ಚಂಡೀಗಢ (Chandigarh)-ಪಂಜಾಬ್‌ನ ಮೊಹಾಲಿಯಲ್ಲಿರುವ ಪೊಲೀಸ್ ಗುಪ್ತಚರ ಇಲಾಖೆಯ ಕೇಂದ್ರ ಕಚೇರಿ ಮೇಲೆ ಗ್ರೆನೇಡ್ ದಾಳಿಯ ಹೊಣೆಯನ್ನು ಸಿಖ್ ಫಾರ್ ಜಸ್ಟಿಸ್ (ಎಸ್‌ಎಫ್‌ಜೆ) ಖಲಿಸ್ತಾನಿ ಉಗ್ರ ಸಂಘಟನೆ ಹೊತ್ತುಕೊಂಡಿದೆ.
ಅಲ್ಲದೆ, ಶಿಮ್ಲಾ ಪೊಲೀಸ್ ಕೇಂದ್ರ ಕಚೇರಿ ಮೇಲೂ ದಾಳಿ ಮಾಡುವ ಎಚ್ಚರಿಕೆ ನೀಡಿದೆ. ಎಸ್‌ಎಫ್‌ಜೆ ಉಗ್ರ ಸಂಘಟನೆ ಸಂಸ್ಥಾಪಕ ಗುರುಪತ್‌ವಂತ್ ಸಿಂಗ್ ಪನ್ನುನ್ ಧ್ವನಿ ಸಂದೇಶ ರವಾನಿಸಿದ್ದು, ಶಿಮ್ಲಾ ಪೊಲೀಸ್ ಕೇಂದ್ರ ಕಚೇರಿ ಮೇಲೂ ದಾಳಿ ನಡೆಸಲಾಗುವುದು. ಇದು ಮುಖ್ಯಮಂತ್ರಿ ಜೈರಾಮ್ ಠಾಕೂರ್ ಅವರಿಗೆ ನೀಡುತ್ತಿರುವ ಎಚ್ಚರಿಕೆ ಸಂದೇಶ ಎಂದಿದ್ದಾನೆ. ಆದಾಗ್ಯೂ, ಇದು ಪನ್ನುನ್ ಅವನ ಧ್ವನಿಯೇ ಎಂಬ ಕುರಿತು ಹೆಚ್ಚಿನ ತನಿಖೆ ನಡೆಸಿದ್ದಾರೆ.
ಸೋಮವಾರ ರಾತ್ರಿ ಮೊಹಾಲಿ ಕಚೇರಿ ದಾಳಿ ನಡೆಸಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 11 ಜನರನ್ನು ಬಂಧಿಸಿ ಅವರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಮತ್ತೊಂದೆಡೆ, ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಪಂಜಾಬ್ ಪೊಲೀಸ್ ಮಹಾ ನಿರ್ದೇಶಕ ವಿ.ಕೆ.ಭಾವ್ರಾ ಜತೆ ಸಭೆ ನಡೆಸಿದ್ದು, ಪ್ರಕರಣದ ಕುರಿತು ವರದಿ ನೀಡಲು ಸೂಚಿಸಿದ್ದಾರೆ. ಅಲ್ಲದೆ, ದಾಳಿ ಮಾಡಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.