ ಪ್ರತಾಪ್ ಸಿಂಹ, ಶಾಸಕ ಟಿ.ಎಸ್ ಶ್ರೀವತ್ಸ, ಬಿಜೆಪಿ ನಗರಾಧ್ಯಕ್ಷ ಎಲ್ ನಾಗೇಂದ್ರ, ಗ್ರಾಮಾಂತರ ಜಿಲ್ಲಾಧ್ಯಕ್ಷ ಎಲ್. ಆರ್ ಮಹದೇವಸ್ವಾಮಿ, ಒಬಿಸಿ ಮೋರ್ಚಾ ರಾಜ್ಯಾಧ್ಯಕ್ಷ ರಘು ಕೌಟಿಲ್ಯಾ, ರಾಜ್ಯ ಬಿಜೆಪಿ ಉಪಾಧ್ಯಕ್ಷ ರಾಜೇಂದ್ರ, ಅಲ್ಪ ಸಂಖ್ಯಾತ ಮೋರ್ಚಾ ರಾಜ್ಯಾಧ್ಯಕ್ಷ ಅನಿಲ್ ಥಾಮಸ್, ಮಾಜಿ ಉಪಮೇಯರ್ ರೂಪ, ಸಂದೇಶ್ ಸ್ವಾಮಿ ಸೇರಿದಂತೆ ಅನೇಕರು ಭಾಗಿಯಾಗಿದ್ದರು. ಸಮಾವೇಶದಲ್ಲಿ ಮೈಸೂರು ಚಾಮರಾಜನಗರ ಎರಡು ಜಿಲ್ಲೆಯ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಬಿಜೆಪಿ ಅಭ್ಯರ್ಥಿ ಯದುವೀರ್, ನಾನು ಅಭ್ಯರ್ಥಿಯಾದ ಬಳಿಕ ಅನೇಕ ಪ್ರಶ್ನೆಗಳನ್ನ ಎದುರಿಸಬೇಕಾದ ಅನಿವಾರ್ಯತೆ ಬಂತು. ಮಹರಾಜರು ಯಾವ ಕಾರಣಕ್ಕೆ ರಾಜಕೀಯಕ್ಕೆ ಬಂದಿದ್ದಾರೆ ಅಂದರು.  ಇದೆಲ್ಲವನ್ನ ಹೊರತುಪಡಿಸಿ ಮೋದಿಯವರ ಕೆಲಸ ನಾನು ರಾಜಕೀಯಕ್ಕೆ ಬರಲು ಪ್ರೇರಣೆ, ಎಲ್ಲಾ ಸಮಸ್ಯೆಗಳಿಗೆ ಮೋದಿಯವರೇ ಪರಿಹಾರ. ಮೋದಿಯರವರ ಕೆಲಸ, ಕಾರ್ಯ ವೈಖರಿ ನಮಗೆಲ್ಲ ಸ್ಫೂರ್ತಿ ಎಂದರು.

ನಮ್ಮ ಅರಸು ಸಮುದಾಯ ಕೂಡ ಒಬಿಸಿ ಒಳಗಡೆ ಬರುತ್ತದೆ. ಕೆಲವರು ಮಹಾರಾಜರು ಅರಮನೆಯಿಂದ ಹೊರಗೆ ಬಂದು ಕೆಲಸ ಮಾಡುತ್ತಾರಾ ಎಂದರು. ನಾನೇ ಅರಮನೆಯಿಂದ ಆಚೆ ಬಂದಿದ್ದೇನೆ. ನನ್ನ ಕಚೇರಿಯನ್ನ ಸಹ ತೆರೆದಿದ್ದೇನೆ. ಅದು ನನ್ನ ಕಚೇರಿಯಲ್ಲ ನಿಮ್ಮ ಕಚೇರಿ ಅಂದುಕೊಳ್ಳಿ. ದಸರಾ ವೇಳೆ ಅರಮನೆ ಹಾಗೂ ದೇವಸ್ಥಾನಗಳಿಗೆ ಆಗಮಿಸಿ. ಯಾವುದೇ ಯಶಸ್ಸು ಸಿಕ್ಕರೂ ಅದು ನಿಮ್ಮ ಯಶಸ್ಸು ಎಂದು ಭಾವಿಸಿ ಎಂದು ಯದುವೀರ್ ಹೇಳಿದರು.